ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವ ವಿಚಾರವಾಗಿ ಬಿಜೆಪಿ ಆರಂಭಿಸಿದ್ದ ರಾಜಕೀಯ ಪ್ರಹಸನಗಳು ಸ್ವತಃ ಕೇಸರಿ ಪಕ್ಷಕ್ಕೇ ಮುಳುವಾಗಿ ಪರಿಣಮಿಸುವ ಲಕ್ಷಣಗಳು ಗೋಚರಿಸಿವೆ.
ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ವಕ್ಫ್ ಆಸ್ತಿ ಒತ್ತುವರಿಯನ್ನು ತೆರವುಗೊಳಿಸುವ ಬಗ್ಗೆ ನೀಡಿದ್ದ ಆಶ್ವಾಸನೆಗಳು ಹೊರಬಂದಿವೆ.
ದಶಕದ ಹಿಂದೆ ಅಂದರೆ, 2014 ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ, ಏನೆಲ್ಲಾ ಕೆಲಸಗಳು ಮಾಡುತ್ತೇವೆ ಎಂದು ಬಿಜೆಪಿ ಆಶ್ವಾಸನೆ ನೀಡಿತ್ತೋ, ಅದರಲ್ಲಿ ವಕ್ಫ್ ಆಸ್ತಿ ಒತ್ತುವರಿ ತೆರವು ಒಂದೂ ಎನ್ನುವುದು ಇದೀಗ ಬೆಳಕಿಗೆ ಬಂದಿದೆ.
ಆ ಮೂಲಕ, ರಾಜ್ಯದಲ್ಲಿ ʼಲ್ಯಾಂಡ್ ಜಿಹಾದ್ʼ ಎಂಬ ಹೆಸರಿಟ್ಟು ಬಿಜೆಪಿ ಮಾಡಲು ಹೊರಟಿದ್ದ ರಾಜಕಾರಣಕ್ಕೆ ತೀವ್ರ ಹೊಡೆತ ಬಿದ್ದಂತಾಗಿದ್ದು, ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಬಿಜೆಪಿಗೆ ಇರಿಸು-ಮುರಿಸಾಗಿದೆ.
ಆಸ್ತಿ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ವಕ್ಫ್ ಮಂಡಳಿ ನೋಟಿಸ್ ನೀಡಿದ ವಿಚಾರವಾಗಿ ಬಿಜೆಪಿ ತೀವ್ರ ರಾಜಕೀಯ ಮಾಡುತ್ತಿರುವಂತೆಯೇ, ಬಿಜೆಪಿಯ ಹಳೆಯ ಪ್ರಣಾಳಿಕೆ ಮುನ್ನಲೆಗೆ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.
2014 ರ ಚುನಾವಣಾ ಸಂದರ್ಭದಲ್ಲಿ ಬಿಜೆಪಿ 52 ಪುಟಗಳ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದ್ದು, ಅದರ 17 ನೇ ಪುಟದಲ್ಲಿ ವಕ್ಫ್ ಕಾಯಿದೆಗಳನ್ನು ಬಲಪಡಿಸುವ ಬಗ್ಗೆ ಆಶ್ವಾಸನೆ ನೀಡಿತ್ತು. ಅಲ್ಲದೆ, ವಕ್ಫ್ ಆಸ್ತಿ ಕಬಳಿಸಿರುವುದನ್ನು ತೆರವುಗೊಳಿಸುವ ಬಗ್ಗೆಯೂ ಬಿಜೆಪಿ ಭರವಸೆ ನೀಡಿತ್ತು. ಇದೀಗ, ವಕ್ಫ್ ಆಸ್ತಿ ತೆರವಿಗೆ ಸಂಬಂಧಿಸಿದಂತೆ ರಾಜಕೀಯ ಶುರು ಮಾಡಿರುವ ಬಿಜೆಪಿಗೆ ತನ್ನ ಹಳೆಯ ಪ್ರಣಾಳಿಕೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

