ಸಿದ್ದರಾಮಯ್ಯ ಸರ್ಕಾರದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುನ್ನಲೆಗೆ ಬಂದಿತ್ತು. ನೂರಾರು ಸಮಾವೇಶಗಳನ್ನು ನಡೆಸಿದ್ದ ಲಿಂಗಾಯತ ಸಮುದಾಯದ ನಾಯಕರು ಪ್ರತ್ಯೇಕ ಧರ್ಮ ಮಾನ್ಯತೆ ಕೊಡಬೇಕು ಅನ್ನೋ ಮನವಿ ಕೊಟ್ಟಿದ್ದರು. ಸಮುದಾಯದ ಮನವಿಯನ್ನು ಸ್ವೀಕಾರ ಮಾಡಿದ್ದ ಸಿದ್ದರಾಮಯ್ಯ ಸರ್ಕಾರ, ಕೇಂದ್ರ ಸರ್ಕಾರದ ಪರಿಶೀಲನೆಗೆ ರವಾನೆ ಮಾಡಿತ್ತು. ಇದು ಕೇಸರಿ ಪಾಳಯಕ್ಕೆ ಚುನಾವಣಾ ಅಸ್ತ್ರದಂತೆ ಸಿಕ್ಕಿತ್ತು. ಸ್ವತಃ ಕಾಂಗ್ರೆಸ್ ನಾಯಕರಾದ ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವಾರು ನಾಯಕರು ಸ್ವಯಂ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಟೀಕೆ ಮಾಡಿದ್ದರು. ಅದರ ವಿರುದ್ಧವಾಗಿ ಸಭೆ ಸಮಾರಂಭಗಳನ್ನು ಮಾಡಿದ್ದರು. ಇದೀಗ ಅದೇ ಪರಿಸ್ಥಿತಿ ಬಿಜೆಪಿ ಸರ್ಕಾರಕ್ಕೆ ಎದುರಾಗಿದೆ.
ಪಂಚಮಸಾಲಿ ಮೀಸಲಾತಿ ಹೋರಾಟದ ಸಂಕಷ್ಟ..!
ಲಿಂಗಾಯತ ಪ್ರತ್ಯೇಕ ಧರ್ಮ ಮಾಡುವ ಮೂಲಕ ಕಾಂಗ್ರೆಸ್ ಧರ್ಮವನ್ನು ಹೊಡೆಯುವ ಕೆಲಸ ಮಾಡ್ತಿದೆ ಎಂದು ರಾಜಕೀಯವಾಗಿ ಬಳಸಿಕೊಂಡು ವೀರಶೈವರು ಹಾಗು ಲಿಂಗಾಯತ ಪ್ರತ್ಯೇಕ ಧರ್ಮ ವಿರೋಧಿಗಳ ಮತಗಳನ್ನು ಕ್ರೂಢೀಕರಿಸಿದ್ದ ಬಿಜೆಪಿಗೆ ಪಂಚಮಸಾಲಿಗಳ ಮೀಸಲಾತಿ ಹೋರಾಟ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಡಿಸೆಂಬರ್ 22ರ ಒಳಗಾಗಿ ಮೀಸಲಾತಿ ಘೋಷಣೆ ಮಾಡಬೇಕು ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಪೀಠಾಧ್ಯಕ್ಷ ಜಯಮೃತ್ಯುಂಜಯ ಸ್ವಾಮಿ ಆಗ್ರಹ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 2ಎ ಮೀಸಲಾತಿ ಘೋಷಣೆ ಮಾಡಿದರೆ ಡಿಸೆಂಬರ್ 23 ರಂದು ನಡೆಯುವ ವಿರಾಟ್ ಪಂಚ ಶಕ್ತಿ ಸಮಾವೇಶದಲ್ಲಿ ಅಭಿನಂದನೆ ಸಲ್ಲಿಸಲಾಗುವುದು. ಸರ್ಕಾರ ಮೀಸಲಾತಿ ನೀಡದಿದ್ದರೆ ಬೆಳಗಾವಿ ಸುವರ್ಣಸೌಧದ ಎದುರು ಬೃಹತ್ ಪ್ರತಿಭಟನೆ ಮಾಡಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಪಂಚಮಸಾಲಿ ಒಗ್ಗಟ್ಟು ಮುರಿಯಲು ಸರ್ಕಾರದ ಸರ್ಕಸ್..!
