ಶಿವಮೊಗ್ಗ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಕಾವು ರಂಗೇರಿದೆ. ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಜೆಡಿಎಸ್ ಇಂದು ತನ್ನ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಈ ಎಲ್ಲದರ ನಡುವೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತಂತೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ಶಿವಮೊಗ್ಗದಲ್ಲಿ ಈ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಒಂದೊಂದು ಕ್ಷೇತ್ರಕ್ಕೆ ಬಿಜೆಪಿಯಿಂಧ ಎರಡರಿಂದ ಮೂರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಗೆಲ್ಲುವ ಪಕ್ಷವಾಗಿರೋದ್ರಿಂದ ನಮ್ಮಲ್ಲಿ ಟಿಕೆಟ್ಗಾಗಿ ಪೈಪೋಟಿ ಇರುವುದು ಸರ್ವೇ ಸಾಮಾನ್ಯ. ಆದರೆ ನಾವು ಈಗಾಗಲೇ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಿ ದೆಹಲಿಗೆ ಕಳುಹಿಸಿಕೊಟ್ಟಿದ್ದೇವೆ. ಇಂದು ಹಾಗೂ ನಾಳೆ ಅಂತಿಮ ಪಟ್ಟಿ ಸಿದ್ಧಗೊಳ್ಳಲಿದೆ . ಏಪ್ರಿಲ್ 9ರಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗಲಿದೆ ಎಂದು ಹೇಳಿದ್ದಾರೆ.

ಏಪ್ರಿಲ್ 9ರಂದು ಪ್ರಧಾನಿ ನರೇಂದ್ರ ಮೋದಿ ಏಳನೇ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಧಾನಿ ಮೋದಿ ಸಫಾರಿ ನಡೆಸಲಿದ್ದಾರೆ. ಇದೇ ದಿನದಂದು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಈ ಬಾರಿ ಹಿಂದೆಗಿಂತಲೂ ಅತ್ಯಂತ ಹೀನಾಯವಾಗಿ ಸೋಲು ಕಾಣಲಿದೆ. ಕಾಂಗ್ರೆಸ್ನವರಿಗೆ ರಾಜ್ಯದಲ್ಲಿ ಅಭ್ಯರ್ಥಿಗಳನ್ನು ಹಾಕೋಕೆ ಜನರು ಸಿಗುತ್ತಿಲ್ಲ. ಹೀಗಾಗಿ ಅವರು ವಾಮಮಾರ್ಗದ ಮೂಲಕ ಬಿಜೆಪಿಗರನ್ನು ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಕಾಂಗ್ರೆಸ್ 2ನೆ ಪಟ್ಟಿ ರಿಲೀಸ್ಗೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿಗರನ್ನು ಸಂಪರ್ಕಿಸಿದ್ದರು ಎಂದು ಹೇಳಿದರು.











