ಮೇಕೆದಾಟು ಯೋಜನೆ ಅನುಷ್ಠಾನಕ್ಕಾಗಿ ಕಾಂಗ್ರೆಸ್ ಹತ್ತು ದಿನಗಳ ಕಾಲ ಪಾದಯಾತ್ರೆ ಶುರು ಮಾಡಿದ್ದು, ಆಡಳಿತರೂಢ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ದಿನನಿತ್ಯ ಕಿಡಿಕಾರುತ್ತಿದ್ದಾರೆ ಈ ಕುರಿತು ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಜೋಳ ಮೂಲಕ ಬೊಮ್ಮಾಯಿ ನಿತ್ಯ ಒಂದೊಂದು ಸುಳ್ಳು ಹೇಳಿಕೆ, ಜಾಹಿರಾತು ಕೊಡಿಸುತ್ತಿದ್ದಾರೆ ಆರೋಪಿಸಿದ್ದಾರೆ.
ಕನಕಪುರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮಾತನಾಡಿ, ಮೊನ್ನೆ ನನಗೆ ಜ್ವರ ಇದ್ದದ್ದರಿಂದ ಪಾದಯಾತ್ರೆಯ ನಡುವೆಯೇ ವಿಶ್ರಾಂತಿಗೆ ಹೋಗಬೇಕಾಯ್ತು, ನಿನ್ನೆ ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ವೈದ್ಯರ ಸೂಚನೆ ಮೇರೆಗೆ ಅಗತ್ಯ ಚಿಕಿತ್ಸೆ ಪಡೆದು ಇಂದು ಮರಳಿದ್ದೇನೆ. ಕಳೆದೆರಡು ದಿನಗಳ ಕಾಲ ಪಾದಯಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇದಕ್ಕಾಗಿ ಡಿ.ಕೆ ಶಿವಕುಮಾರ್ ಅವರಿಗೂ, ಪಕ್ಷದ ಕಾರ್ಯಕರ್ತರಿಗೂ ಹಾಗೂ ಪಕ್ಷದ ಎಲ್ಲಾ ನಾಯಕರಿಗೂ, ಪಾದಯಾತ್ರೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇನೆ.
ಮೇಕೆದಾಟು ನಮ್ಮ ಕಾಂಗ್ರೆಸ್ ಸರ್ಕಾರದ ಯೋಜನೆ. ಈ ಯೋಜನೆ ಜಾರಿಯಾಗಬೇಕು ಎಂದು ಹೆಚ್ಚಿನ ಆಸಕ್ತಿ ವಹಿಸಿ ಡಿ.ಪಿ.ಆರ್ ಸಿದ್ಧಪಡಿಸಿದ್ದು ನಮ್ಮ ಸರ್ಕಾರ. ಆದರೆ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ನಿತ್ಯ ನಮ್ಮ ಬಗ್ಗೆ ಇಲ್ಲಸಲ್ಲದ ಸುಳ್ಳು ಆರೋಪ ಮಾಡುವ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
2008 ರಿಂದ 2013 ರ ವರೆಗೆ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇದ್ದರೂ ಮೇಕೆದಾಟು ಯೋಜನೆ ಬಗ್ಗೆ ಯಾವುದೇ ಆಸಕ್ತಿ ತೋರಿರಲಿಲ್ಲ. ನಾವು ಮೇ 2013 ರಲ್ಲಿ ಅಧಿಕಾರಕ್ಕೆ ಬಂದೆವು, ಸೆಪ್ಟೆಂಬರ್ ತಿಂಗಳಲ್ಲೇ ಮೇಕೆದಾಟು ಜಾರಿ ಆಗಬೇಕು ಎಂದು ಡಿ.ಪಿ.ಆರ್ ಸಿದ್ಧಪಡಿಸಿ ಕಾವೇರಿ ಜಲ ಮಂಡಳಿ ಎದುರು ಮಂಡಿಸಿದ್ದೆವು. ನಮ್ಮ ಡಿ.ಪಿ.ಆರ್ ರೂ. 6,912 ಕೋಟಿ ಇತ್ತು, ಸ್ವಾಧೀನ ಪಡಿಸಿಕೊಳ್ಳಬೇಕಾದ ಭೂಮಿಯ ಮೌಲ್ಯ 2019 ರಲ್ಲಿ ನಾಲ್ಕು ಪಟ್ಟು ಹೆಚ್ಚಾದ ಕಾರಣ ಮತ್ತೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರು ರೂ. 9,500 ಕೋಟಿಯ ಪರಿಷ್ಕೃತ ಡಿ.ಪಿ.ಆರ್ ಅನ್ನು ತಯಾರು ಮಾಡಿ ಸಿ.ಡಬ್ಲ್ಯೂ.ಸಿ ಗೆ ಕಳುಹಿಸಿದ್ದರು. ಇಷ್ಟೆಲ್ಲಾ ಮಾಡಿದ ಹೊರತಾಗಿಯೂ ಕಾಂಗ್ರೆಸ್ ಪಕ್ಷ ವಿಳಂಬ ಮಾಡಿತು ಎಂದು ಸುಳ್ಳು ಆರೋಪ ಮಾಡುವ ಕಾರಜೋಳ ಅವರು ಕಳೆದ ಎರಡುವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ ಎಂದು ಹೇಳಲಿ. ಬಸವರಾಜ ಬೊಮ್ಮಾಯಿ ಅವರು ಹಿಂದೆನಿಂತು ಕಾರಜೋಳ ಮೂಲಕ ನಿತ್ಯ ಒಂದೊಂದು ಸುಳ್ಳು ಹೇಳಿಕೆ, ಜಾಹಿರಾತು ಕೊಡಿಸುತ್ತಿದ್ದಾರೆ.
ರಾಜ್ಯದಲ್ಲಿ ನಾವು ಅಧಿಕಾರದಲ್ಲಿ ಇದ್ದಾಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇತ್ತು, ನಮಗೆ ಯೋಜನೆ ಜಾರಿಮಾಡಲು ಅನುಮತಿ ಸಿಗಲಿಲ್ಲ ಅಂತ ಬಿಡಬಹುದು, ಆದರೆ ಈಗ ಹಾಗಿಲ್ಲ. ಎರಡೂ ಕಡೆ ಬಿಜೆಪಿ ಸರ್ಕಾರ ಇದೆ, ಕೇಂದ್ರದಲ್ಲಿ ನೀರಾವರಿ, ಕಾನೂನು ಸಚಿವರು ನಿಮ್ಮವರೇ ಇದ್ದಾರೆ, ರಾಜ್ಯದಿಂದ 25 ಜನ ಸಂಸದರನ್ನು ಜನ ಬಿಜೆಪಿಯ ಸಂಸದರನ್ನು ಜನ ಆರಿಸಿ ಕಳುಹಿಸಿದ್ದಾರೆ. ಇನ್ನೂ ಯಾಕೆ ಯೋಜನೆ ಜಾರಿ ಮಾಡಿಲ್ಲ ಮಿಸ್ಟರ್ ಕಾರಜೋಳ?
ತಮಿಳುನಾಡಿನ ಹಸಿರು ನ್ಯಾಯಾಧೀಕರಣದವರು ಒಂದು ಕಮಿಟಿ ರಚನೆ ಮಾಡಿ, ಮೇಕೆದಾಟು ಯೋಜನೆಯ ಕಾಮಗಾರಿ ಆರಂಭವಾಗಿದೆಯೇ ಎಂದು ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶ ನೀಡಿತ್ತು. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಈ ಆದೇಶವನ್ನು ವಜಾಗೊಳಿಸಿದೆ. ಈಗ ಸುಪ್ರೀಂ ಕೋರ್ಟ್, ಹಸಿರು ನ್ಯಾಯಾಧೀಕರಣ, ಕಾವೇರಿ ನೀರು ನಿರ್ವಹಣಾ ಮಂಡಳಿಯಿಂದ ಯೋಜನೆಯ ಬಗ್ಗೆ ಯಾವುದೇ ತಕರಾರು ಇಲ್ಲ. ಹೀಗಿದ್ದರೂ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಈಗ ಪ್ರತಿಭಟನೆ ನಡೆಸುತ್ತಿದ್ದೇವೆ.
