ಇತ್ತೀಚಿಗೆ ರಾಜ್ಯದಲ್ಲಿ ನಡೆದ ಹಾನಗಲ್ ಮತ್ತು ಸಿಂಧಗಿ ಉಪುನಾವಣೆಯಲ್ಲಿ ಬಿಜೆಪಿಗೆ ಸಿಹಿ-ಕಹಿ ಎರಡು ಲಭಿಸಿದೆ. ಸಿಂಧಗಿಯಲ್ಲಿ ಭಾರಿ ಅಂತರದಲ್ಲಿ ಪಕ್ಷ ಜಯ ಗಳಿಸಿದರೆ, ಹಾನಗಲ್‌ನಲ್ಲಿ ಹೀನಾಯ ಸೋಲನ್ನು ಅನುಭವಿಸಿತ್ತು. ಈ ಉಪಚುನಾವಣೆಗಳು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ಬಿಜೆಪಿ ನಾಯಕರು ಈಗಾಗಲೇ ಹೇಳಿದ್ದಾರೆ
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟನೆ ಅಗತ್ಯವಿದ್ದು ತಾವು ರಾಜ್ಯ ಪ್ರವಾಸ ಕೈಗೊಳ್ಳುವುದಾಗಿ ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದರು. ಅದನ್ನು ಇತ್ತೀಚಿಗೆ ಪುನರುಚ್ಛರಿಸಿದ ಬಿಎಸ್‌ವೈ ʻಜನಸ್ವರಾಜ್ʼ ಯಾತ್ರೆಗೆ ಯೋಜನೆಯನ್ನು ಸಿದ್ದಪಡಿಸಲಾಗಿದೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಹುರುಪು ತುಂಬಿ ಸಂಘಟನೆ ಬಲವರ್ಧನೆಗಾಗಿ ಈ ಯಾತ್ರೆಯನ್ನು ಆಯೋಜಿಸಲಾಗಿದೆ.
ಕೇಂದ್ರದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಎಸ್‌ವೈ ಮತ್ತು ಹಾಲಿ ಬೊಮ್ಮಾಯಿ ಸರ್ಕಾರದ ಯೋಜನೆಗಳು, ಸಾಧನೆ ಕುರಿತು ವ್ಯಾಪಕ ಪ್ರಚಾರದ ಮೂಲಕ ಮಾಹಿತಿ ನೀಡುವುದು ಈ ಯಾತ್ರೆಯ ಮುಖ್ಯ ಉದ್ದೇಶವಾಗಿದೆ.
ಯಾತ್ರೆಯ ಭಾಗವಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದು ನವೆಂಬರ್ 19-23ರ ವರೆಗೆ ಈ ತಂಡಗಳು ರಾಜ್ಯ ಪ್ರವಾಸ ಕೈಗೊಳ್ಳಲಿದೆ. ಪ್ರತಿ ದಿನ ತಲಾ ಎರಡು ಜಿಲ್ಲೆಗಳಲ್ಲಿ ಯಾತ್ರೆ, ಸಂಘಟನಾ ಸಮಾವೇಶವನ್ನು ಈ ತಂಡಗಳು ನಡೆಸಲಿದೆ. ಯಾತ್ರೆಯಲ್ಲಿ ಬೆಂಗಳೂರು ನಗರವನ್ನು ಸೇರಿಸದಿರಿರುವುದು ಗಮನಾರ್ಹಾವಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಅವರ ಸಂಪುಟದ ಅನೇಕರನ್ನು ಈ ಯಾತ್ರೆಯಲ್ಲಿ ಸೇರಿಸಲಾಗಿಲ್ಲ.
ಮೊದಲನೆಯ ತಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮತ್ತು ವಸತಿ ಸಚಿವ ಸೋಮಣ್ಣ ಮುನ್ನಡಸಲಿದ್ದಾರೆ. ಈ ತಂಡವು ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್‌ನಲ್ಲಿ ಯಾತ್ರೆಯನ್ನ ನಡೆಸಲಿದೆ.
ಎರಡನೆಯ ತಂಡವನ್ನು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸಚಿವರಾದ ಗೋವಿಂದ್ ಕಾರಜೋಳ, ಶ್ರೀರಾಮುಲು ಮುನ್ನಡೆಸಲಿದ್ದಾರೆ. ಈ ತಂಡವು ಉತ್ತರ ಕನ್ನಡ, ಹಾವೇರಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಯಾತ್ರೆಯನ್ನ ನಡೆಸಲಿದೆ.
ಮೂರನೆಯ ತಂಡವನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರದ ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಎಸ್.ಟಿ.ಸೋಮಶೇಖರ್ ಮುನ್ನಡೆಸಲಿದ್ದಾರೆ. ಈ ತಂಡವು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನದಲ್ಲಿ ಯಾತ್ರೆಯನ್ನ ನಡೆಸಲಿದೆ.
ನಾಲ್ಕನೆಯ ತಂಡವನ್ನು ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವರಾದ ಡಾ. ಸಿ.ಎನ್. ಅಶ್ವತ್ಥನಾರಾಯಣ, ಬೈರತಿ ಬಸವರಾಜು, ಗೋಪಾಲಯ್ಯ ಮತ್ತು ಬಿಎಸ್‌ವೈ ಪುತ್ರ ವಿಜಯೇಂದ್ರ ಮುನ್ನಡೆಸಲಿದ್ದಾರೆ. ಈ ತಂಡವು ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಯಾತ್ರೆಯನ್ನ ನಡೆಸಲಿದೆ.