ಕರ್ನಾಟಕ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ಹೀನಾಯವಾಗಿ ಸೋಲುವುದಕ್ಕೆ ನಳೀನ್ ಕುಮಾರ್ ಕಟೀಲ್ ಹಾಗು ಸಂಸದ ಸದಾನಂದಗೌಡ ಕಾರಣ ಎಂದು ಕರಾವಳಿಯಲ್ಲಿ ಪೋಸ್ಟ್ ಹಾಕಲಾಗಿತ್ತು. ಪೋಸ್ಟರ್ಗೆ ಚಪ್ಪಲಿ ಹಾರವನ್ನೂ ಹಾಕಿ ಛೀಮಾರಿ ಹಾಕಲಾಗಿತ್ತು. ಹಿಂದೂ ಸಂಘಟನೆಯ ಕಾರ್ಯಕರ್ತರು ಅನ್ನೋ ಹೆಸರಿನಲ್ಲಿ ಈ ಕೃತ್ಯ ನಡೆದಿತ್ತು. ಆ ಬಳಿಕ ಪುತ್ತೂರು ಬಿಜೆಪಿ ಘಟಕ ಪೊಲೀಸರಿಗೆ ದೂರು ನೀಡಿತ್ತು. ದೂರು ಪಡೆದ ಪೊಲೀಸರು 9 ಜನರನ್ನು ವಶಕ್ಕೆ ಪಡೆದಿದ್ದರು. ಒಂದು ದಿನ ಪೂರ್ತಿ ಪೊಲೀಸರು ಯುವಕರಿಗೆ ಲಾಠಿರುಚಿ ತೋರಿಸಿ ಬಿಟ್ಟು ಕಳುಹಿಸಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಅಸಲಿಗೆ ಆಗಿರುವುದಾದರೂ ಏನು ನೋಡಿ..

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗು ಮಾಜಿ ಸಿಎಂ ಸದಾನಂದಗೌಡ ಬಗ್ಗೆ ಅವಹೇಳನಾಕಾರಿ ಪೋಸ್ಟರ್ ಹಾಗಿದ್ದಕ್ಕೆ ಪುತ್ತೂರು ನಗರಸಭಾ ಆಯುಕ್ತ ಮಧು ಮನೋಹರ್ ಎಂಬುವರು ನೀಡಿದ್ದ ದೂರು ಆಧರಿಸಿ, ಪುತ್ತೂರು ಡಿವೈಎಸ್ಪಿ ನೇತೃತ್ವದಲ್ಲಿ 9 ಮಂದಿ ಹಿಂದೂ ಯುವಕರನ್ನು ಎಳೆದುಕೊಂಡು ಹೋಗಲಾಗಿತ್ತು ಎನ್ನಲಾಗಿದೆ. ಯುವಕರ ಮೈ ಕೈ ಮೇಲೆ ಬಾಸುಂಡೆ ಬೀಳುವಂತೆ ಹಿಗ್ಗಾಮುಗ್ಗಾ ಬಾರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು, ವೀಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಕಾಂಗ್ರೆಸ್ ಪಕ್ಷ ಇನ್ನೂ ಅಧಿಕೃತವಾಗಿ ಅಧಿಕಾರ ಹಿಡಿದಿಲ್ಲ, ಈ ಬಗ್ಗೆ ಯಾವುದೇ ಮಾಧ್ಯದಲ್ಲೂ ಸುದ್ದಿ ಪ್ರಸಾರ ಆಗಿಲ್ಲ. ಇದನ್ನೇ ಲಾಭ ಮಾಡಿಕೊಳ್ಳಲು ಮುಂದಾಗಿರುವ ಹಿಂದೂಪರ ಮುಖಂಡರು ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಯುವಕರ ಮೇಲೆ ಪೊಲೀಸರ ದರ್ಪ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ.

