ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರು ಸ್ಪರ್ಧಿಸಲು ಬಯಸಿದ್ದು, ಬಿಜೆಪಿಯವರ ಚುನಾವಣಾ ತಂತ್ರಗಾರಿಕೆ ನಡೆಯುವುದಿಲ್ಲ. ಸಿದ್ದರಾಮಯ್ಯನವರ ಗೆಲುವು ನಿಶ್ಚಿತ ಎಂದು ಮಾಜಿ ಸಚಿವ ಡಾ.ಎಚ್.ಸಿ ಮಹದೇವಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲೆ ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಪ್ರಜಾ ಧ್ವನಿ ಯಾತ್ರೆಯ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಡಾ ಹೆಚ್ ಸಿ ಮಹದೇವಪ್ಪ ಭಾಗಿಯಾದರು.
ನಂಜನಗೂಡು ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯ ಯಶಸ್ಸಿಗೆ ಶ್ರಮಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದರು.
ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಪಕ್ಷದ ಕಾರ್ಯಕರ್ತರು ದುಡಿಯಬೇಕು. ಉಪ ಚುನಾವಣೆಯಲ್ಲಿ ಯಾವ ರೀತಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಶ್ರಮ ವಹಿಸಿದ್ದಿರೋ ಅದೇ ರೀತಿ ಈ ಬಾರಿಯ ಚುನಾವಣೆಯಲ್ಲೂ ಸಹ ಶ್ರಮವಹಿಸಿ ಎಂದು ಕಾರ್ಯಕರ್ತರಿಗೆ ಮಹದೇವಪ್ಪ ಮನವಿ ಮಾಡಿದರು.

ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಪ್ರಜಾ ಧ್ವನಿ ಯಾತ್ರಾ ಸಮಾವೇಶ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ವರುಣ ಕ್ಷೇತ್ರ, ಟಿ ನರಸೀಪುರ ಕ್ಷೇತ್ರ, ನಂಜನಗೂಡು ಕ್ಷೇತ್ರಗಳಲ್ಲಿ ಸಮಾವೇಶಕ್ಕೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಡಾ ಹೆಚ್ ಸಿ ಮಹದೇವಪ್ಪ ಮನವಿ ಮಾಡಿದರು.
ಕಾಂಗ್ರೆಸ್ ಶಕ್ತಿಯುತ..
ರಾಜ್ಯದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲಿದೆ. ಸ್ವಂತ ಬಲದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಬಿಜೆಪಿ ದುರಾಡಳಿತಕ್ಕೆ ರಾಜ್ಯದ ಜನರು ಬೇಸತ್ತಿದ್ದಾರೆ. ಜನರ ಕಷ್ಟ ಸುಖಗಳಿಗೆ ಸರ್ಕಾರ ಸ್ಪಂದಿಸುವ ಕೆಲಸ ಮಾಡ್ತಿಲ್ಲ. ಚುನಾವಣಾ ಹೊಸ್ತಿಲಲ್ಲಿ ಸರ್ಕಾರ ಯೋಜನೆ ಘೋಷಿಸುವ ನೆಪವೊಡ್ಡಿ ಜನರಿಗೆ ಮಂಕುಬೂದಿ ಎರಚುತ್ತಿದೆ. ಮುಂಬರುವ ಚುನಾವಣೆಯಲ್ಲಿ ಜನರೇ ಬಿಜೆಪಿ ನಾಯಕರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ರಚಿಸಲಿದೆ ಎಂದು ಹೇಳಿದರು.