ಕಳೆದೊಂದು ತಿಂಗಳ ಹಿಂದೆ ಹದಿನೈದು ದಿನಗಳ ಅಂತರದಲ್ಲಿ ಚಲಿಸುತ್ತಿದ್ದ ಅಶೋಕ್ ಲೈಲೆಂಡ್ (Ashok Leyland) ಕಂಪನಿಯ ಬಿಎಂಟಿಸಿ ಬಸ್ ಗಳಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡಿತ್ತು. ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್ (Short Circuit) ನಿಂದ ಬೆಂಕಿ ಕಾಣಿಸಿಕೊಂಡಿದೆ ಅಂತ ಹೇಳಲಾಗಿತ್ತು. ಆದರೂ ವಾಸ್ತವತೆ ಅರಿಯುವ ನಿಟ್ಟಿನಲ್ಲಿ ನಿಗಮ, ತನ್ನ ತಾಂತ್ರಿಕ ತಜ್ಞರು, ಅಶೋಕ್ ಲೈಲೆಂಡ್ ಕಂಪನಿಯ ಪರಿಣಿತರನ್ನ ಒಳಗೊಂಡ ಸಮಿತಿನ್ನ ರಚನೆ ಮಾಡಿತ್ತು. ಆ ಸಮಿತಿ ಸುದೀರ್ಘ ತನಿಖೆ ನಡೆಸಿ ವರದಿಯನ್ನ ಬಿಎಂಟಿಸಿ ಎಂಡಿಗೆ ನೀಡಿದೆ. ಇದರಲ್ಲಿ ತನ್ನದೇ ತಪ್ಪಿನಿಂದಾಗಿ ಘಟನೆ ನಡೆದಿದೆ ಅನ್ನೋದು ಬೆಳಕಿಗೆ ಬಂದಿದೆ.
ತನಿಖಾ ವರದಿಯಲ್ಲಿನ (Invention Report) ಪ್ರಮುಖ ಅಂಶ
– ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಅಕ್ಕಪಕ್ಕ ಇರುವುದೇ ಕಾರಣ
– ಸಮರ್ಪಕ ನಿರ್ವಹಣೆ ಇಲ್ಲದ ಬೆಂಕಿ ಕಾಣಿಸಿಕೊಂಡಿದೆ
– ವಿನ್ಯಾಸ ದೋಷವೂ ಕೂಡ ಅಗ್ನಿ ಅನಾಹುತಕ್ಕೆ ಕಾರಣ
– ತಕ್ಷಣವೇ ವಿನ್ಯಾಸ ಬದಲಾವಣೆ ಮಾಡುವಂತೆಯೂ ಉಲ್ಲೇಖ

BMTC ಬಳಿ ಇದೆ ಒಟ್ಟು 189 ಮಿಡಿ ಬಸ್
ಸಾಮಾನ್ಯವಾಗಿ ಬಸ್ (BUS) ಗಳಲ್ಲಿ ಬಸ್ ನ ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಬೇರೆ ಬೇರೆ ಕಡೆಗಳಲ್ಲಿ ಇರುತ್ತೆ. ಆದರೆ ಅಶೋಕ್ ಲೈಲೆಂಡ್ ಗೆ ಸೇರಿದ ಮಿಡಿ ಬಸ್ ಕೇವಲ 9 ಮೀಟರ್ ಇರುವುದರಿಂದ ಬಸ್ ಒಳಭಾಗದಲ್ಲಿ ಜಾಗದ ಕೊರತೆ ಇರುವುದರಿಂದ ಸ್ಟಾರ್ಟರ್ ಹಾಗೂ ಡಿಸೇಲ್ ಪೈಪ್ ಅಕ್ಕಪಕ್ಕ ಇರುವಂತೆ ವಿನ್ಯಾಸ ಮಾಡಲಾಗಿದೆ. ಹೀಗಾಗಿ ಸ್ಟಾರ್ಟರ್ ಬಟನ್ ಒತ್ತಿದಾಗ ಅದರಿಂದ ಆದ ಶಾರ್ಟ್ ಸರ್ಕ್ಯೂಟ್ ನಿಂದ ಡಿಸೇಲ್ ಪೈಪ್ ನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಹಾಗೆನೇ ಸಮರ್ಪಕ ನಿರ್ವಹಣೆ ಮಾಡಬೇಕಾಗಿದ್ದ ನಿಗಮದ ಅಧಿಕಾರಿಗಳು ನಿರ್ವಹಣೆ ಮಾಡುವುದನ್ನೇ ಮರೆತುಬಿಟ್ಟಿದ್ದಾರೆ. ಇದಕ್ಕಿಂತ ಮುಖ್ಯವಾಗಿ ವಿನ್ಯಾಸ ದೋಷವೂ ಕೂಡ ಘಟನೆಗೆ ಕಾರಣ ಎನ್ನುವುದು ವರದಿಯಲ್ಲಿ ಗೊತ್ತಾಗಿದೆ. ಹೀಗಾಗಿ ಕೂಡಲೇ ಬಸ್ ನ ವಿನ್ಯಾಸ ಬದಲಾವಣೆ ಮಾಡುವಂತೆಯೂ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಸದ್ಯ ಬಿಎಂಟಿಸಿಯಲ್ಲಿ 189 ಮಿಡಿ ಗಳು ಸಂಚಾರ ಮಾಡುತ್ತಿವೆ. ಈ ಎಲ್ಲಾ ಬಸ್ ಗಳ ವಿನ್ಯಾಸವನ್ನ ಬದಲಾವಣೆ ಮಾಡಿ ಬಳಿಕ ರಸ್ತೆ ಮೇಲೆ ಇಳಿಸುವ ಕೆಲಸವನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರತಿ ಬಸ್ ಗೂ ಕನಿಷ್ಟ 20 ಸಾವಿರ ಖರ್ಚು ಮಾಡಿ ಮರು ವಿನ್ಯಾಸ ಮಾಡಬೇಕಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ನಿಗಮಕ್ಕೆ ಇದು ಮತ್ತೊಂದು ಹೊರೆ ಆಗುವುದರಲ್ಲಿ ಎರಡು ಮಾತಿಲ್ಲ.






