ಕೇರಳದ ಕೊಚ್ಚಿಯ ಕಲಮಶೇರಿಯಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ರೋಚಕ ತಿರುವು ಸಿಕ್ಕಿದ್ದು, ಸ್ಪೋಟ ನಡೆಸಿದ್ದು ನಾನೇ ಎಂದು ಡೊಮಿನಿಕ್ ಮಾರ್ಟಿನ್ ಎಂಬಾತ ಪೊಲೀಸರ ಮುಂದೆ ಶರಣಾಗಿದ್ದಾನೆ.
ಪೊಲೀಸರಿಗೆ ಶರಣಾರಾಗುವ ಮುನ್ನ ಫೇಸ್‌ಬುಕ್ ಲೈವ್ ಬಂದ ಡೊಮಿನಿಕ್ ಮಾರ್ಟಿನ್ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿದ್ದು, ಯಾಕಾಗಿ ಸ್ಪೋಟ ನಡೆಸಿದ್ದಾನೆ ಎಂದು ಘೋಷಿಸಿದ್ದಾನೆ.
ʼಯೆಹೋವನ ಸಾಕ್ಷಿಗಳುʼ 19 ನೇ ಶತಮಾನದಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಹುಟ್ಟಿಕೊಂಡ ಕ್ರಿಶ್ಚಿಯನ್ ಧಾರ್ಮಿಕ ಗುಂಪಾಗಿದ್ದು, ಇವರು ಯೇಸುವನ್ನು ದೇವರು ಎಂದು ನಂಬುವುದಿಲ್ಲ. ಬದಲಾಗಿ ಬಹುಸಂಖ್ಯಾತ ರೋಮನ್ ಕ್ಯಾಥೊಲಿಕ್‌ರಿಗಿಂತ ಭಿನ್ನವಾಗಿ, ಯಹೋವನಲ್ಲಿ ವಿಶ್ವಾಸ ಇಡುವ ಗುಂಪಾಗಿದ್ದು, ಪವಿತ್ರ ʼಟ್ರಿನಿಟಿʼ ಯನ್ನು ನಂಬುವುದಿಲ್ಲ.
ಈ ಪಂಗಡದ ಸಮಾವೇಶ ನಡೆಯುತ್ತಿರುವ ವೇಳೆ ನಡೆದ ಬಾಂಬ್ ಸ್ಪೋಟದಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದರು
ʼಯಹೋವನ ಸಾಕ್ಷಿಗಳುʼ ಎಂಬ ಕ್ರಿಶ್ಚಿಯನ್ ಪಂಗಡವು ರಾಷ್ಟ್ರ ವಿರೋಧಿ ಕಾರ್ಯದಲ್ಲಿ ತೊಡಗಿದೆ. ನಾನು ಕೂಡಾ ಆ ಪಂಗಡದ ಸದಸ್ಯನಾಗಿದ್ದೆ, ಪಂಗಡದ ರಾಷ್ಟ್ರದ್ರೋಹಿ ನಿಲುವಿನಿಂದ ಬೇಸತ್ತು ಅದರ ಸಮಾವೇಶದಲ್ಲಿ ಬಾಂಬ್ ಸ್ಪೋಟಿಸಿದೆ ಎಂದು ಎರ್ನಾಕುಲಂ ಮೂಲದ ಡೊಮಿನಿಕ್ ಮಾರ್ಟಿನ್ ಹೇಳಿದ್ದಾನೆ.
ಯಹೋವನ ಸಾಕ್ಷಿಗಳು ನಡೆಸುತ್ತಿದ್ದ ಕಾರ್ಯಕ್ರಮದಲ್ಲಿ ಬಾಂಬ್ ಸ್ಪೋಟಕ್ಕೆ ನಾನೇ ಕಾರಣ. 16 ವರ್ಷಗಳ ಕಾಲ ಈ ಸಂಘಟನೆಯೊಂದಿಗೆ ನಾನು ಗುರುತಿಸಿಕೊಂಡಿದ್ದೆ. ಆದರೆ, ಆರು ವರ್ಷಗಳ ಹಿಂದೆ ನನಗೆ ಈ ಸಂಘಟನೆಯ ಆಶಯಗಳು ತಪ್ಪು ಎಂದು ಮನವರಿಕೆ ಆಗ ತೊಡಗಿತು ಎಂದು ಆತ ಹೇಳಿಕೊಂಡಿದ್ದಾನೆ.
