ಬಿಜೆಪಿ ತನ್ನ ಹಿಡನ್ ಅಜೆಂಡಾವನ್ನು ಇದೀಗ ಓಪನ್ ಆಗಿ ಕಾರ್ಯಗತ ಮಾಡುವ ಕೆಲಸದಲ್ಲಿದೆ. ಬಸವರಾಜ ಬೊಮ್ಮಾಯಿ ಓರ್ವ ಅನೌಪಚಾರಿಕ ಮುಖ್ಯಮಂತ್ರಿ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಅದರದ್ದೇ ಆದ ಗೌರವ, ಘನತೆಯಿದೆ. ಅದೆಲ್ಲವನ್ನೂ ಮರೆತಂತಿರುವ ಬಸವರಾಜ ಬೊಮ್ಮಾಯಿಯವರು ತಮ್ಮ ಅಧಿಕಾರ ಅವಧಿಯಲ್ಲಿ ಮನುಸ್ಮೃತಿ ಜಾರಿಯಾಗಲಿರುವ ಎಲ್ಲಾ ದಾರಿಯನ್ನು ಸುಗಮಗೊಳಿಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ನೆಲೆಯಿಲ್ಲದ ಬಿಜೆಪಿಗೆ ಕರ್ನಾಟಕ ಒಂದು ವೇದಿಕೆಯಾಗಿ ಧಕ್ಕಿದೆ. ಇಲ್ಲಿ ಪ್ರತಿಪಕ್ಷಗಳು ಕೂಡ ನಿಸ್ಸಹಾಯಕರಾಗಿ ಕೂರುವ ಸ್ಥಿತಿ ನಿರ್ಮಾಣವಾಗಿದೆ. ಇದು ಬಿಜೆಪಿಯ ಹಿಡನ್ ಅಜೆಂಡಾಗಳನ್ನು ಒಂದೊಂದೇ ಆಗಿ ಜಾರಿ ಮಾಡಲು ಅನುವುಮಾಡಿಕೊಡುತ್ತಿದೆ.
ನ್ಯೂಟ್ರಲ್ ಆಗಿರುವ ಮೃದು ಹಿಂದುತ್ವ ವಾದಿಗಳನ್ನು ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮೊದಲು ಒಗ್ಗೂಡಿಸುವ ಕೆಲಸ ಮಾಡಿದರು. ಆಗಾಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಪರ ಒಲವು ತೋರುತ್ತಿದ್ದ ಮೃದು ಹಿಂದುತ್ವವಾದಿಗಳು ಬಿಜೆಪಿಯ ಹಿಂದುತ್ವದ ಅಜೆಂಡಾಗೆ ಕ್ರಮೇಣ ಒಳಗಾಗುತ್ತಾ ಬಂದರು. ಅದಕ್ಕೆ ಬೇಕಾದ ವಿವಾದಗಳನ್ನು ಬಿಜೆಪಿಗರೇ ಸೃಷ್ಟಿಸುತ್ತಾ ಬಂದರು. ಇದೊಂದು ಟ್ರ್ಯಾಪ್ ಎಂದು ಗೊತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿತ್ತು ಪರಿಸ್ಥಿತಿ.
ಅಝಾನ್ ನಿಷೇಧಕ್ಕೆ ಹಿಂದುತ್ವವಾದಿಗಳ ಪಟ್ಟು!
ಆರಂಭದಲ್ಲೇ ವಾಯುಮಾಲಿನ್ಯ ಹಾಗೂ ಕಿರಿಕಿರಿ ನೆಪವೊಡ್ಡಿ ಮುಸ್ಲಿಮರ ಅಝಾನ್ ನಿಷೇಧಿಸುವಂತೆ ಪಟ್ಟು ಹಿಡಿಯಲಾಯ್ತು. ಎಷ್ಟರ ಮಟ್ಟಿಗೆ ಅಝಾನ್ ಒಂದು ವಿವಾದವಾಯಿತು ಎಂದರೆ ದೊಡ್ಡ ದೊಡ್ಡ ಸೆಲೆಬ್ರೆಟಿಗಳೆಲ್ಲಾ ಅಝಾನ್ ವಿರುದ್ಧ ದ್ವೇಷಕಾರುವಂತೆ ಮಾಡಿತು. ಇದನ್ನೂ ಕಟುವಾಗಿ ವಿರೋಧಿಸಿ ಮುಸ್ಲಿಮರಿಗೆ ನ್ಯಾಯಕೊಡಿಸಬೇಕಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಕೂಡ ಏನೂ ಮಾಡದೆ ಮೌನದ ಮೊರೆ ಹೋಯಿತು.
Also read : ಅಂದು ಕಾಪು ಮಾರಿಗುಡಿಯಲ್ಲಿ ಮುಸ್ಲೀಮರು ಇಲ್ಲದಿರುತ್ತಿದ್ದರೆ? ಅಂದು ಆತ ಜಾತಿಗಳನ್ನು ಒಟ್ಟುಗೂಡಿಸದಿದ್ದರೆ?
