‘ವೋಟ್ ಚೋರಿ'(Vote Chor) ವಿರುದ್ಧ ಸರ್ವಜ್ಞನಗರ ಕ್ಷೇತ್ರದಲ್ಲಿ ಸಹಿ ಸಂಗ್ರಹ ಅಭಿಯಾನ. ಮುಂಬರುವ ಚುನಾವಣೆಗಳಲ್ಲಿ ಮತ ಖಾತರಿ ಬಗ್ಗೆ ಜನರಿಗೆ ಭರವಸೆ.

‘ವೋಟ್ ಚೋರಿ’ ಮೂಲಕ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿಯ ಅಧಿಕಾರ ದುರುಪಯೋಗದ ಬಗ್ಗೆ ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಿಕೊಡುವುದಾಗಿ ಇಂಧನ ಸಚಿವರೂ ಆಗಿರುವ ಸರ್ವಜ್ಞನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ (MLA Of Sarvagna Nagar KJ George) ಹೇಳಿದ್ದಾರೆ.

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಬಾಣಸವಾಡಿಯಲ್ಲಿ ಪ್ರದೇಶ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ‘ವೋಟ್ ಚೋರಿ’ (Vote Chor) ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ” ನಮ್ಮ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ‘ವೋಟ್ ಚೋರಿ’ ಬಗ್ಗೆ ಸಾಕ್ಷಿ ಸಮೇತ ಬಹಿರಂಗಗೊಳಿಸಿದ್ದಾರೆ. ರಾಹುಲ್ ಗಾಂಧಿ (Rahul Gandhi) ಅವರು ನೀಡಿರುವ ದಾಖಲೆಗಳಿಗೆ ಇದುವರೆಗೂ ಚುನಾವಣಾ ಆಯೋಗ ಗಂಭೀರವಾದ ಮತ್ತು ಸಮರ್ಪಕ ಉತ್ತರ ನೀಡಿಲ್ಲ,” ಎಂದು ಆರೋಪಿಸಿದರು.

“ಚುನಾವಣಾ ಆಯೋಗ ಮತ್ತು ಬಿಜೆಪಿಯ ಈ ಮತಗಳ್ಳತನದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ. ಸಹಿ ಸಂಗ್ರಹ ಅಭಿಯಾನ ಮುಂದುವರಿಯಲಿದೆ. ಮನೆ ಮನೆಗೆ ಹೋಗಿ ಬಿಜೆಪಿಯ ಅಧಿಕಾರ ದುರುಪಯೋಗದ ಬಗ್ಗೆ ಜನರಿಗೆ ತಿಳಿಸುತ್ತೇವೆ,” ಎಂದರು.
“ಕಳೆದ ಲೋಕಸಭೆ ಚುನಾವಣೆ ವೇಳೆ ಮಹದೇವಪುರ ವಿಧಾನಸಭಾ (Mahadevapura Constituency) ಕ್ಷೇತ್ರದಲ್ಲಿ ನಡೆದಿರುವ ಮತಗಳ್ಳತನ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಪ್ರಜಾಪ್ರಭುತ್ವಕ್ಕೇ ಮಾರಕ. ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಬಿಜೆಪಿಗೆ ಕರ್ನಾಟಕದಲ್ಲಿ ಯಾವತ್ತೂ ಜನಾದೇಶ ಸಿಕ್ಕಿಲ್ಲ. ಹೀಗಾಗಿ ವೋಟ್ ಕಳ್ಳತನವನ್ನೇ ಆಸರೆಯಾಗಿಟ್ಟುಕೊಂಡು ಅಧಿಕಾರಕ್ಕೆ ಬಂದಿದೆ,” ಎಂದು ಕಿಡಿ ಕಾರಿದರು.

