ನಮ್ಮ ಮೆಟ್ರೋ ಟಿಕೆಟ್ ದರವನ್ನು ಬೇಕಾಬಿಟ್ಟಿಯಾಗಿ ಏರಿಸಿದ ಬಳಿಕ, ಮೆಟ್ರೋ ಬಾಯ್ಕಾಟ್ ಮಾಡಲು ಮೆಟ್ರೋ ಪ್ರಯಾಣಿಕರ ಸಂಘಟನೆ ಸಿದ್ದತೆ ಮಾಡಿಕೊಂಡಿದೆ. ಮೆಟ್ರೋ ಟಿಕೆಟ್ ದರ ಏರಿಕೆ ಖಂಡಿಸಿ ಒಂದು ದಿನ ಅಥವಾ ಒಂದು ವಾರ ಮೆಟ್ರೋ ಹತ್ತದಿರಲು ಪ್ರಯಾಣಿಕರು ಪ್ಲಾನ್ ಮಾಡಿದ್ದಾರೆ. ಟಿಕೆಟ್ ದರ ಕಡಿಮೆ ಮಾಡಲು ಭಾನುವಾರದವರೆಗೆ ಗಡುವು ನೀಡಿರುವ ಮೆಟ್ರೋ ಪ್ರಯಾಣಿಕರ ವೇದಿಕೆ, ಭಾನುವಾರದೊಳಗೆ ಟಿಕೆಟ್ ದರ ಕಡಿಮೆ ಮಾಡಲಿಲ್ಲ ಅಂದರೆ ಮೆಟ್ರೋ ಬಾಯ್ಕಾಟ್ ಅಭಿಯಾನ ಶುರುವಾಗಲಿದೆ.

ಬುಧವಾರ ಸುದ್ದಿಗೋಷ್ಟಿ ನಡೆಸಿ ಭಾನುವಾರ ಸಮಾವೇಶ ನಡೆಸಲು ಸಂಘಟನೆ ತೀರ್ಮಾನ ಮಾಡಿದೆ. ಈ ಸಮಾವೇಶದಲ್ಲಿ ಮೆಟ್ರೋ ಬಾಯ್ಕಾಟ್ ದಿನಾಂಕ ಘೋಷಣೆ ಆಗಲಿದೆ. ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ನಡೆಯಲಿರುವ “ಮೆಟ್ರೋ ಪ್ರಯಾಣಿಕರ ಸಮಾವೇಶ”ದಲ್ಲಿ ಪ್ರತಿದಿನ ಟಿಕೆಟ್ ದರ ಏರಿಕೆ ಖಂಡಿಸಿ ಪ್ರಯಾಣಿಕರು ಆಕ್ರೋಶ ಹೊರಹಾಕಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗು ನಮ್ಮ ಮೆಟ್ರೋ ವಿರುದ್ದ ಕಿಡಿಕಾರಲಿದ್ದಾರೆ.

ನಾವು ಈಗಾಗಲೇ ಸಾವಿರಾರು ಪ್ರಯಾಣಿಕರ ಸಹಿ ಸಂಗ್ರಹ ಮಾಡಿ ಅಭಿಯಾನ ಮಾಡಿದ್ದೇವೆ. BMRCL ಎಂಡಿ ಅವರನ್ನು ಭೇಟಿ ಮಾಡಿ ದರ ಕಡಿಮೆ ಮಾಡಲು ಮನವಿ ಮಾಡ್ತಿವಿ. ನಮ್ಮ ಮನವಿಯನ್ನ ಕೇಳಲಿಲ್ಲ ಅಂದರೆ ನಮಗೆ ಬೇರೆ ದಾರಿಯಿಲ್ಲ. ಪಾಸ್‌ಗಳ ಬೆಲೆ ವಿಪರೀತವಾಗಿ ಏರಿಕೆ ಆಗಿದೆ. ಈ ಭಾನುವಾರ ಇಡೀ ಬೆಂಗಳೂರಿನ ನಾಗರೀಕರನ್ನು ಸೇರಿಸಿ ಸಮಾವೇಶ ಮಾಡ್ತಿವಿ. ನಿವಾಸಿಗಳ ಅಸೋಸಿಯೇಷನ್‌ಗಳು, ವಿದ್ಯಾರ್ಥಿ ಸಂಘಟನೆಗಳು, ಯುವಜನ ಸಂಘಟನೆಗಳು, ಮೆಟ್ರೋ ಪ್ರಯಾಣಿಕರು ಈ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದಿದ್ದಾರೆ.

ದಿನದಿಂದ ದಿನಕ್ಕೆ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗ್ತಿದೆ. ನಾಳೆಯಿಂದ ಕರಪತ್ರಗಳನ್ನು ಹಂಚಿಕೆ ಮಾಡ್ತಿವಿ. BMRCL ಸಾಲ ಇದೆ ಎಂದು ದರ ಏರಿಕೆ ಮಾಡಿದ್ಯಂತೆ. ಸಾಲದ ಹೊರೆಯನ್ನು ಪ್ರಯಾಣಿಕರ ಮೇಲೆ ಹಾಕುವುದು ಎಷ್ಟು ಸರಿ..? ಅನ್ನೋ ಪ್ರಶ್ನೆ ಎದ್ದಿದೆ. ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚವನ್ನು ಮಾತ್ರ ಪಡೆದುಕೊಳ್ಳಬೇಕು. ಇದರ ಆಧಾರದ ಮೇಲೆ ದರವನನ್ನ ಏರಿಕೆ ಮಾಡಬೇಕು . ಅದನ್ನು ಬಿಟ್ಟು ಬಡ್ಡಿ ಹೆಚ್ಚಾಗಿದೆ ಎಂದು ದರ ಹೆಚ್ಚಳ ಮಾಡುವುದು ಸರಿಯಲ್ಲ, ಇದು ಸಾರ್ವಜನಿಕ ಸಂಸ್ಥೆ, ಖಾಸಗಿ ಸಂಸ್ಥೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.