
ಹಾವೇರಿಯ ಕಾಲುವೆಯಲ್ಲಿ ಕೊಚ್ಚಿ ಹೋಗಿ ಬಾಲಕ ಮೃತಪಟ್ಟಿದ್ದಾನೆ. ಶಿವಾಜಿನಗರ ನಿವಾಸಿ 12 ವರ್ಷದ ಬಾಲಕ ನಿವೇದನ್ ನಾಪತ್ತೆ ಆಗಿದ್ದ. ಆ ಬಳಿಕ ಬಾಲಕನನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಲಾಯ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಹಾವೇರಿ ನಗರದ ಎಸ್ಪಿ ಕಚೇರಿ ಮುಂಭಾಗ ಅವಘಡ ಸಂಭವಿಸಿದೆ. ಆಟವಾಡುವಾಗ ಚರಂಡಿಯಲ್ಲಿ ಕೊಚ್ಚಿ ಹೋಗಿದ್ದ ಬಾಲಕನನ್ನು ಮೋರಿಯಿಂದ ಹೊರ ತೆಗೆಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಕೊನೆಯುಸಿರೆಳಿದ್ದಾನೆ.

ಬಾಲಕನ ಸಾವಿಗೆ ಸಂತಾಪ ಸೂಚಿಸಿರುವ ಡಿಸಿ ವಿಜಯ ಮಹಾಂತೇಶ್, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಡಿಸಿ ವಿಜಯ ಮಹಾಂತೇಶ್ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಸರ್ಕಾರದ ವೈಫಲ್ಯ ಎಂದು ಕಿಡಿಕಾರಿದ್ದಾರೆ.
ದಾವಣಗೆರೆಯಲ್ಲೂ ಸತತ ಮಳೆಯಿಂದ ಅವಾಂತರಗಳು ಸೃಷ್ಟಿಯಾಗುತ್ತಲೇ ಇದೆ. ಹರಿಹರ ನಗರದ ಜೈ ಭೀಮ್ ನಗರದಲ್ಲಿ ಮನೆ ಗೋಡೆ ಕುಸಿದಿದೆ. ಮನೆಯಲ್ಲಿದ್ದ 4 ವರ್ಷದ ಬಾಲಕಿ ಆಯೇಷಾ ಉಮ್ರಾ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡಿರುವ ಬಾಲಕಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.







