ಇತ್ತೀಚಿನ ವರ್ಷಗಳಲ್ಲಿ ನಡೆದ ಸೆಲೆಬ್ರಿಟಿಗಳ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದೆ. ಸೋನಿ ಟಿವಿ ಶೋ ‘ಮಹಾರಾಣಾ ಪ್ರತಾಪ್’ ನಲ್ಲಿ ಬಾಲನಟಿಯಾಗಿ ವೃತ್ತಿ ಬದುಕನ್ನು ಪ್ರಾರಂಭಿಸಿದ ಯುವನಟಿ ತುನಿಷಾ ಶರ್ಮ ಶೂಟಿಂಗ್ ಸೆಟ್ ನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ದೇಶದ ನಾಯಕು, ಆತ್ಮಹತ್ಯೆ ಕುರಿತಾಗಿನ ಜಾಗೃತಿಯ ಬಗ್ಗೆ ಗಂಭೀರವಾಗಿ ಪರಿಗಣಿಸಲು ಪ್ರೇರಣೆಯಾಗಬೇಕಿತ್ತು. ಆದರೆ, ಬಿಜೆಪಿ ನಾಯಕರು ಇದರಲ್ಲೂ ರಾಜಕೀಯ ಧ್ರುವೀಕರಣಕ್ಕೆ ಪ್ರಯತ್ನ ಶುರುವಿಟ್ಟು ಕೊಂಡಿದ್ದಾರೆ.
‘ಅಲಿ ಬಾಬಾ: ದಸ್ತಾನ್-ಎ-ಕಾಬೂಲ್’ ಟಿವಿ ಶೋನಲ್ಲಿ ಆಕೆಯ ಸಹ-ನಟ ಶೀಜಾನ್ ಮಹಮ್ಮದ್ ಖಾನ್ ವಿರುದ್ಧ ನಟಿಯ ಪೋಷಕರು ಆತ್ಮಹತ್ಯೆಗೆ ಪ್ರಚೋದನೆಯ ದೂರನ್ನು ನೀಡಿದ ಬಳಿಕ ಪ್ರಕರಣವು ರಾಜಕೀಯ ಆಯಾಮ ಪಡೆದುಕೊಂಡಿದೆ. ಸದ್ಯ ನಟನನ್ನು ಬಂಧಿಸಲಾಗಿದೆ.
ತುನಿಷಾ ಹಾಗೂ ಶೀಜಾನ್ ನಡುವೆ ಪ್ರೇಮ ಸಂಬಂಧ ಇತ್ತೀಚೆಗೆ ಮುರಿದು ಬಿದ್ದಿತ್ತು. ಇದು ನಟಿಯ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆಯನ್ನು ಎಫ್‌ಐಆರ್ ನಲ್ಲಿ ಮಾಡಲಾಗಿದೆ. ಇದರ ನಡುವೆ, ನಟಿಯ ಆತ್ಮಹತ್ಯೆ ಪ್ರಕರಣಕ್ಕೆ ಭಾರತೀಯ ಜನತಾ ಪಕ್ಷದ ಶಾಸಕ ರಾಮ್ ಕದಮ್ ಲವ್ ಜಿಹಾದ್ ಎಂಬ ಲೇಬಲ್ ನೀಡಿದ್ದಾರೆ.

ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಮತ್ತು ಎಲ್ಲಾ ಕೋನಗಳನ್ನು ಪರಿಶೀಲಿಸಲಾಗುವುದು ಎಂದು ರಾಮ್ ಕದಮ್ ಹೇಳಿದರು, ತಪ್ಪಿತಸ್ಥರನ್ನು ಬಿಡಲಾಗುವುದಿಲ್ಲ ಮತ್ತು ತುನಿಶಾ ಶರ್ಮಾ ಅವರ ಕುಟುಂಬಕ್ಕೆ ನ್ಯಾಯ ಸಿಗುತ್ತದೆ ಎಂದು ಹೇಳಿದರು.
“ಆತ್ಮಹತ್ಯೆಗೆ ಕಾರಣವೇನು? ಇದರಲ್ಲಿ ಲವ್ ಜಿಹಾದ್ ಇದೆಯೇ? ಅಥವಾ ಇನ್ನಾವುದೇ ವಿಚಾರವಿದೆಯೇ. ತನಿಖೆಯಿಂದ ಸತ್ಯಾಂಶ ಹೊರಬರುತ್ತದೆ, ಆದರೆ ತುನೀಶಾ ಶರ್ಮಾ ಕುಟುಂಬಕ್ಕೆ 100 ರಷ್ಟು ನ್ಯಾಯ ಸಿಗುತ್ತದೆ. ಮತ್ತು ಇದು ಲವ್ ಜಿಹಾದ್ ಪ್ರಕರಣವಾಗಿದ್ದ̧ರೆ ಪೊಲೀಸರು ಇದರ ಹಿಂದೆ ಯಾವ ಸಂಘಟನೆಗಳು ಮತ್ತು ಸಂಚುಕೋರರು ಯಾರು ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದು” ಎಂದು ಅವರು ಹೇಳಿದರು.
ಮುಂಬೈನ ವಸಾಯಿ ನ್ಯಾಯಾಲಯವು ಶೀಜಾನ್ ನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ನ್ಯಾಯಾಲಯದಲ್ಲಿ, ಖಾನ್ ಅವರ ವಕೀಲ ಶರದ್ ರೈ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, “ಏನೇ ನಡೆದರೂ ಪೊಲೀಸರು ಮತ್ತು ನ್ಯಾಯಾಲಯವು ಕೆಲಸ ಮಾಡುತ್ತಿದೆ. ಅವರನ್ನು (ಶೀಜಾನ್ ಖಾನ್) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅವರ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ” ಎಂದು ಹೇಳಿದರು.
