ಬೆಂಗಳೂರು: ಪ್ರಚಾರ ಹಾಗೂ ಚುನಾವಣೆಗಾಗಿ ಅಪೂರ್ಣಗೊಂಡಿರುವ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಬಿಜೆಪಿ ಉದ್ಘಾಟನೆ ಮಾಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಆರೋಪಿಸಿದ್ದಾರೆ.
ಈ ಕುರಿತು ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮುಳುಗುವ ಹಡಗನಂತಾಗಿರುವ ಬಿಜೆಪಿಯು ಈಗ ಸಾರ್ವಜನಿಕರ ರಕ್ಷಣೆಯನ್ನು ಪಣಕ್ಕಿಟ್ಟು ಜನರ ಜೀವದ ಜತೆ ಚೆಲ್ಲಾಟವಾಡುತ್ತಾ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಹೆದ್ದಾರಿ ಉದ್ಘಾಟನೆಗೆ ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.
ಟೋಲ್ ಹೆಸರಲ್ಲಿ ಕನ್ನಡಿಗರಿಂದ ಹಣ ಸಂಗ್ರಹಿಸಲು ಮುಂದಾಗಿರುವ ಬಿಜೆಪಿ ಅವೈಜ್ಞಾನಿಕ ರಸ್ತೆ ವಿನ್ಯಾಸ, ನೀರು ಸುಗಮವಾಗಿ ಹರಿದುಹೋಗಲು ಅವಕಾಶ ಕಲ್ಪಿಸಿಲ್ಲ. ಪ್ರವಾಹ ನಿಯಂತ್ರಣ ಮಾರ್ಗಸೂಚಿ ಅನುಸರಿಸಿಲ್ಲ. ಇನ್ನು ರೈತರು ತಮ್ಮ ಊರಿನಿಂದ ಪಟ್ಟಣಕ್ಕೆ ಹೋಗಲು ಸರಿಯಾದ ಸಂಪರ್ಕ ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಈ ಎಲ್ಲ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯ ಬಿಜೆಪಿ ಸರ್ಕಾರವು ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.
2002ರಲ್ಲಿ ಕಾಂಗ್ರೆಸ್ ಸರ್ಕಾರ ಎರಡು ಪಥದ ರಾಜ್ಯ ಹೆದ್ದಾರಿಯನ್ನು ನಾಲ್ಕು ಪಥದ ಹೆದ್ದಾರಿಯನ್ನಾಗಿ ಮಾಡಿ, ಟೋಲ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ಮಾರ್ಚ್ 04, 2014: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಒತ್ತಾಯದ ಮೇರೆಗೆ ರಾಜ್ಯ ಹೆದ್ದಾರಿಯಾಗಿದ್ದ ಬೆಂಗಳೂರು ಮೈಸೂರು ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ 275 ಆಗಿ ಅಧಿಸೂಚನೆ ಹೊರಡಿಸಿದರು. ಅಕ್ಟೋಬರ್ 4, 2016ರ ವೇಳೆಗೆ: ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ 4,400 ಕೋಟಿ ವೆಚ್ಚ ಮಾಡಿ 2500 ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿತು.
ಫೆಬ್ರವರಿ 13, 2018: ರಾಜ್ಯ ಕಾಂಗ್ರೆಸ್ ಸರ್ಕಾರ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಗೆ 6420 ಕೋಟಿ ಹಣವನ್ನು ಮಂಜೂರು ಮಾಡಿತ್ತು. ಬೆಂಗಳೂರಿನಿಂದ ನಿಡಘಟ್ಟದ 56 ಕಿ.ಮೀ ಉದ್ದ ರಸ್ತೆಗೆ 3501 ಕೋಟಿ, ನಿಡಘಟ್ಟದಿಂದ ಮೈಸೂರಿನ 62 ಕಿ.ಮೀ ಉದ್ದದ ರಸ್ತೆಗೆ 2919 ಕೋಟಿ ನೀಡಿತ್ತು. ಈಗ ಈ ರಸ್ತೆಯ ಒಟ್ಟು ವೆಚ್ಚ 10 ಸಾವಿರ ಕೋಟಿ ಅಂದಾಜು ಮಾಡಲಾಗಿದೆ. ಮಾರ್ಚ್ 12, 2023ರಂದು: ಮೋದಿ ಹಾಗೂ ಬೊಮ್ಮಾಯಿ ಸರ್ಕಾರ ಅಪೂರ್ಣಗೊಂಡಿರುವ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಉದ್ಘಾಟನೆ ಮಾಡುತ್ತಿವೆ. ಆಮೂಲಕ ಮುಂಬರುವ ಚುನಾವಣೆಯಲ್ಲಿ 40% ಕಮಿಷನ್ ಭ್ರಷ್ಟಾಚಾರದ ಹೊರತಾಗಿ ತಮ್ಮ ಸಾಧನೆ ಏನೂ ಇಲ್ಲದ ಕಾರಣ ಈ ಯೋಜನೆಯ ಪ್ರಚಾರ ಪಡೆಯಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ, ಸಿಎಂಗೆ ಹಲವು ಪ್ರಶ್ನೆಗಳು
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸುಮಾರು 21 ಕಿ.ಮೀ (118 ಕಿ.ಮೀ ಪೈಕಿ) ಉದ್ದದಷ್ಟು ರಸ್ತೆ ವಿವಿಧ ಭಾಗಗಳಲ್ಲಿ ಅಪೂರ್ಣಗೊಂಡಿದೆ. ಅಪೂರ್ಣಗೊಂಡಿರುವ ಹೆದ್ದಾರಿಯನ್ನು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡುತ್ತಿರುವುದು ಚುನಾವಣೆ ಗಿಮಿಕ್ ಅಲ್ಲವೇ?
