ಟಾಲಿವುಡ್ನ ಖ್ಯಾತ ನಿರ್ದೇಶಕ ಬೋಯಪಾಟಿ ಶ್ರೀನು ಮತ್ತು ನಟ ರಾಮ್ ಪೋತಿನೇನಿ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರದ ಮುಹೂರ್ತ ಇಂದು ಹೈದ್ರಾಬಾದ್ ನಲ್ಲಿ ನೆರವೇರಿದೆ.
ಭದ್ರ, ತುಳಸಿ, ಸಿಂಹ, ಲೆಜೆಂಡ್, ಸರೈನೋಡು, ಜಯಜಾನಕಿ ನಾಯಕ ಮತ್ತು ಇತ್ತೀಚೆಗಷ್ಟೇ ತೆರೆ ಕಂಡು ಬ್ಲಾಕ್ ಬಸ್ಟರ್ ಹಿಟ್ ಆದ ʻಅಖಂಡʼ ಚಿತ್ರಗಳನ್ನು ನಿರ್ದೇಶಿಸಿದ ಅನುಭವ ಬೋಯಾಪಟಿ ಶ್ರೀನುಗಿದೆ. ಇದು ಅವರ ನಿರ್ದೇಶನದ 10ನೇ ಚಿತ್ರವಾಗಿದ್ದು ಎಲ್ಲರ ನಿರೀಕ್ಷೆ ದುಪ್ಪಟ್ಟು ಮಾಡಿದೆ.
ಶ್ರೀನಿವಾಸ ಸಿಲ್ವರ್ ಸ್ಕ್ರೀನ್ಸ್ ಬ್ಯಾನರ್ ಅಡಿ ಶ್ರೀನಿವಾಸ ಚಿತ್ತೂರಿ ಚಿತ್ರವನ್ನ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಬೋಯಪಾತಿರಾಪೋ ಎಂಬ ತಾತ್ಕಾಲಿಕ ಹೆಸರನ್ನು ಇಡಲಾಗಿದೆ.

ಚಿತ್ರದ ನಾಯಕ ರಾಮ್ ಪೋತಿನೇನಿ ತೆಲುಗು ಚಿತ್ರರಂಗವಷ್ಟೇ ಅಲ್ಲದೆ ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟ. ಅವರ ಸಿನಿಮಾಗಳು ಹಿಂದಿ ಭಾಷೆಗೆ ಡಬ್ ಆಗಿ ಯೂಟ್ಯೂಬ್ನಲ್ಲಿ ಭಾರಿ ಜನಪ್ರಿಯತೆಗಳಿಸಿವೆ. ಬೋಯಪಾಟಿ ಶ್ರೀನು ನಿರ್ದೇಶನದಲ್ಲಿ ಆರಂಭವಾಗಿರುವ ಈ ಚಿತ್ರ ರಾಮ್ ಪೋತಿನೇನಿ ಅವರ 20 ನೇ ಚಿತ್ರ. ರಾಮ್ ಇತ್ತೀಚಿಗಷ್ಟೇ ಇದೇ ಬ್ಯಾನರ್ (ಶ್ರೀನಿವಾಸ ಸಿಲ್ವರ್ ಸ್ಕ್ರೀನ್ಸ್) ನಡಿ ತಯಾರಾದ ʻದಿ ವಾರಿಯರ್ʼ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದ್ದಾರೆ.
ಸದ್ಯ ಚಿತ್ರದ ಮೂಹೂರ್ತ ನೆರವೇರಿದ್ದು ನಾಯಕಿ, ತಾರಾಬಳಗ ಹಾಗು ತಾಂತ್ರಿಕ ವಿಭಾಗದ ಬಗ್ಗೆ ಆದಷ್ಟು ಬೇಗ ತಿಳಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ.