ಇಡೀ ದೇಶವೇ ಮೆಚ್ಚಿದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನಮ್ಮದು. ನೂರಾರು ಪ್ರಶಸ್ತಿಗರಿ ಹೊತ್ತ ಸಂಸ್ಥೆಯೂ ಹೌದು. ಐರಾವತದಿಂದ ಅಂಬಾರಿವರೆಗೂ ಸೇವೆ ನೀಡಿದ ಪ್ರತಿಷ್ಟಿತ ಸಂಸ್ಥೆ ಕರ್ನಾಟಕದ್ದು. ಆದರೆ ಸದ್ಯ ಸಾರಿಗೆ ನಿಗಮಗಳ ಪರಿಸ್ಥಿತಿ, ಗುಜರಿ ಬಸ್ ಖರೀದಿಸಿ ನಿವೃತ ಡ್ರೈವರ್ ಕೈಲಿ ಬಸ್ ಓಡಿಸೋ ಹಂತಕ್ಕೆ ಬಂದು ತಲುಪಿದೆ.
ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ಒಂದು ಕಾಲದಲ್ಲಿ ಪೈಪೋಟಿಗೆ ಬಿದ್ದು ಬಸ್ ರಸ್ತೆಗಿಳಿಸ್ತಿದ್ವು. ಒಂದು ನಿಗಮ ವೋಲ್ವೋ ಬಸ್ ಇಳಿಸಿದ್ರೆ, ಇನ್ನೊಂದು ನಿಗಮ ಮಲ್ಟಿ ಆ್ಯಕ್ಸಲ್ ಬಸ್ ಇಳಿಸ್ತಿತ್ತು. ಇನ್ನೊಮ್ಮೆ ಅಂಬಾರಿ, ಮತ್ತೊಮ್ಮೆ ಐರಾವತ. ಇಂಥ ವೈಭವ ಕಂಡಿದ್ದ ನಿಗಮಗಳ ಸ್ಥಿತಿ ಸದ್ಯ ಗುಜರಿ ಬಸ್ ಖರೀದಿಸಿ ರಸ್ತೆಗಿಳಿಸೋ ಸ್ಥಿತಿಗೆ ಬಂದು ತಲುಪಿದೆ. ಬೆಂಗಳೂರಲ್ಲಿ ಓಡಿ ಓಡಿ ಸುಸ್ತಾಗಿ ಗುಜರಿ ಅಂಗಡಿ ಸೇರೋಕೆ ಹೊರಟಿದ್ದ ಬಸ್ಗಳನ್ನ ವಾಯುವ್ಯ ಸಾರಿಗೆ ಸಂಸ್ಥೆ ಈಗ ಖರೀದಿಗೆ ಮುಂದಾಗಿದೆ. ನಿಜ ಸದ್ಯ ಬೆಂಗಳೂರಲ್ಲಿ 9 ಲಕ್ಷ ಕಿಲೋಮೀಟರ್ ಓಡಿದ ಬಸ್ಗಳನ್ನ ಸ್ಕ್ರಾಪ್ ಮಾಡಬೇಕೆಂಬ ನಿಯಮವಿದೆ. ಹೀಗಾಗಿ ಸದ್ಯ 200 ಬಸ್ಗಳನ್ನ ಸ್ಕ್ರ್ಯಾಪ್ ಮಾಡೋಕೆ ಬಿಎಂಟಿಸಿ ಮುಂದಾಗಿತ್ತು. ಆದರೆ ಗುಜರಿ ಬಸ್ಗಳನ್ನ ಕೊಳ್ಳೋಕೆ ವಾಯುವ್ಯ ಸಾರಿಗೆ ಮುಂದಾಗಿದ್ದು ತಲಾ 50 ಸಾವಿರದಿಂದ 1 ಲಕ್ಷರೂಪಾಯಿ ಕೊಟ್ಟು 100 ಬಸ್ ಖರೀದಿಸೋಕೆ ನಿರ್ಧರಿಸಿದೆ. ಇವುಗಳನ್ನ ಗ್ರಾಮೀಣ ಭಾಗದಲ್ಲಿ ಬಳಸಿಕೊಳ್ಳೋಕೆ ಎನ್ ಡಬ್ಲ್ಯೂ ಕೆಆರ್ ಟಿಸಿ ನಿರ್ಧರಿಸಿದೆ.
ಇನ್ನೊಂದ್ಕಡೆ ಮೂರು ನಿಗಮಗಳಿಗೆ ಹಿರಿಯಣ್ಣನಂತಿರೋ ಕೆಎಸ್ಆರ್ಟಿಸಿ ಕಥೆಯೂ ಭಿನ್ನವೇನಿಲ್ಲ. ಸದ್ಯ ಕೋವಿಡ್ ಬಳಿಕ ಕೆಎಸ್ಆರ್ಟಿಸಿ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಹೀಗಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ಹೊಸ ನೌಕರರ ನೇಮಕಾತಿ ನಡೆದಿಲ್ಲ. ಈ ವೇಳೆ 300ಕ್ಕೂ ಹೆಚ್ಚು ನೌಕರರು ಮೃತಪಟ್ಟಿದ್ದು, 1000ಕ್ಕೂ ಅಧಿಕ ನೌಕರರು ನಿವೃತ್ತಿ ಹೊಂದಿದ್ದಾರೆ. ಇವರ ಸ್ಥಾನಕ್ಕೆ ಹೊಸಬರ ನೇಮಕಾತಿ ಕೈಬಿಟ್ಟಿರೋ ಕೆಎಸ್ ಆರ್ಟಿಸಿ ನಿವೃತ್ತ ನೌಕರರನ್ನ ಪುನಃ ಕೆಲಸಕ್ಕೆ ಆಹ್ವಾನಿಸಿದೆ. 63 ವರ್ಷದೊಳಗಿನ ನಿವೃತ್ತ ಡ್ರೈವರ್ಗಳು ಕೆಲಸಕ್ಕೆ ಹಾಜರಾದ್ರೆ ಗೌರವ ಧನ ನೀಡೋದಾಗಿ ಕೆಎಸ್ಆರ್ಟಿಸಿ ಪ್ರಕಟನೆ ಹೊರಡಿಸಿದೆ. ನಿಗಮದ ಈ ತೀರ್ಮಾನ ಭಾರಿ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ. ನೌಕರರು ನಿಗದಿತ ವಯಸ್ಸಿನ ಬಳಿಕ ನಿವೃತರಾಗೋದೆ ಅವರ ಫಿಟ್ನೆಸ್ ಕಡಿಮೆ ಆಗಿರುತ್ತೆ ಅಂತ. ಹೀಗಾಗಿ ವಯಸ್ಸಾದ ನೌಕರರನ್ನ ಪುನಃ ಕರೆದು ಬಸ್ ಓಡಿಸೋಕೆ ಬಿಟ್ರೆ ಪ್ರಯಾಣಿಕರ ಕಥೆ ಏನು.? ಅನಾಹುತವಾದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಸದ್ಯದ್ದು.
ಒಟ್ಟಿನಲ್ಲಿ ದೇಶಕ್ಕೆ ಮಾದರಿಯಾಗಿದ್ದ ರಾಜ್ಯದ ಸಾರಿಗೆ ನಿಗಮಗಳ ಸ್ಥಿತಿ ಗುಜರಿ ಹಂತಕ್ಕೆ ಬಂದು ತಲುಪಿದೆ. ಈ ಬಗ್ಗೆ ಗಮನಹರಿಸಬೇಕಾದ ಸಾರಿಗೆ ಸಚಿವರು ಮಾತ್ರ ಇಲಾಖೆಗೂ ನನಗೂ ಸಂಬಂಧವಿಲ್ವೇನೋ ಎಂಬಂತಿದ್ದಾರೆ. ಹೀಗಾಗಿ ಎಲ್ಲಾ ನಾಲ್ಕೂ ಸಾರಿಗೆ ನಿಗಮಗಳು ಶಾಶ್ವತವಾಗಿ ಬಾಗಿಲು ಮುಚ್ಚಿದ್ರೂ ಆಶ್ಚರ್ಯವೇನೂ ಇಲ್ಲ ಎಂಬ ಸ್ಥಿತಿಗೆ ಬಂದು ತಲುಪಿವೆ.