ಇಂದು ಬಿಜೆಪಿಯ ರೆಬೆಲ್ಸ್ ತಂಡ ದೆಹಲಿಗೆ ತೆರಳುತ್ತಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಇಲ್ಲೀವರೆಗೂ ಯತ್ನಾಳ್ ಜೊತೆಗೆ ಗುರ್ತಿಸಿಕೊಂಡಿರುವ ಶಾಸಕರು ತೆರಳಲಿದ್ದಾರೆ ಎನ್ನಲಾಗಿದೆ. ದೆಹಲಿಗೆ ತೆರಳುವ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಬಿಜೆಪಿ ನಾಯಕರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಮೈಸೂರಿನಲ್ಲಿ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಮೈಸೂರಿನಲ್ಲಿ ಕೆಲವು ಪ್ರಮುಖರ ಜೊತೆ ಸಭೆ ನಡೆಸಿರುವ ರೆಬಲ್ಸ್ ನಾಯಕರು, ಆ ಬಳಿಕ ಚಾಮುಂಡಿ ಬೆಟ್ಟದ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಾನು ಕೈಗೊಂಡ ಕಾರ್ಯದಲ್ಲಿ ಜಯ ಸಿಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಬೆಂಗಳೂರಿನ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಬಿಜೆಪಿ ರೆಬೆಲ್ ನಾಯಕರು ಭಾನುವಾರ ಮತ್ತೊಮ್ಮೆ ಸಭೆ ನಡೆಸಿದ ಬಳಿಕ ಸಾಕಷ್ಟು ನಿರ್ಧಾರಗಳನ್ನು ತೆಗೆದುಕೊಂಡು ದೆಹಲಿಗೆ ತರಳುತ್ತಿದ್ದಾರೆ. ಈಗಾಗಲೇ ಜಿಲ್ಲಾಧ್ಯಕ್ಷರ ನೇಮಕದ ಬಗ್ಗೆ ಬಹಿರಂಗವಾಗಿಯೇ ಬಂಡಾಯ ಸಾರಿದ್ದು, ಹೈಕಮಾಂಡ್ ಮೇಲೆ ಒತ್ತಡ ಹೇರುವ ಉದ್ದೇಶದಿಂದ ದೆಹಲಿಗೆ ತೆರಳುತ್ತಿದ್ದಾರೆ.
ಇನ್ನೊಂದು ಕಡೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಯತ್ನಾಳ್ ಬಣದಿಂದ ಸ್ಪರ್ಧೆ ಮಾಡುವ ನಿರ್ಧಾರ ಹೊರಬಿದ್ದಿದೆ. ಆದರೆ ಯಾರು ಅಭ್ಯರ್ಥಿ ಆಗಬೇಕು ಅನ್ನೋ ವಿಚಾರವನ್ನು ದೆಹಲಿಯಲ್ಲಿ ಸಂಸದರ ಸಭೆ ಕರೆದು ನಿರ್ಧಾರ ಮಾಡಲು ಪ್ಲ್ಯಾನ್ ಮಾಡಲಾಗಿದೆ. ಹೀಗಾಗಿ ದೆಹಲಿ ಟೂರ್ ಮಹತ್ವ ಪಡೆದುಕೊಂಡಿದೆ.
ಇಷ್ಟೆಲ್ಲಾ ಬಂಡಾಯದ ನಡುವೆ ರಾಜ್ಯ ಬಿಜೆಪಿ ಅಧ್ಯಕ್ಷರಿಗೆ ಮತ್ತೊಂದು ತಲೆಬಿಸಿ ಶುರುವಾಗಿದೆ. ಬಿಜೆಪಿಯ ಆಂತರಿಕ ಅಸಮಾಧಾನದ ಬೆನ್ನಲ್ಲೇ ತವರು ಕ್ಷೇತ್ರದಲ್ಲಿ ರೈತರಿಂದ ಆಕ್ರೋಶ ವ್ಯಕ್ತವಾಗ್ತಿದೆ. ಒಂದು ಕಡೆ ಅಸಮಾಧಾನ ಬೇಗುದಿ ಇನ್ನೊಂದೆಡೆ ಶಾಸಕರ ವಿರುದ್ಧ ಪ್ರತಿಭಟನೆಗೆ ಮುಂದಾಗಿರುವ ರೈತರು. ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಹಾಗೂ ಸಂಸದ ರಾಘವೇಂದ್ರ ವಿರುದ್ಧ ಪ್ರತಿಭಟನೆಗೆ ರೈತರು ನಿರ್ಧಾರ ಮಾಡಿದ್ದಾರೆ. ಅವೈಜ್ಞಾನಿಕ ವಿದ್ಯುತ್ ಮಾರ್ಗ ನಿರ್ಮಾಣ ವಿರೋಧಿಸಿ ಪ್ರತಿಭಟನೆಗೆ ಸಿದ್ಧರಾಗ್ತಿದ್ದಾರೆ. ಇಂದು ಶಿಕಾರಿಪುರದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ ರೈತರು.