“ಕಾಂಗ್ರೆಸ್ ಯಾವಾಗಲೂ ಜನಾದೇಶವನ್ನು ಗೌರವಿಸಿದೆ. ಹಿಂದೆ ಇಂದಿರಾ ಗಾಂಧಿ ಅವರು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದರೂ ಜನಾದೇಶಕ್ಕೆ ಮನ್ನಣೆ ನೀಡಿದ್ದರು. ಇದರ ಮಧ್ಯೆ ಚಿಕ್ಕಮಗಳೂರಿನ ಜನ ಇಂದಿರಾ ಅವರಿಗೆ ಶಕ್ತಿ ನೀಡಿ ಲೋಕಸಭೆಗೆ ಕಳುಹಿಸಿಕೊಟ್ಟರು,” ಎಂದು ಸಚಿವರು ಸ್ಮರಿಸಿದರು.
“ಜಾತಿ, ಧರ್ಮದ ಆಧಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುವುದಿಲ್ಲ. ನಮ್ಮದು ಅಭಿವೃದ್ಧಿ ಕೇಂದ್ರಿತ, ಹಿಂದುಳಿದವರನ್ನು ಮುನ್ನಲೆಗೆ ತರುವ ಬದ್ಧತೆಯ ರಾಜಕಾರಣ. ಕರ್ನಾಟಕದಲ್ಲಿ ಜಾರಿಯಾಗಿರುವ ಗ್ಯಾರಂಟಿ ಯೋಜನೆಗಳು ಯಾವುದೇ ಜಾತಿ- ಧರ್ಮದ ಆಧಾರದಲ್ಲಿ ಅಲ್ಲ. ಎಲ್ಲಾ ಸಮುದಾಯಗಳ ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಸೌಲಭ್ಯಗಳನ್ನು ನೀಡಲಾಗುತ್ತಿದೆ,” ಎಂದರು.

“ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ತಲಾ ಆದಾಯ ಸೂಚ್ಯಂಕದಲ್ಲಿ ನಾವೇ ಮೊದಲಿದ್ದೇವೆ. ಇದನ್ನು ಮತ್ತಷ್ಟು ಉತ್ತಮಪಡಿಸುವುದರೊಂದಿಗೆ ಎಲ್ಲಾ ಸಮುದಾಯದವರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡಲು ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಗಣತಿಗೆ ಎಲ್ಲರೂ ಸಹಕರಿಸಿದರೆ ಈ ಕೆಲಸ ಸುಗಮವಾಗಲಿದೆ,” ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ವಾಜೀದ್ (Abdul Vajid) ಮಾತನಾಡಿ, ” ಮತಗಳ್ಳತನದ ವಿರುದ್ಧ ಕಾಂಗ್ರೆಸ್ ಹೋರಾಟ ಆರಂಭಿಸಿದೆ. ಸಹಿ ಮಾಡಿ ಸುಮ್ಮನೆ ಇರುವುದಿಲ್ಲ, ಪ್ರತಿ ಮನೆಗೂ ಹೋಗಿ ವೋಟ್ ಚೋರಿ ಬಗ್ಗೆ ತಿಳಿಸಲಾಗುವುದು. ಅಲ್ಲದೆ, ಆಳಂದ ಕ್ಷೇತ್ರದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮನೆಯಲ್ಲಿ ಎಸ್ಐಟಿ ದಾಳಿ ವೇಳೆ ಸಿಕ್ಕಿದ ವೋಟರ್ ಐಡಿಗಳು ಬಿಜೆಪಿಯ ಮತಗಳ್ಳತನವನ್ನು ಬಯಲು ಮಾಡಿದೆ,” ಎಂದರು.

“ಸಚಿವ ಕೆ.ಜೆ.ಜಾರ್ಜ್ ಅವರ ಸೂಚನೆ ಮೇರೆಗೆ 10 ವಾರ್ಡ್‌ಗಳಲ್ಲಿ ಬೂತ್ ಮಟ್ಟದ ಕಮಿಟಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಹೋಗಿ 35,000 ಜನರ ಸಹಿ ಸಂಗ್ರಹಿಸಿದ್ದಾರೆ. ಸಹಿ ಸಂಗ್ರಹ ಅಭಿಯಾನ ಮುಂದುವರಿಯಲಿದೆ ಮುಂದಿನ ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆಯಲ್ಲೂ ನಾವು ಪ್ರತಿ ಮತವನ್ನೂ ಗ್ಯಾರಂಟಿಗೊಳಿಸುತ್ತೇವೆ. ಬಿಜೆಪಿಯ ಬೋಗಸ್ ವೋಟ್ ಪತ್ತೆ ಮಾಡಿ ಕ್ರಮಕ್ಕೆ ಆಗ್ರಹಿಸುತ್ತೇವೆ,” ಎಂದು ತಿಳಿಸಿದರು.

ಸಹಿ ಅಭಿಯಾನದಲ್ಲಿ ವಾರ್ಡ್ ಅಧ್ಯಕ್ಷರುಗಳಾದ ರಘು ದೇವರಾಜ್(Raghu Devaraj) , ಪುಲಕೇಶಿ (Pulakeshi), ಸುಮಿತ್ರ(Sumithra), ಮುಖಂಡರಾದ ಮೋಹನ್ ಮೆನನ್ (Mohan Menan) ಹಾಗೂ ಸಾವಿರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.