ಆಡಳಿತವನ್ನು ಮರೆತು ಸದಾ ಚುನಾವಣಾ ರಾಜಕೀಯದಲ್ಲಿ ನಿರತವಾಗಿರುವ ಬಿಜೆಪಿಯು ಈಗ ಮುಂಬರುವ ವಿಧಾನಸಭೆ ಚುನಾವಣೆಗಳತ್ತ ಗಮನಹರಿಸಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್ ಹೊರತುಪಡಿಸಿ ಉತ್ತರ ಪ್ರದೇಶ ಇತರೆಡೆಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ನಂತರ ಈ ವರ್ಷಾಂತ್ಯದಲ್ಲಿ ನಡೆಯುವ ಗುಜರಾತ್, ಹಿಮಾಚಲ ಪ್ರದೇಶ ಮತ್ತು ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯತ್ತ ಬಿಜೆಪಿ ಗಮನ ಹರಿಸಿದೆ.
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕುರ್ ಅವರು ದೆಹಲಿಯಲ್ಲಿ ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ತಂದೊಡ್ಡಿರುವ ಸವಾಲುಗಳು ಹಾಗೂ ಅವುಗಳನ್ನು ಮಟ್ಟಹಾಕಲು ತೆಗೆದುಕೊಳ್ಳಬೇಕಾದ ನಿರ್ಧಾರಗಳ ಕುರಿತು ಚರ್ಚೆ ನಡೆಸಲಾಗಿದೆ. ಏಕೆಂದರೆ, ಕಳೆದ ನವೆಂಬರ್’ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯು ಒಂದು ವಿಧಾನಸಭಾ ಕ್ಷೇತ್ರ ಹಾಗೂ ಒಂದು ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿತ್ತು. ಇದು ಬಿಜೆಪಿಯ ಪಾಲಿಗೆ ಎಚ್ಚರಿಕೆಯ ಗಂಟೆಯಾಗಿ ಬಾರಿಸಿದೆ.
ಮುಖ್ಯವಾಗಿ, ಮೇ-ಜೂನ್ ತಿಂಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಗಮನಾರ್ಹ ಸಾಧನೆ ಮಾಡುವ ಅನಿವಾರ್ಯತೆಗೆ ಸಿಲುಕಿದೆ. ಬೂತ್ ಮಟ್ಟದ ಕಾರ್ಯಕರ್ತರ ಉತ್ಸಾಹ, ಜನರ ಒಲವು ಯಾರೆಡೆಗಿದೆ ಎಂಬುದನ್ನು ತಿಳಿಯಲು ಹಿಮಾಚಲ ಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಹಕಾರಿಯಾಗಲಿದೆ. ಈ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದರೆ, ವಿಧಾನಸಭಾ ಚುನಾವಣೆಯಲ್ಲಿಯೂ ಮತ್ತೆ ಅಧಿಕಾರ ಹಿಡಿಯಬಹುದು ಎಂಬ ಆಲೋಚನೆ ಬಿಜೆಪಿಯದ್ದು.
ಪ್ರಧಾನಿ ನರೇಂದ್ರ ಮೋದಿಯವರ ಗುಜರಾತ್ ಭೇಟಿ ಈಗಾಗಲೇ ಗುಜರಾತಿನಲ್ಲಿ ಚುನಾವಣೆಯ ಗಾಳಿಯನ್ನು ಹೊತ್ತು ತಂದಿದೆ. ಉತ್ತರ ಪ್ರದೇಶದಲ್ಲಿ ಮಾಡಿರುವಂತೆಯೇ, ಗುಜರಾತ್ ಹಾಗೂ ಕರ್ನಾಟಕದಲ್ಲಿಯೂ ಹಲವು ಸಮಾವೇಶಗಳನ್ನು ಹಮ್ಮಿಕೊಳ್ಳಲಿರುವ ಪ್ರಧಾನಿ ಮೋದಿ, ಸಾಲು ಸಾಳು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆಗಳಿವೆ. ಗುಜರಾತಿಗೆ ಕೇಂದ್ರದ ಮಂತ್ರಿಗಳ ದಂಡು ದೌಡಾಯಿಸಿದ್ದು ಯಾವುದೇ ಕಾರಣಕ್ಕೂ ಪ್ರಧಾನಿ ಮೋದಿಯ ತವರು ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಬಾರದು ಎಂಬ ಜಿದ್ದಿಗೆ ಬಿಜೆಪಿ ನಾಯಕರು ಬಿದ್ದಿದ್ದಾರೆ.+

ಕರ್ನಾಟಕದಲ್ಲಿ ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದ್ದು ನಾಯಕರನ್ನು ಆತಂಕಕ್ಕೆ ಈಡುಮಾಡಿದೆ. ಇದರ ನಡುವೆ ಕಾಂಗ್ರೆಸ್ ಪ್ರತಿ ಬಾರಿಯೂ ಸರ್ಕಾರದ ವಿರುದ್ಧ ದಿಟ್ಟವಾದ ಹೊರಾಟವನ್ನು ನಡೆಸುತ್ತಾ ಬಂದಿರುವುದರಿಂದ ಮುಂದಿನ ಬಾರಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಆದರೆ, ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ ಜನರಲ್ಲಿ ಬಿಜೆಪಿ ಮೇಲಿನ ಭರವಸೆಯನ್ನು ಮತ್ತೆ ಸದೃಢಗೊಳಿಸಲಿದೆ ಎಂಬ ವಿಶ್ವಾಸವನ್ನು ಅರುಣ್ ಸಿಂಗ್ ವ್ಯಕ್ತಪಡಿಸಿದ್ದಾರೆ.
