ಬೆಂಗಳೂರು:ಏ.0೪: ರಾಜ್ಯ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ವರ್ಚಸ್ಸನ್ನು ಬಳಸಲು ಬಿಜೆಪಿ ಯೋಜನೆ ಹಾಕಿಕೊಂಡಿದೆ. ಈಗಾಗಲೇ ಹಲವು ಉದ್ಘಾಟನಾ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ನಡೆಸಿಕೊಟ್ಟಿರು ಪ್ರಧಾನಿ ಮೋದಿ, ಎಲೆಕ್ಷನ್ ಮುಗಿಯುವುದರೊಳಗೆ ರಾಜ್ಯದಲ್ಲಿ 20 ರ‍್ಯಾಲಿ ನಡೆಸುವ ಸಾಧ್ಯತೆ ಇದೆ.

ಉದ್ಘಾಟನೆ, ಲೋಕಾರ್ಪಣೆ ಹೆಸರಲ್ಲಿ ಮಂಡ್ಯ, ಮೈಸೂರು, ಕಲಬುರಗಿ, ಧಾರವಾಡ, ತುಮಕೂರು, ಬೆಂಗಳೂರು ಜಿಲ್ಲೆಗಳಿಗೆ ಭೇಟಿ ನೀಡಿ ಒಂದು ಸುತ್ತಿನ ಪ್ರಚಾರ ಮಾಡಿ ಹೋಗಿರುವ ಪ್ರಧಾನಿ ಮೋದಿ, ನೇರವಾಗಿ ಪ್ರಚಾರ ಕಾರ್ಯಕ್ಕೆ ಧುಮುಕಲಿದ್ದಾರೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ 20 ರ‍್ಯಾಲಿಯನ್ನು ಪ್ರಧಾನಿ ಮೋದಿ ನಡೆಸಲಿದ್ದಾರೆ ಎಂದು ಕರ್ನಾಟಕ ಬಿಜೆಪಿಯ ಮೂಲಗಳಿಂದ ತಿಳಿದುಬಂದಿದೆ.

ನರೇಂದ್ರ ಮೋದಿ ಮಾತ್ರವಲ್ಲದೇ ಅಮಿತ್ ಶಾ, ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್ ಸೇರಿ ಹಲವು ಬಿಜೆಪಿಯ ಪ್ರಬಲ ನಾಯಕರು ರಾಜ್ಯ ಪ್ರವಾಸ ಮಾಡಲಿದ್ದಾರೆ. ಪಕ್ಷಕ್ಕೆ ದಕ್ಷಿಣ ಭಾರತದಲ್ಲಿ ಇರುವ ಒಂದೇ ನೆಲೆಯನ್ನು ಕಾಪಾಡಿಕೊಳ್ಳಲು ಬಿಜೆಪಿ ಹೆಣಗಾಡುತ್ತಿದ್ದು, ಈಗಾಗಲೇ ಬಂದಿರುವ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿಯಲ್ಲಿ ಆತಂಕ ಸೃಷ್ಟಿಸಿವೆ.