ಕಾಂಗ್ರೆಸ್ಗೂ ಘಟನೆಗೂ ಇರುವ ಲಿಂಕ್ ಆದರೂ ಏನು..?
ಕಾಂಗ್ರೆಸ್ ವಿರುದ್ಧ ಸೋಲಿನಿಂದ ಬೇಸತ್ತ ಬಿಜೆಪಿ ಕಾರ್ಯಕರ್ತರು ನಳೀನ್ ಕುಮಾರ್ ಕಟೀಲ್ ಹಾಗು ಸದಾನಂದಗೌಡರ ವಿರುದ್ಧ ಕತ್ತಿ ಮಸೆದಿದ್ದಾರೆ. ಒಂದು ಪೋಸ್ಟರ್ನಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಪೊಲೀಸರು ಭಾವಿಸುವುದು ಇಲ್ಲ, ಸ್ವಯಂ ಪ್ರೇರಿತ ದೂರನ್ನೂ ದಾಖಲು ಮಾಡಿಕೊಳ್ಳುವುದಿಲ್ಲ. ಆದರೆ ಉದ್ದೇಶ ಪೂರ್ವಕವಾಗಿ ನಳೀನ್ ಕುಮಾರ್ ಕಟೀಲ್ ಸೂಚನೆಯಂತೆ ಪೊಲೀಸರು ಎಳೆದೊಯ್ದು ಹಲ್ಲೆ ನಡೆಸಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ. ಆದರೆ ನಳೀನ್ ಕುಮಾರ್ ಕಟೀಲ್ ಕೂಡ ಕಾಂಗ್ರೆಸ್ ಸರ್ಕಾರದ ಕಡೆಗೆ ಬೊಟ್ಟು ಮಾಡಿದ್ದಾರೆ. ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಕೇಸ್ನಲ್ಲಿ ಪೊಲೀಸರ ವರ್ತನೆ ಇಲಾಖೆಗೆ ಕಪ್ಪು ಚುಕ್ಕೆ. ದೂರಿನ ಬಗ್ಗೆ ಪರಿಶೀಲಿಸಿ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳದೆ ಚಿತ್ರಹಿಂಸೆ ಕೊಟ್ಟಿರುವುದನ್ನು ಖಂಡಿಸುತ್ತೇನೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಉನ್ನತ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
‘ಕಟೀಲ್ ಹೇಳಿ ಮಾಡಿಸಿದ ಕೃತ್ಯ’ ಕಾರ್ಯಕರ್ತರ ಕಿಡಿ

ನಳೀನ್ ಕುಮಾರ್ ಕಟೀಲ್ ಟ್ವಿಟ್ಟರ್ನಲ್ಲಿ ತೇಪೆ ಸಾರಿಸುವ ಕೆಲಸ ಮಾಡಿದ್ದಾರೆ. ಪೊಲೀಸರಿಗೆ ಕಪ್ಪು ಚುಕ್ಕೆ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಟ್ಯಾಗ್ ಕೂಡ ಮಾಡಿಲ್ಲ. ಇನ್ನು ನಳೀನ್ ಕುಮಾರ್ ಕಟೀಲ್ ಅವರನ್ನು ಸಾಮಾಜಿಕ ಜಾಲತಾಣದಲ್ಲೇ ಕಾರ್ಯಕರ್ತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಜನರ ಮುಂದೆ ಸತ್ಯ ಒಪ್ಪಿಕೊಳ್ಳುವಂತೆ ದುಂಬಾಲು ಬಿದ್ದಿದ್ದಾರೆ. ಆದರೆ ಯಾವುದೇ ಹಿಡಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಚಕಾರ ಎತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕಿನಿಂದ ಘಟನೆ ನಡೆದಿದೆ ಎಂದು ಕೆಲವರು ಕಾಂಗ್ರೆಸ್ ಕಡೆಗೆ ಬೊಟ್ಟು ಮಾಡುತ್ತಿರುವ ಕಾರಣಕ್ಕಾದರೂ ಮುಂದಿನ ದಿನಗಳಲ್ಲಿ ಗೃಹ ಇಲಾಖೆ ಹೊಣೆ ಹೊರುವ ಸಚಿವರು ಈ ಕೇಸ್ಬಗ್ಗೆ ತನಿಖೆ ನಡೆಸಿ, ಈ ಕೃತ್ಯದ ಹಿಂದೆ ಇದ್ದವರು ಯಾರು ಅನ್ನೋದನ್ನು ಕರುನಾಡಿನ ಮುಂದಿಡಬೇಕಿದೆ.
ಕೃಷ್ಣಮಣಿ