ಬಿಜೆಪಿ ಪ್ರಣಾಳಿಕೆ ವೈರಲ್ ಆಗುತ್ತಿದ್ದಂತೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಕ್ಫ್ ಆಸ್ತಿ ತೆರವುಗೊಳಿಸುವ ಪ್ರಕ್ರಿಯೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ಕೇವಲ ರಾಜಕೀಯ ಗಿಮಿಕ್ ಎಂಬ ಆಕ್ಷೇಪವೂ ವ್ಯಕ್ತವಾಗಿದೆ.
ವಕ್ಫ್ ಮಂಡಳಿಯ ಒತ್ತುವರಿ ಜಮೀನಿಗೆ ನೋಟಿಸ್ ನೀಡಿರುವುದನ್ನೇ ರಾಜಕಾರಣಕ್ಕೆ ಬಳಸಿಕೊಂಡಿರುವ ಬಿಜೆಪಿ ನಾಯಕರು, ರೈತರ ಜಮೀನನ್ನು ವಕ್ಫ್ ಮಂಡಳಿ ವಶಪಡಿಸಿಕೊಳ್ಳಲು ಹೊರಟಿದೆ, ಆ ಮೂಲಕ ಕಾಂಗ್ರೆಸ್ ಲ್ಯಾಂಡ್ ಜಿಹಾದ್ ಆರಂಭಿಸಿದೆ ಎಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಶುರು ಹಚ್ಚಿಕೊಂಡಿತ್ತು.

ವಕ್ಫ್ ಒತ್ತುವರಿ ಆಸ್ತಿಯನ್ನು ತೆರವುಗೊಳಿಸುವ ಕುರಿತಾಗಿ ಸಚಿವ ಜಮೀರ್ ಅಹ್ಮದ್ ಅವರು ಹೇಳಿಕೆ ನೀಡಿದ್ದನ್ನು ಮುಂದಿಟ್ಟು, ಜಮೀರ್ ಅಹ್ಮದ್ ಅವರನ್ನು ಮತಾಂಧ ಎಂದೂ ಬಿಜೆಪಿ ನಾಯಕರು ಕರೆದಿದ್ದರು.
ಆದರೆ, ವಕ್ಪ್ ಮಂಡಳಿಗೆ ಹಿರಿಯರು ದಾನವಾಗಿ ನೀಡಿದ್ದ ಜಮೀನುಗಳನ್ನು ಮಾತ್ರ ಸ್ವಾಧೀನಕ್ಕೆ ತೆಗೆದುಕೊಳ್ಳುವುದಾಗಿಯೂ, ಅದನ್ನು ಸದ್ಬಳಕೆ ಮಾಡಿಕೊಳ್ಳುವುದಾಗಿಯೂ ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ನೀಡಿದ್ದರು.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಕ್ಫ್ ಜಮೀನು ಒತ್ತುವರಿ ಮಾಡಲಾಗಿದೆ ಎಂದು ಈಗಾಗಲೇ ನೋಟಿಸ್ ನೀಡಲಾಗಿದ್ದು, ಅದರಲ್ಲಿ ರೈತರ ಪಹಣಿ ಜಮೀನಿಗೂ ನೋಟಿಸ್ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಇದು ವಿವಾದವಾಗುತ್ತಿದ್ದಂತೆ, ರಾಜ್ಯ ಸರ್ಕಾರ ನೋಟಿಸ್ ಗಳನ್ನು ಹಿಂಪಡೆದಿತ್ತು.

ಅದಾಗ್ಯೂ, ಬಿಜೆಪಿ ನಾಯಕರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದರು. ಇದೀಗ 2014 ರ ಬಿಜೆಪಿಯ ಪ್ರಣಾಳಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ವಕ್ಫ್ ಆಸ್ತಿ ತೆರವುಗೊಳಿಸುವುದಾಗಿ ಬಿಜೆಪಿ ಭರವಸೆ ನೀಡಿದ್ದ ಅಂಶ ಗಮನ ಸೆಳೆದಿದೆ.