ಇಂದು ಮೈಸೂರು ಜಿಲ್ಲೆ ಹಾಗೂ ಇನ್ನಿತರ ಹನ್ನೊಂದು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಪಾದಯಾತ್ರೆಗೆ ಆಗಮಿಸಿದ್ದಾರೆ, ಹೀಗೆ ಮುಂದೆ ಹಾಸನ, ಮಂಡ್ಯ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರ ಸುತ್ತಮುತ್ತಲಿನ ಜನ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜನ ಸ್ವಯಂ ಪ್ರೇರಿತರಾಗಿ ನಮ್ಮೊಂದಿಗೆ ಅತ್ಯಂತ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ, ಇದು ಮೇಕೆದಾಟು ಯೋಜನೆಯ ಬಗ್ಗೆ ಜನರ ಆಸಕ್ತಿಯನ್ನು ತೋರಿಸುತ್ತದೆ.
ಕೊರೊನಾ ಇದೆ, ನಿಯಮ ಪಾಲನೆ ಮಾಡಿಲ್ಲ ಎಂದು ನಾನು ಸೇರಿದಂತೆ ಪಕ್ಷದ 30 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆಲ್ಲ ನಾವು ಹೆದರಲ್ಲ. ಹೀಗೆ ಕೇಸ್ ಹಾಕಿ ನಮ್ಮನ್ನು ಹೆದರಿಸಬಹುದು ಎಂದಕೊಂಡರೆ ಬಿಜೆಪಿಯವರಂತ ಮೂರ್ಖರು ಯಾರೂ ಇಲ್ಲ.
ಸಾವಿರಾರು ಜನ ಸೇರಿಸಿ ಪ್ರತಿಭಟನೆ ಮಾಡಿದ ಸುಭಾಷ್ ಗುತ್ತೇದಾರ ಅವರ ಮೇಲೆ ಕೇಸ್ ಹಾಕಿದ್ದೀರ ಬೊಮ್ಮಾಯಿ ಅವರೇ? ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಭಗವಂತ್ ಖೂಬಾ ಇವರೆಲ್ಲರ ಮೇಲೂ ಕೇಸ್ ಹಾಕಿದ್ದಾರಾ? ಗೃಹ ಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲೇ ದೊಡ್ಡ ಜಾತ್ರೆ ನಡೆಯಿತು, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಲ್ಕೈದು ಸಾವಿರ ಜನ ಸೇರಿಸಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮ ನಡೆಸಿದ್ರು, ಇವೆಲ್ಲಾ ಮಾಡುವಾಗ ಕೊರೊನಾ ಮೂರನೇ ಅಲೆ ಇರಲಿಲ್ಲ, ನಮ್ಮ ಪಾದಯಾತ್ರೆ ಇಂದ ಮಾತ್ರ ಕೊರೊನ ಹರಡುತ್ತಾ? ಇದರಿಂದ ಸರ್ಕಾರದ ದುರುದ್ದೇಶ ಗೊತ್ತಾಗುತ್ತೆ.
ನಾವು ಪಾದಯಾತ್ರೆ ಮಾಡಬಾರದು, ಜನ ಮೇಕೆದಾಟು ಯೋಜನೆಯ ಅಗತ್ಯತೆಯ ಬಗ್ಗೆ ಜಾಗೃತರಾಗಬಾರದು ಎಂಬುದು ಸರ್ಕಾರ ದುರುದ್ದೇಶ. ಬಿಜೆಪಿಯವರು ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಬಲವರ್ಧನೆಗಾಗಿ ಕರ್ನಾಟಕದ ಜನರಿಗೆ ದ್ರೋಹ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡಬಾರದು ಎಂದೇ ನಾವು ಪಾದಯಾತ್ರೆ ಹಮ್ಮಿಕೊಂಡಿದ್ದೇವೆ, ಈ ಪಾದಯಾತ್ರೆ ವಿಷಯದಲ್ಲಿ ಯಾವ ಪ್ರತಿಷ್ಠೆಯಾಗಲೀ, ಒಣ ಜಂಭವಾಗಲೀ ಇಲ್ಲ. ರಾಜ್ಯದ ಹಿತಾಸಕ್ತಿ ಅಷ್ಟೇ ಇದೆ.