ಹೀಗೆ ಒಂದರ ನಂತರ ಇನ್ನೊಂದರಂತೆ ಚುನಾವಣೆಗಳಲ್ಲಿಯೇ ನಿರತರಾಗಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಆಡಳಿತವನ್ನು ಸಂಪೂರ್ಣವಾಗಿ ಮರೆತಂತಿದೆ. ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಸಂದರ್ಭದಲ್ಲಿ ಭಾರತೀಯ ವಿದ್ಯಾರ್ಥಿಗಳು ಭಾರತಕ್ಕೆ ಮರಳುವುದು ಹೇಗೆ ಎಂಬ ಆತಂಕದಲ್ಲಿದ್ದರೆ, ಪ್ರಧಾನಿ ಮೋದಿ ಉತ್ತರ ಪ್ರದೇಶದ ಚುನಾವಣಾ ಸಮಾವೇಶಗಳಲ್ಲಿ ನಿರರಾಗಿದ್ದರು. ಕೊನೆಯ ಕ್ಷಣಕ್ಕೆ ‘ಆಪರೇಷನ್ ಗಂಗಾ’ ಎಂಬ ಯೋಜನೆಯ ಮೂಲಕ ಯುದ್ಧಪೀಡಿತ ಉಕ್ರೇನ್ ದೇಶ ತೊರೆದ ವಿದ್ಯಾರ್ಥಿಗಳನ್ನು ಭಾರತಕ್ಕೆ ಕರೆತರಲಾಯಿತು. ಇದನ್ನೂ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತಹ ನಿಕೃಷ್ಟ ಮನಸ್ಥಿತಿಯನ್ನು ಸರ್ಕಾರ ಪ್ರದರ್ಶಿಸಿತ್ತು.
ಕಳೆದ ಮೂರು ನಾಲ್ಕು ವರ್ಷಗಳಿಮದ ದೇಶದಲ್ಲಿ ತಲೆದೋರಿರುವ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ, ಮಹಿಳೆಯರ ಮೇಲಿನ ದೌರ್ಜನ್ಯ ಮುಂತಾದ ಜ್ವಲಂತ ಸಮಸ್ಯೆಗಳ ಕುರಿತು ತುಟಿಪಿಟಕ್ಕೆನ್ನದ ಸರ್ಕಾರ ಸಚಿವರು ಚುನಾವಣೆ ಬಂದಾಗ ಮಾತ್ರ ಪಾದರಸದಂತಾಗುತ್ತಾರೆ.
ಕರಾಳ ಕೃಷಿ ಕಾಯ್ದೆಗಳ ವಿರುದ್ದ ಹೋರಾಟ ನಡೆಸುತ್ತಿದ್ದವರನ್ನು ‘ಆಂದೋಲನ ಜೀವಿ’ಗಳೆಂದು ಸಂಸತ್ತಿನಲ್ಲಿ ಟೀಕಿಸುವ ಭರದಲ್ಲಿ ಪ್ರಧಾನಿ ಮೋದಿ ತಾವೊಬ್ಬ ‘ಚುನಾವಣಾ ಜೀವಿ’ ಆಗಿರುವ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಸರ್ಕಾರ ರಚಿಸುವುದು ಎಂದರೆ, ದೇಶದಲ್ಲಿ ಅರ್ಥಹೀನ ‘ಡಬಲ್ ಇಂಜಿನ್’ ನಿರ್ಮಿಸುವ ಮೆಕ್ಯಾನಿಕ್ ಆಗುವುದಲ್ಲ, ದೇಶದ ‘ಎಲ್ಲಾ ವರ್ಗದ’ ಜನರ ಹಿತಕ್ಕಾಗಿ ದುಡಿಯುವುದು ಎಂಬುದನ್ನು ಬಿಜೆಪಿ ಮನಗಾಣಬೇಕಿದೆ.