ಜಾತ್ರೆ, ಉತ್ಸವಗಳಲ್ಲಿ ಮುಸ್ಲಿಮರಿಗೆ ವ್ಯಾಪಾರ ನಿಷೇಧ!
ಮುಂದುವರೆದ ಭಾಗವಾಗಿ ಕರಾವಳಿ ಕರ್ನಾಟಕದ ಭಾಗದಲ್ಲಿ ನಡೆಯುವ ಜಾತ್ರೆ, ಉತ್ಸವದಲ್ಲಿನ ವ್ಯಾಪಾರ ವಹಿವಾಟಿಗೆ ಮುಸ್ಲಿಮರಿಗೆ ಅವಕಾಶವಿಲ್ಲ ಎಂಬ ಬ್ಯಾನರ್‌ಗಳನ್ನು ನೇತು ಹಾಕಿ ವ್ಯವಸ್ಥಿತವಾಗಿ ದ್ವೇಷ ಹರಡಿತು ಆರ್‌ಎಸ್‌ಎಸ್ ಹಾಗೂ ಬಿಜೆಪಿ. ಆರಂಭದಲ್ಲಿ ಹಿಂದುತ್ವವಾದಿಗಳ ಈ ನಡೆಗೆ ಹಿಂದೂಗಳ ನಡುವೆಯೇ ವಿರೋಧ ವ್ಯಕ್ತವಾಗಿದ್ದರೂ, ದೇಶದ್ರೋಹಿಗಳನ್ನು ಬೆಂಬಲಿಸುವ ನೀವು ದೇಶದ್ರೋಹಿಗಳು ಎನ್ನುತ್ತಲೇ ಅಸಲಿ ಹಿಂದೂಗಳ ಬಾಯಿ ಮುಚ್ಚಿಸಿದರು. ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿಯಲ್ಲಿ ಹೋರಾಡಿದ ಮುಸ್ಲಿಮರನ್ನು ಪರಕೀಯರೆಂದು ಬಿಂಬಿಸುವತ್ತ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತಾ ಬಿಜೆಪಿ ಬಂದಿತು.

ಶಾಲೆ, ಕಾಲೇಜುಗಳಲ್ಲಿ ಹಿಜಾಬ್ ವಿವಾದ!
ಇತ್ತೀಚೆಗೆಷ್ಟೇ ವಿವಾದದ ಕಿಡಿ ಹೊತ್ತಿಸಿದ್ದ ಹಿಜಾಬ್ ನೊಂದಿಗೆ ಬಿಜೆಪಿ ಅಂದುಕೊಂಡಂತೆ ಮುಸ್ಲಿಮರ ಮೇಲಿನ ದ್ವೇಷದ ವಿಸ್ತಾರವನ್ನು ಮತ್ತಷ್ಟು ಬಲಗೊಳಿಸಿದರು. ಶಾಲೆ ಕಾಲೇಜುಗಳಲ್ಲಿ ಯಾಕೆ ಬೇಕು ಹಿಜಾಬ್..? ಹಿಜಾಬ್ ಮುಖ್ಯವೋ, ಶಿಕ್ಷಣ ಮುಖ್ಯವೋ..? ಎಂಬ ಅಸಂಬಂಧ ಪ್ರಶ್ನೆಗಳನ್ನು ಹರಡುವಲ್ಲಿಯೂ ಯಶಸ್ವಿಯಾದರು. ಅಸಲಿಗೆ ಹಿಜಾಬ್ ಒಂದು ವಿವಾದವೇ ಅಲ್ಲ ಎಂಬುವುದು ಇಲ್ಲಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೂ ಮೃದು ಹಿಂದುತ್ವ ಧೋರಣೆ ಇಟ್ಟುಕೊಂಡಿದ್ದ ಜನರು ಕೂಡ ಕಠೋರವಾಗಿ ಮುಸ್ಲಿಮರ ಮೇಲೆ ಎಗರಿಬಿದ್ದು ತಮ್ಮ ಅಸಲಿ ಮುಖ ತೋರಿದರು.
ಶಾಲಾ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ!
ಇತ್ತೀಚಿನ ದಿನಗಳವರೆಗೆ ಇಷ್ಟೆಲ್ಲಾ ದೊಂಬಿ ಎಬ್ಬಿಸಿದ ಬಿಜೆಪಿ ಇದೀಗ ತಮ್ಮ ಮೂಲ ಅಜೆಂಡವನ್ನು ಮಕ್ಕಳ ತಲೆಗೂ ತುಂಬಲು ಮುಂದೆ ಬಂದಿದೆ. ಗುಜರಾತ್‌ನಲ್ಲಿ ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸಿದ ಪರಿಣಾಮ ರಾಜ್ಯದಲ್ಲೂ ಅಂಥದ್ದೊಂದು ಚರ್ಚೆ ತೇಲಿ ಬಿಟ್ಟು ಹಿಂದುತ್ವ ಜಾರಿಯೆಡೆಗೆ ಮುಂದಡಿ ಇಟ್ಟಿದೆ. ಹಿಜಾಬ್ ಒಂದು ಧಾರ್ಮಿಕ ಸಂಕೇತವಾಗಿಯೂ.. ಭಗವದ್ಗೀತೆ ನೈತಿಕ ಶಿಕ್ಷಣವಾಗಿಯೂ ಕಂಡಿದ್ದು ಮುಸ್ಲಿಮರ ಮೇಲಿನ ಹಗೆತನ ಸಾಧಿಸುವಿಕೆ ಮುಂದುವರೆಸಿದೆ.
