ಮೈಸೂರು: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, MLA ಟಿಕೆಟ್ ಎಲ್ಲೆಡೆ ಸಿಕ್ಕಾಪಟ್ಟೆ ಲಾಬಿ ನಡೆಸಲಾಗುತ್ತಿದೆ. ಬಿಜೆಪಿಯ ಭದ್ರಕೋಟೆ ಮೈಸೂರಿನ ಕೆಆರ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಿಚಾರವಾಗಿ ಅಪಸ್ವರ ಕೇಳಿಬಂದಿದೆ.
ಕೆ.ಆರ್ ಕ್ಷೇತ್ರದಲ್ಲಿ ಶಾಸಕ ರಾಮದಾಸ್’ಗೆ ಬಿಜೆಪಿ ಟಿಕೆಟ್ ಬೇಡ. ಚುನಾವಣೆಯಲ್ಲಿ ರಾಮದಾಸ್ ಬದಲು ಬೇರೊಬ್ಬ ಬ್ರಾಹ್ಮಣರಿಗೆ ಟಿಕೆಟ್ ಕೊಡಿ ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್ ಆಗ್ರಹ ಮಾಡಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ರಾಮದಾಸ್ 6 ಬಾರಿ ಸ್ಪರ್ಧಿಸಿ 4 ಬಾರಿ ಗೆದ್ದಿದ್ದಾರೆ. ಕುಲ ಪ್ರೇಮದಿಂದಾಗಿ ರಾಮದಾಸ್ ರನ್ನು ಬೆಂಬಲಿಸಿದ್ದೇವೆ. ವಿಶ್ವಾಸ, ನಂಬಿಕೆ, ಪ್ರೀತಿ, ತೋರಿಸಿದರೂ ರಾಮದಾಸ್ ಸ್ಪಂದಿಸುತ್ತಿಲ್ಲ. ರಾಮದಾಸ್ ಬದಲು ಬೇರೆಯವರಿಗೆ ಬಿಜೆಪಿ ಟಿಕೆಟ್ ಕೊಡಿ ಎಂದು ಒತ್ತಾಯ ಮಾಡಿದ್ದಾರೆ .
ರಾಮದಾಸ್ ಸ್ಪಂದಿಸುತ್ತಿಲ್ಲ..
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ಎಸ್ ಎ ರಾಮದಾಸ್ ಬದಲು ಬೇರೊಬ್ಬ ಬ್ರಾಹ್ಮಣ ನಾಯಕರಿಗೆ ಟಿಕೆಟ್ ಕೊಡಬೇಕು. ಕೃಷ್ಣರಾಜ ಕ್ಷೇತ್ರದಲ್ಲಿ ಬಿಜೆಪಿಯಿಂದ ಒಬ್ಬ ಆದರ್ಶ, ಯೋಗ್ಯ, ಶಿಷ್ಟ, ಸಜ್ಜನ, ಸರಳ, ಸ್ಪಂದಿಸುವ, ಗೆಲ್ಲುವ, ಜನಪ್ರಿಯ ನೂತನ ಬ್ರಾಹ್ಮಣ ಅಭ್ಯರ್ಥಿಗೆ ಟಿಕೆಟ್ ನೀಡಿ ಬಿ ಫಾರಂ ನೀಡಬೇಕು. ಒಂದು ವೇಳೆ ಬಿಜೆಪಿಗೆ ರಾಮದಾಸ್ ಅನಿವಾರ್ಯವಾಗಿದ್ದರೆ ಅವರಿಗೆ ರಾಜ್ಯ ಅಥವಾ ರಾಷ್ಟ್ರ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸ್ಥಾನಮಾನ ನೀಡಿ ಅವರ ಸೇವೆಯನ್ನು ಬಳಸಿಕೊಳ್ಳಲಿ ಎಂದು ಬ್ರಾಹ್ಮಣ ಸಮುದಾಯದ ಮುಖಂಡರು ಆಗ್ರಹಿಸಿದರು. .ಕೃಷ್ಣರಾಜ ಕ್ಷೇತ್ರದಲ್ಲಿ 75 ಸಾವಿರ ಬ್ರಾಹ್ಮಣ ಮತದಾರರಿದ್ದಾರೆ.
ಹಾಗಾಗಿ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಮೂರು ಪಕ್ಷಗಳು ಬ್ರಾಹ್ಮಣ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು. ಆಗ ಆ ಮೂವರಲ್ಲಿ ಯೋಗ್ಯವಾದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಎಂದು ಮುಖಂಡರು ಆಗ್ರಹಿಸಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ನಟರಾಜ ಜೋಯಿಸ್, ಮೇಲುಕೋಟೆ ವಂಗೀಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ, ಮೈಸೂರು ವಿಪ್ರ ಮಹಿಳಾ ಸಂಗಮದ ಅಧ್ಯಕ್ಷೆ ಡಾ ಲಕ್ಷ್ಮಿ, ಮೈಸೂರು ಬ್ರಾಹ್ಮಣ ಧರ್ಮ ಸಹಾಯ ಸಭಾದ ಅಧ್ಯಕ್ಷ ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು..
ಕೆಆರ್ ಕ್ಷೇತ್ರ ಬಿಜೆಪಿ ಭದ್ರಕೋಟೆ..
ಕಳೆದ 30 ವರ್ಷದಿಂದ ಬಿಜೆಪಿ ಕೆಆರ್ ಕ್ಷೇತ್ರದಲ್ಲಿ ಹೆಚ್ಚು ಪ್ರಭಾವ ಹೊಂದಿದೆ . ಒಂದು ರೀತಿಯಲ್ಲಿ ಬಿಜೆಪಿ ಭದ್ರಕೋಟೆ ಅಂತಾನೆ ಈ ಕ್ಷೇತ್ರವನ್ನ ಪರಿಗಣಿಸಲಾಗುತ್ತೆ . ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಗೆ ಸಿಕ್ಕಾಪಟ್ಟೆ ಲಾಬಿ ಇದೆ. ಬಿಜೆಪಿ ಆಂತರಿಕ ಕಚ್ಚಾಟ ಕಾಂಗ್ರೆಸ್’ಗೆ ವರದಾನ ಆಗಲಿದೆ ಅಂತ ಕೂಡ ರಾಜಕೀಯ ಪಂಡಿತರು ವಿಶ್ಲೇಷಣೆ ಮಾಡ್ತಿದ್ದಾರೆ.