ಭಾರತೀಯ ಜನತಾ ಪಕ್ಷವು ಕಾಶ್ಮೀರಿ ಪಂಡಿತರನ್ನು ಮತ ಬ್ಯಾಂಕ್ ಆಗಿ ಬಳಸಿಕೊಂಡಿದೆ ಹೊರತು ಅವರಿಗೆ ಏನೂ ಮಾಡಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಎನ್‌ಸಿ ಪಕ್ಷದ ಅಲ್ಪಸಂಖ್ಯಾತ ಘಟಕವು ಕಾಶ್ಮೀರಿ ಪಂಡಿತರ ಬಗ್ಗೆ ಶನಿವಾರ ಮೂರು ನಿರ್ಣಯಗಳನ್ನು ಅಂಗೀಕರಿಸಿದ ಬಳಿಕ ಮಾತನಾಡಿದ ಅವರು, “ಎನ್‌ಸಿ ಪಕ್ಷದ ಅಲ್ಪಸಂಖ್ಯಾತ ಘಟಕವು ಕಾಶ್ಮೀರಿ ಪಂಡಿತರಿಗೆ ರಾಜಕೀಯ ಮೀಸಲಾತಿ, ಹಿಂದೂ ದೇವಾಲಯಗಳ ರಕ್ಷಣೆ, ಕಾಶ್ಮೀರಿ ಪಂಡಿತರ ಮರಳುವಿಕೆ ಮತ್ತು ಪುನರ್ ವಸತಿಗಾಗಿ ಸಮಗ್ರ ಪ್ಯಾಕೇಜ್ ಘೋಷಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕ್ಷಮೆ ಕೋರಿದ ಫಾರೂಕ್
1990ರ ದಶಕದಲ್ಲಿ ಕಾಶ್ಮೀರಿ ಪಂಡಿತರು ರಾಜ್ಯವನ್ನು ತೊರೆಯುವ ಸಮಯದಲ್ಲಿ ಅವರನ್ನು ರಕ್ಷಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಈ ವಿಚಾರವಾಗಿ ಕಾಶ್ಮೀರಿ ಪಂಡಿತರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಕಾಶ್ಮೀರಿ ಪಂಡಿತರು ರಾಜ್ಯದಿಂದ ವಲಸೆ ಹೋದ ನಂತರ ಕಷ್ಟದಲ್ಲಿ ಬಳಲುತ್ತಿದ್ದಾರೆ. ಇವರುಗಳ ನೋವು ಅಗಣಿತ ಎಂದು ಕಳವಳ ವ್ಯಕ್ತಪಡಿಸಿದರು.
ಹಿಂದೂ ಮತ್ತು ಮುಸ್ಲಿಮರ ವಿಭಜನೆ ಯತ್ನ
ಕೆಲವು ದುಷ್ಟ ಶಕ್ತಿಗಳು ಕಾಶ್ಮೀರಿ ಪಂಡಿತರು ಮತ್ತು ಮುಸ್ಲಿಮರನ್ನು ವಿಭಜಿಸಲು ಯತ್ನಸಿದ್ದವು. ಆ ಕಾಲದಲ್ಲಿ ಪಂಡಿತರು ಕಾಶ್ಮೀರವನ್ನು ತೊರೆಯುವಂತೆ ಒತ್ತಾಯಿಸಿದ್ದು ಸ್ವಾರ್ಥಿಗಳೇ ಹೊರೆತು ಮುಸ್ಲಿಮರಲ್ಲ. ಪಂಡಿತರು ಕಣಿವೆಯನ್ನು ತೊರೆದ ನಂತರ ಕಾಶ್ಮೀರವನ್ನು ಪಡೆಯಬಹುದು ಎಂದು ದುಷ್ಟರು ಭಾವಿಸಿದ್ದರು. ಆದರೆ, ಇಂಥ ಎಷ್ಟೇ ದುಷ್ಟ ಶಕ್ತಿಗಳು ಅಡ್ಡ ಬಂದರೂ ಅವರ ಕಾರ್ಯ ಸಾಧಿಸಲು ಸಾಧ್ಯವಾಗಲಿಲ್ಲ. ಕಾಶ್ಮೀರಿ ಪಂಡಿತರಿಗೆ ಆಶ್ರಯ ನೀಡಿದ್ದಕ್ಕಾಗಿ ನಾನು ಜಮ್ಮು-ಕಾಶ್ಮೀರದ ಜನತೆಗೆ ಹೃದಯಪೂರ್ವಕ ಅಭಿನಂದನೆ ಸಲ್ಲಿಸುವೆ. ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಈಗ ಅಂಥ ದುಷ್ಟ ಶಕ್ತಿಗಳಿಂದ ಅಂತರ ಕಾಯ್ದುಕೊಂಡು ದ್ವೇಷ ಬಿಟ್ಟು ಪ್ರೀತಿಯ ಮಾರ್ಗದಲ್ಲಿ ನಡೆಯಬೇಕು ಎಂದು ಮನವಿ ಮಾಡಿದರು.