ರಾಷ್ಟ್ರೀಯ ಹೆದ್ದಾರಿ 275 ಬೆಂಗಳೂರು- ಮೈಸೂರು ರಸ್ತೆ ಅಪೂರ್ಣಗೊಂಡಿದ್ದು, ಈ ರಸ್ತೆಯ ಅನೇಕ ಕಾಮಗಾರಿಗಳು ಪೂರ್ಣಗೊಂಡಿಲ್ಲ.ಅಪೂರ್ಣಗೊಂಡಿರುವ ರಾಷ್ಟ್ರೀಯ ಹೆದ್ದಾರಿಯನ್ನು ಪ್ರಧಾನಮಂತ್ರಿಗಳು ಉದ್ಘಾಟನೆ ಮಾಡುತ್ತಿರುವುದೇಕೆ?
118 ಕಿ.ಮೀ ಉದ್ದದ ಹೆದ್ದಾರಿಯ ಎರಡೂ ಭಾಗಗಳಲ್ಲಿ ಸರ್ವೀಸ್ ರಸ್ತೆ ಅಪೂರ್ಣಗೊಂಡಿದೆ. ಪ್ರಧಾನಮಂತ್ರಿಗಳು ಸರ್ವೀಸ್ ರಸ್ತೆ ಪೂರ್ಣಗೊಳಿಸದೇ ರೈತರು, ಜನಸಾಮಾನ್ಯರ ರಕ್ಷಣೆ ಪಣಕ್ಕಿಟ್ಟಿರುವುದೇಕೆ?
ಬೆಂಗಳೂರು ಮೈಸೂರು ಹೆದ್ದಾರಿಯನ್ನು ಇಂಡಿಯನ್ ರೋಡ್ ಕಾಂಗ್ರೆಸ್ (IRC) ಗುಣಮಟ್ಟದಲ್ಲಿ ನಿರ್ಮಾಣ ಮಾಡಿಲ್ಲ. ಹಲವೆಡೆಗಳಲ್ಲಿ ಕಳಪೆ ಗುಣಮಟ್ಟದ ಸಾಮಾಗ್ರಿ ಬಳಸಿದ್ದು, ಒಟ್ಟಾರೆ ರಸ್ತೆಯ ನಿರ್ಮಾಣ ಯೋಜನೆ ಕಳಪೆಯಾಗಿದೆ.
ಬೆಂಗಳೂರು- ಮೈಸೂರು ಹೆದ್ದಾರಿಯಿಂದ ಮೋದಿ ಸರ್ಕಾರ 15 ಸಾವಿರ ಕೋಟಿ ಲಾಭ ಮಾಡಲು ಮುಂದಾಗಿರುವುದೇಕೆ?
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ವೆಚ್ಚ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 6420 ಕೋಟಿಯಷ್ಟಿತ್ತು. ಬಿಜೆಪಿ ಅವಧಿಯಲ್ಲಿ ಇದು 10 ಸಾವಿರ ಕೋಟಿಗೆ ಹೆಚ್ಚಾಗಿದೆ. ಈ ಹೆದ್ದಾರಿಯ ನಿರ್ಮಾಣದ ವೆಚ್ಚ ದುಪ್ಪಟ್ಟಾಗಲು ಕಾರಣವೇನು ?
ಪ್ರವಾಹ ನಿಯಂತ್ರಣ ಮಾರ್ಗಸೂಚಿ ಅನುಸರಿಸದೇ, ಹೆದ್ದಾರಿಯ ಎರಡೂ ಬದಿಯ ರೈತರಿಗೆ ಸರಿಯಾದ ನೀರಾವರಿ ವ್ಯವಸ್ಥೆ ಕಲ್ಪಿಸದೇ ಈ ಹೆದ್ದಾರಿ ಉದ್ಘಾಟನೆ ಮಾಡುತ್ತಿರುವುದೇಕೆ?
ಪ್ರಧಾನಮಂತ್ರಿಗಳು ಹಾಗೂ ಮಂಡ್ಯ ಮತ್ತು ಮೈಸೂರಿನ ಸಂಸದರು ಪ್ರಯಾಣಿಕರು ಹಾಗೂ ರೈತರ ದುರಾವಸ್ಥೆಯನ್ನು ಕಂಡರೂ ಈ ಬಗ್ಗೆ ಅಸಡ್ಡೆ ತೋರುತ್ತಿರುವುದೇಕೆ? ಎಂದು ಪ್ರಶ್ನಿಸಿರುವ ಅವರು ಈ ಎಲ್ಲಾ ಪ್ರಶ್ನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.