ಇದೊಂದು ವಿಚಾರ ನಿಮ್ಮ ಗಮನಕ್ಕೆ ಇರಲಿ ಎಂದು ಹೇಳುತ್ತಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತೋ..? ಇಲ್ಲವೋ..? ಎಂಬ ಸ್ಪಷ್ಟತೆಯೇ ಇರಲಿಲ್ಲ. ಅದಕ್ಕೂ ಮೊದಲೇ ಅಂದರೆ 1925ರಲ್ಲೇ ಆರ್‌ಎಸ್‌ಎಸ್ ಸ್ಥಾಪನೆಗೊಂಡು ಹಿಂದೂ ರಾಷ್ಟ್ರ ನಿರ್ಮಾಣವೇ ಅಂತಿಮ ಗುರಿ ಎಂದು ಬಹಿರಂಗವಾಗಿಯೇ ಹೇಳಿಕೊಂಡಿತ್ತು. ಅಲ್ಲಿಗೆ ಈ ಸಂಘದ ಅಜೆಂಡಾವೇನು ಎಂಬುವುದು ವಿವೇಚನೆ ಉಳ್ಳವರಿಗೆ ಅರ್ಥವಾಗಿರಬಹುದು. ಸದಾ ದೇಶ, ದೇಶಭಕ್ತಿಯ ಪಾಠ ಮಾಡುವ ಇವರಿಗೆ ಸ್ವಾತಂತ್ರ್ಯಕ್ಕೆ ಹೋರಾಡಿದ ಇತಿಹಾಸವಿಲ್ಲ. ಅಂದು ಇಂದೂ ದೇಶವನ್ನು ಕಾಪಿಟ್ಟುಕೊಳ್ಳುವುದು ಇಲ್ಲಿನ ದಲಿತರು ಹಾಗೂ ಅಲ್ಪಸಂಖ್ಯಾತರು. ಇಂಡಿಯಾ ಗೇಟ್ ಎನ್ನುವ ದೇಶದ ಸ್ಮಾರಕವೊಂದರಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದವರ ಹೆಸರು ಕೆತ್ತಿಡಲಾಗಿದೆ. ಅದನು ಯಾವ ದಿಕ್ಕಿನಿಂದ ಎಣಿಸಿದರೂ ಅಲ್ಲಿ ಮುಸ್ಲಿಮರದ್ದೇ ಸಂಖ್ಯಾ ಬಲ ಹೆಚ್ಚು.
Also Read : ಗುಜರಾತ್ ಮಾದರಿಯಲ್ಲಿ ರಾಜ್ಯದಲ್ಲಿ ಭಗವದ್ಗೀತೆ ಪಠ್ಯ ಜಾರಿಗೆ ಚಿಂತನೆ!
ಬಿಜೆಪಿಯ ಇಂಥಾ ನೀಚ ಹಾಗೂ ಅಸಹ್ಯ ರಾಜಕಾರಣಕ್ಕೆ ಬಸವಣ್ಣ ನಡೆದಾಡಿದ ಮಣ್ಣು ಸಾಕ್ಷಿಯಾಗುತ್ತಿದೆಯಲ್ಲವೇ ಎಂಬುವುದೇ ವಿಷಾಧ. ವಿಶ್ವಮಾನವರಾಗಿ ಎಂದ ಕುವೆಂಪು, ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಎಂದ ನಿಸಾರ್ ಅಹಮ್ಮದ್ ಹುಟ್ಟಿದ ನೆಲದಲ್ಲಿ ಇವರ ಹೇಟ್ ಪ್ರೊಪಗಾಂಡ ಜಾರಿಯಾಗುತ್ತಿದೆ ಎಂಬುವುದೇ ನೋವು. ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲ ಎಂದ ಲಂಕೇಶ್ ರಂಥಾ ವೈಚಾರಿಕತೆಗಳು ಹುಟ್ಟಿದ ಕರುನಾಡು ಇವರ ದ್ವೇಷ ರಾಜಕಾರಣಕ್ಕೆ ಸಾಕ್ಷಿಯಾಗಿ ನಿಂತಿದೆ ಎಂದರೆ ಮುಂದೆ ದೊಡ್ಡದಾದ ಸಂಗ್ರಾಮಕ್ಕೆ ಕಾಲ ಸನ್ನಿಹಿತವಾಗಿದೆ ಎಂದೇ ಅರ್ಥ.
			
                                
                                
                                