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜಯಮೃತ್ಯುಂಜಯ ಸ್ವಾಮೀಜಿ ಜೊತೆಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇನ್ನೊಂದು ಕಡೆ ರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ಮುರುಗೇಶ್ ನಿರಾಣಿ ದಾವಣಗೆರೆ ಹರಿಹರ ಪೀಠದ ವಚನಾನಂದ ಶ್ರೀಗಳ ಜೊತೆಗೆ ಪಂಚಮಸಾಲಿಗಳ ಹೋರಾಟವನ್ನು ಇಬ್ಭಾಗ ಮಾಡಿದ್ದಾರೆ. ಪಂಚಮಸಾಲಿಗಳಿಗೆ 2ಎ ಮೀಸಲಾತಿ ಕೊಡಬೇಕು ಎಂದು ಹೇಳಿಕೊಳ್ಳುತ್ತಲೇ ಬೇರೊಂದು ಮಾರ್ಗದಲ್ಲಿ ಬರುತ್ತಿದ್ದಾರೆ. ಜಯಮೃತ್ಯುಂಜಯ ಸ್ವಾಮೀಜಿಯನ್ನು ಪರೋಕ್ಷವಾಗಿ ಹಿಯ್ಯಾಳಿಸುತ್ತಾ, ಬಸನಗೌಡ ಪಾಟೀಲ್ ಯತ್ನಾಳ್ರನ್ನು ಟೀಕಿಸುತ್ತಾ ವಚನಾನಂದ ಶ್ರೀಗಳು ಸರ್ಕಾರದ ಪರವಾಗಿಯೇ ಮಾತನಾಡುತ್ತಿದ್ದಾರೆ.

ಯತ್ನಾಳ್ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನ..!
ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ಪಕ್ಷದ ವಿರುದ್ಧವೇ ಹೋರಾಟ ರೂಪಿಸಿದ್ದಾರೆ. ಇದನ್ನು ತಡೆಯಲು ಮುರುಗೇಶ್ ನಿರಾಣಿಯನ್ನು ಬಳಸಿಕೊಂಡಿರುವ ಸರ್ಕಾರ ವಚನಾನಂದ ಶ್ರೀಗಳನ್ನು ಜಯಮೃತ್ಯುಂಜಯ ಶ್ರೀಗಳ ಹೋರಾಟದಿಂದ ಹೊರಕ್ಕೆ ಕರೆದುಕೊಂಡು ಬಂದಿದೆ. ವಚನಾನಂದ ಶ್ರೀಗಳು ಮಾತನಾಡಿ, ಪಂಚಮಸಾಲಿಗಳಿಗೆ ರಾಜ್ಯ ಸರ್ಕಾರ 2ಎ ಮೀಸಲಾತಿ ನೀಡುತ್ತದೆ. ಅದೇ ಕಾರಣಕ್ಕೆ ವಿರೋಧ ಪಕ್ಷಗಳು ಅವಕಾಶ ಕೊಡಬೇಕು ಅನ್ನೋ ಕಾರಣಕ್ಕೆ ನಾನು ಈಗಾಗಲೇ ಮಾಜಿ ಸಿಎಂ ಕುಮಾರಸ್ವಾಮಿ ಹಾಗು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ ಎಂದಿದ್ದಾರೆ.
ಪಂಚಮಸಾಲಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ..!
ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡದಿದ್ದರೆ ಜಯಮೃತ್ಯುಂಜಯ ಸ್ವಾಮೀಜಿ ಟೀಂ ಸರ್ಕಾರದ ವಿರುದ್ಧ ಅಧಿವೇಶನದ ವೇಳೆ ಬೃಹತ್ ಹೋರಾಟ ನಡೆಸಲಿದೆ. ಮತ್ತೊಂದು ಕಡೆ ಮೀಸಲಾತಿ ಕೊಟ್ಟರೆ ಎರಡೂ ಕಡೆಯವರನ್ನು ಸಮಾಧಾನ ಮಾಡಬಹುದು ಅನ್ನೋದು ಸರ್ಕಾರದ ಉದ್ದೇಶ ಆಗಿರಬಹುದು. ಒಂದು ವೇಳೆ ಮೀಸಲಾತಿ ಪ್ರಮಾಣ ಬೆಟ್ಟದಂತೆ ಬೆಳೆಯುತ್ತಿರುವ ಕಾರಣ ಸುಪ್ರೀಂಕೋರ್ಟ್ಗೆ ಯಾರಾದ್ರೂ ಅರ್ಜಿ ಹಾಕಿದಾಗ ಮೀಸಲಾತಿಗೆ ತಡೆ ಸಿಗಬಹುದು. ಅಥವಾ ಪಂಚಮಸಾಲಿಗಳ ಬೆನ್ನಲ್ಲೇ ಒಕ್ಕಲಿಗ ಸಮುದಾಯ ಕೂಡ ಮೀಸಲಾತಿಗೆ ಹಕ್ಕೊತ್ತಾಯ ಮಾಡಿದೆ. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೊಟ್ಟರೆ, ಒಕ್ಕಲಿಗರಿಗೆ ಮೀಸಲಾತಿ ಕೊಡದಿದ್ದರೆ ಒಕ್ಕಲಿಗರ ವಿರೋಧವನ್ನು ಎದುರಿಸಬೇಕಾಗುತ್ತದೆ. ಒಟ್ಟಿನಲ್ಲಿ ಈ ಬಾರಿ ಬಿಜೆಪಿಗೆ ಮೀಸಲಾತಿ ಶಾಪ ಸಿಗುವ ಎಲ್ಲಾ ಸಾಧ್ಯತೆಗಳಿವೆ.
ಕೃಷ್ಣಮಣಿ