ತಾವು ಮಾತ್ರ ಶ್ರೇಷ್ಠ ಎಂದು ಪ್ರತಿಪಾದಿಸುವ ʼಯಹೋವನ ಸಾಕ್ಷಿಗಳುʼ ದೇಶದ ಉಳಿದವರೊಂದಿಗೆ ಸೇರಬಾರದು, ಅವರು ಕೊಡುವ ಆಹಾರ ಸೇವಿಸಬಾರದು ಎಂದು ಮಕ್ಕಳಿಗೆ ಕಲಿಸುತ್ತಿದ್ದಾರೆ. ಸಣ್ಣ ಮಕ್ಕಳ ಮೆದುಳಿಗೆ ವಿಷ ಉಣ್ಣಿಸುತ್ತಿದ್ದಾರೆ. ರಾಷ್ಟ್ರಗೀತೆ ಹಾಡಬಾರದು, ಸರ್ಕಾರಿ ಕೆಲಸಗಳು ಮಾಡಬಾರದು ಎಂದು ಮಕ್ಕಳಿಗೆ ಕಲಿಸುತ್ತಿದ್ದಾರೆ, ಅದೆಲ್ಲಾ ನಶಿಸಲ್ಪಟ್ಟ ಜನಾಂಗದ ಕೆಲಸ, ನಾವು ಮಾಡಬಾರದು ಎಂದು ಕಲಿಸುತ್ತಾರೆ. ನಮ್ಮನ್ನು ಬಿಟ್ಟು ಉಳಿದವರೆಲ್ಲರೂ ನಾಶವಾಗುತ್ತಾರೆ ಎಂದು ಇವರು ಮಕ್ಕಳಿಗೆ ಕಲಿಸುತ್ತಿದ್ದಾರೆ. ಕೋಟ್ಯಾಂತರ ಜನರ ನಾಶ ಬಯಸುವ ಇವರನ್ನು ಏನು ಮಾಡಬೇಕು? ಈ ಸಂಘಟನೆ ರಾಷ್ಟ್ರಕ್ಕೆ ಅಪಾಯಕಾರಿ ಎಂದು ನಾನು ಅರ್ಥ ಮಾಡಿಕೊಂಡ ಕಾರಣ ಈ ತೀರ್ಮಾನ ತೆಗೆದುಕೊಳ್ಳಬೇಕಾಯಿತು ಎಂದು ಆತ ಹೇಳಿಕೊಂಡಿದ್ದಾನೆ.
ಧರ್ಮದ ಬಗ್ಗೆ ಭಯ ಇರುವುದರಿಂದ ಇವರ ಬಗ್ಗೆ ಗೊತ್ತಿದ್ದೂ ರಾಜಕಾರಣಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮಗೆ ಅನ್ನ ಕೊಡುವ ಈ ದೇಶದ ಜನರನ್ನು ವೇಶ್ಯಾ ಸಮೂಹ ಎಂದೂ, ನಾಶವಾಗಲಿ ಎಂದೂ ಬಯಸುವುದು ಹಾಗೂ ನಾವು ಮಾತ್ರ ಉತ್ತಮರು ಎನ್ನುವ ನಂಬಿಕೆಯನ್ನು ನಾನು ವಿರೋಧಿಸುತ್ತೇನೆ. ಈ ಸಂಘಟನೆ ಇಲ್ಲಿ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾನೆ.
ಅಲ್ಲದೆ, ನಾನು ಪೊಲೀಸ್ ಠಾಣೆಗೆ ಹೋಗಿ ಶರಣಾಗುತ್ತೇನೆ. ನನ್ನನ್ನು ಹುಡುಕಿ ಬರಬೇಕಾಗಿಲ್ಲ. ಈ ಬಾಂಬ್ ಸ್ಪೋಟ ಹೇಗೆ ನಡೆಸಿದೆ ಎಂಬುದನ್ನು ಟೆಲಿಕಾಸ್ಟ್ ಮಾಡಬಾರದು. ಅದು ಬಹಳ ಅಪಾಯಕಾರಿ, ಯಾವುದೇ ಟಿವಿ ಚಾನೆಲ್ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಬಾರದು. ಸಾಮಾನ್ಯ ಜನರಿಗೆ ಆ ಮಾಹಿತಿ ಅಗತ್ಯವಿಲ್ಲ ಎಂದು ಆತ ಮನವಿ ಮಾಡಿದ್ದಾನೆ.