ಘಟನೆಯ ಕುರಿತು ವಿಚಾರಣೆಗಾಗಿ ಭಾನುವಾರ ಮತ್ತೊಬ್ಬ ಸಹ ನಟ ಪಾರ್ಥ್ ಜುಟ್ಶಿ ಅವರನ್ನು ಪೊಲೀಸರು ಕರೆದಿದ್ದಾರೆ. ಪೊಲೀಸ್ ಠಾಣೆಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜುಟ್ಶಿ, ಘಟನೆಯ ಸಮಯದಲ್ಲಿ ನಾನು ಸೆಟ್‌ಗಳಲ್ಲಿ ಇರಲಿಲ್ಲ ಎಂದು ಹೇಳಿಕೊಂಡಿದ್ದು, “ನನ್ನನ್ನು ಪೊಲೀಸರು ವಿಚಾರಣೆಗೆ ಕರೆದರು ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಕೇಳಿದರು. ನಾನು ಅವಳ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಅವಳ ಸಂಭಂಧಗಳ ಬಗ್ಗೆ ನನಗೆ ಯಾವುದೇ ಸುಳಿವು ಇಲ್ಲ, ಅದು ಅವಳ ಆಂತರಿಕ ವಿಷಯ.” ಎಂದು ಹೇಳಿದ್ದಾರೆ.

ತುನಿಶಾ ಶರ್ಮಾ ಅವರ ಸಹೋದ್ಯೋಗಿಗಳು ಆಕೆ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ, ಆದರೆ ಪೊಲೀಸರು ಸ್ಥಳದಲ್ಲೇ ತನಿಖೆ ನಡೆಸಿದ್ದು, ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಆಕೆಯ ಸಾವನ್ನು ಕೊಲೆ ಮತ್ತು ಆತ್ಮಹತ್ಯಾ ಕೋನಗಳೆರಡರಿಂದಲೂ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಈ ನಡುವೆ ತುನಿಷಾ ಕುಟುಂಬಸ್ಥರು ಶೀಜನ್ ಮೇಲೆಯೇ ಆರೋಪ ಹೊರಿಸಿದ್ದು, ತುನೀಶಾ ಜೊತೆ ಲಿವಿಂಗ್ ಟುಗೆದರ್ ಜೊತೆ ಇದ್ದರೂ ಶೀಜನ್ ಹಲವು ಹುಡುಗಿಯರ ಜತೆ ಸಂಪರ್ಕ ಇಟ್ಟುಕೊಂಡಿದ್ದ. ಇದರಿಂದ ತುನೀಶಾ ಒತ್ತಡಕ್ಕೆ ಒಳಗಾಗಿ ಖಿನ್ನತೆಗೆ ಜಾರಿದ್ದಳು. ಡಿ.16ರಂದು ಶೀಜನ್ ತನಗೆ ಮೋಸ ಮಾಡುತ್ತಿದ್ದಾನೆಂದು ತುನೀಶಾಗೆ ಗೊತ್ತಾಗಿತ್ತು. ಅವಳಿಗೆ ಆಘಾತವಾಗಿತ್ತು. ತುನೀಶಾಳ ತಾಯಿ ಕೂಡ ಶೀಜಾನ್‌ನನ್ನು ಕರೆದು ಮಾತನಾಡಿಸಿದ್ದರು. ಆತ ಈ ಸಂಬಂಧದಲ್ಲಿ ಗಂಭೀರವಾಗಿಲ್ಲದಿದ್ದರೆ ಇಷ್ಟು ಆಪ್ತನಾದದ್ದು ಯಾಕೆ? ಹಾಗೂ ಏಕಾಏಕಿ ಅವಳನ್ನು ಬಿಟ್ಟು ಹೋಗಿದ್ದು ಯಾಕೆ ಎಂದು ಅವರು ಪ್ರಶ್ನಿಸಿ, ಇದು ಸರಿಯಲ್ಲ ಎಂದು ತಿಳಿ ಹೇಳಿದ್ದಾಗಿ ತುನಿಷಾಳ ಮಾವ ಪವನ್ ಶರ್ಮಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಟಿ ತುನಿಶಾ ಶರ್ಮಾ ಅವರ ಅಂತ್ಯಕ್ರಿಯೆಯನ್ನು ಡಿಸೆಂಬರ್ 27 ರಂದು ಮೀರಾ ರಸ್ತೆ ಪ್ರದೇಶದಲ್ಲಿ ನೆರವೇರಿಸಲಾಗುವುದು ಎಂದು ಪವನ್ ಶರ್ಮಾ ಹೇಳಿದ್ದಾರೆ.
“ತುನೀಶಾ ಶರ್ಮಾ ಟಿವಿ ಶೋವೊಂದರಲ್ಲಿ ನಟಿಯಾಗಿ ಕೆಲಸ ಮಾಡುತ್ತಿದ್ದರು. ತುನೀಶಾ ಮತ್ತು ಶೀಜಾನ್ ಖಾನ್ ನಡುವೆ ಸಂಬಂಧವಿತ್ತು. 15 ದಿನಗಳ ಹಿಂದೆ ಅದು ಮುರಿದುಬಿದ್ದಿತ್ತು, ನಂತರ ಅವರು ತಮ್ಮ ಶೂಟಿಂಗ್ ಸೆಟ್‌ನಲ್ಲಿ ತುನಿಷಾ ಆತ್ಮಹತ್ಯೆ ಮಾಡಿಕೊಂಡರು,” ಸಹಾಯಕ ಪೊಲೀಸ್ ಕಮಿಷನರ್ ( ಎಸಿಪಿ) ಚಂದ್ರಕಾಂತ ಜಾಧವ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

