ದಕ್ಷಿಣ ಕನ್ನಡ (Dakshina kannada) ಜಿಲ್ಲೆಯಲ್ಲಿ ಹಿಂದು ಕಾರ್ಯಕರ್ತರನ್ನು ಗಡಿಪಾರು ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಜೂನ್ 9 ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಬಿಜೆಪಿ ನಾಯಕರ ನಿಯೋಗ ಭೇಟಿ ನೀಡಲು ಮುಂದಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರ (BY Vijayendra) ನೇತೃತ್ವದಲ್ಲಿ ಬಿಜೆಪಿ (Bjp) ನಿಯೋಗ ಜಿಲ್ಲೆಗೆ ಭೇಟಿ ನೀಡಲಿದೆ.

ಮಂಗಳೂರಿನ ಬಂಟ್ವಾಳದಲ್ಲಿ ನಡೆದ ಅಬ್ದುಲ್ ರಹಿಮಾನ್ (Abdul rahiman) ಕೊಲೆಯ ನಂತರ ಕರಾವಳಿ ಪ್ರಕ್ಷುಬ್ಧಗೊಂಡ ಹಿನ್ನಲೆ ರಾಜ್ಯ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಆದ್ರೆ ಈ ಮಧ್ಯೆ ಹಿಂದೂ ನಾಯಕರ ಮತ್ತು ಕಾರ್ಯಕರ್ತರ ಗಡಿಪಾರಿಗೂ ರಾಜ್ಯ ಸರ್ಕಾರ ಮುಂದಾಗಿದೆ.
ಈ ಕ್ರಮವನ್ನು ಖಂಡಿಸಿರುವ ಬಿಜೆಪಿ, ಇದು ರಾಜ್ಯ ಸರ್ಕಾರದ ಹಿಂದೂ ವಿರೋಧಿ ಧೋರಣೆ ಮತ್ತು ಮುಸ್ಲಿಂ ಓಲೈಕೆಯನ್ನು ಎತ್ತಿ ತೋರಿಸುತ್ತದೆ ಎಂದು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಹೀಗಾಗಿ ಬಿ.ವೈ.ವಿಜಯೇಂದ್ರ, ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಡಿ.ವಿ. ಸದಾನಂದಗೌಡ, ಅರವಿಂದ ಬೆಲ್ಲದ್, ಕೋಟಾ ಶ್ರೀನಿವಾಸಪೂಜಾರಿ, ಸುನಿಲ್‌ಕುಮಾರ್, ಸಿ.ಟಿ.ರವಿ, ಎನ್.ರವಿಕುಮಾರ್, ಭಾಸ್ಕರ್ ರಾವ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಈ ವೇಳೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿ ಹಿಂದೂ ನಾಯಕರು ಮತ್ತು ಕಾರ್ಯಕರ್ತರನ್ನು ಗಡಿಪಾರು ಮಾಡದಂತೆ ಮನವಿ ಪತ್ರವನ್ನು ಬಿಜೆಪಿ ನಿಯೋಗ ನೀಡಲಿದೆ. ಇದರ ಜೊತೆಗೆ ಮೇಲಿಂದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ, ಕೊಲೆ ಪ್ರಕರಣಗಳು ದಾಖಲಾಗುತ್ತಿದೆ.
ಹೀಗಾಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಪಡಿಸುವಂತೆ ಬಿಜೆಪಿ ನಿಯೋಗ ಜಿಲ್ಲೆಗೆ ಭೇಟಿ ನೀಡಲಿಯಿಸಿದೆ.