ನವದೆಹಲಿ: ಗಿಗ್ ಕಾರ್ಮಿಕರ ಮುಷ್ಕರ ಹಾಗೂ ಅವರ ಸುರಕ್ಷತೆ ಕುರಿತ ಗಂಭೀರ ಕಳವಳಗಳ ಹಿನ್ನೆಲೆಯಲ್ಲಿ ತ್ವರಿತ ವಿತರಣಾ ಸೇವೆ ನೀಡುತ್ತಿದ್ದ ಬ್ಲಿಂಕಿಟ್ (Blinkit) ತನ್ನ 10 ನಿಮಿಷಗಳಲ್ಲಿ ಹೋಂ ಡೆಲಿವರಿ ವ್ಯವಸ್ಥೆಯನ್ನು ಅಧಿಕೃತವಾಗಿ ಕೈಬಿಟ್ಟಿದೆ.

ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಮತ್ತು ಸುರಕ್ಷಿತ ಕೆಲಸದ ಪರಿಸರಕ್ಕೆ ಒತ್ತಾಯಿಸಿ ಡಿಸೆಂಬರ್ 31ರಂದು ಸ್ವಿಗ್ಗಿ, ಜೊಮ್ಯಾಟೋ, ಫ್ಲಿಪ್‌ಕಾರ್ಟ್, ಬ್ಲಿಂಕಿಟ್ ಸೇರಿದಂತೆ ವಿವಿಧ ಆನ್‌ಲೈನ್ ಡೆಲಿವರಿ ಪ್ಲಾಟ್‌ಫಾರ್ಮ್‌ಗಳ ಗಿಗ್ ಕಾರ್ಮಿಕರು ದೇಶವ್ಯಾಪಿ ಮುಷ್ಕರ ನಡೆಸಿದ್ದರು. ಈ ಮುಷ್ಕರ ವ್ಯಾಪಕ ಪರಿಣಾಮ ಬೀರುವುದಿಲ್ಲದಿದ್ದರೂ, ಕಾರ್ಮಿಕರ ಬೇಡಿಕೆಗಳು ಸರ್ಕಾರ ಹಾಗೂ ಕಂಪನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಗಿಗ್ ಕಾರ್ಮಿಕರು ವಿಶೇಷವಾಗಿ 10 ನಿಮಿಷಗಳ ಹೋಂ ಡೆಲಿವರಿ ರದ್ದುಗೊಳಿಸುವಂತೆ ಒತ್ತಾಯಿಸಿದ್ದರು. ಇಂತಹ ಕಡಿಮೆ ಸಮಯದ ವಿತರಣಾ ಗುರಿಗಳಿಂದಾಗಿ ಸವಾರರು ಅತಿಯಾದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ವೇಗದ ಚಾಲನೆ, ಟ್ರಾಫಿಕ್ ನಿಯಮ ಉಲ್ಲಂಘನೆ ಹಾಗೂ ಅಪಘಾತಗಳ ಅಪಾಯ ಹೆಚ್ಚುತ್ತಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು.

ಈ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅವರು ಬ್ಲಿಂಕಿಟ್, ಜೆಪ್ಟೊ, ಸ್ವಿಗ್ಗಿ ಮತ್ತು ಜೊಮಾಟೊ ಸೇರಿದಂತೆ ಪ್ರಮುಖ ಆನ್‌ಲೈನ್ ಡೆಲಿವರಿ ಕಂಪನಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಾರ್ಮಿಕರ ಜೀವ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕಟ್ಟುನಿಟ್ಟಾದ ವಿತರಣಾ ಸಮಯದ ಮಿತಿಗಳನ್ನು ತೆಗೆದುಹಾಕುವಂತೆ ಕಂಪನಿಗಳಿಗೆ ಅವರು ಸಲಹೆ ನೀಡಿದರು.

ಸಭೆಯ ನಂತರ ಬ್ಲಿಂಕಿಟ್ ತನ್ನ ಎಲ್ಲಾ ಬ್ರ್ಯಾಂಡ್ ಪ್ಲಾಟ್‌ಫಾರ್ಮ್‌ಗಳು, ಜಾಹೀರಾತುಗಳು ಹಾಗೂ ಸಾಮಾಜಿಕ ಮಾಧ್ಯಮಗಳಿಂದ 10 ನಿಮಿಷಗಳ ಡೆಲಿವರಿ ಬದ್ಧತೆಯನ್ನು ತೆಗೆದುಹಾಕಿರುವುದಾಗಿ ಘೋಷಿಸಿದೆ. ಜೊತೆಗೆ ಜೆಪ್ಟೊ, ಸ್ವಿಗ್ಗಿ ಮತ್ತು ಜೊಮಾಟೊ ಕಂಪನಿಗಳೂ ತಾವು ವಸ್ತುಗಳನ್ನು ತಲುಪಿಸುವ ಸಮಯವನ್ನು ಜಾಹೀರಾತುಗಳಲ್ಲಿ ತೋರಿಸುವುದಿಲ್ಲ ಎಂದು ಸರ್ಕಾರಕ್ಕೆ ಭರವಸೆ ನೀಡಿವೆ ಎಂದು ವರದಿಯಾಗಿದೆ.












