ಮಂಗಳೂರು : ರಾಜ್ಯ ಸರ್ಕಾರದ ಮೇಲೆ 40 ಪರ್ಸೆಂಟ್ ಕಮಿಷನ್ ಆರೋಪ ಮಾಡುತ್ತಿರುವ ವಿಪಕ್ಷಗಳ ವಿರುದ್ಧ ಮಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ , ರಾಜ್ಯಸಭಾ ಸದಸ್ಯ ಸುಧಾಂಶು ತ್ರಿವೇದಿ ಗುಡುಗಿದ್ದಾರೆ. ಲಂಚಕ್ಕೆ ಬೇಡಿಕೆ ಇಡುವುದು ಹೇಗೆ ಅಪರಾಧವೋ ಅದೇ ರೀತಿ ಲಂಚ ಕೊಡುವುದು ಕೂಡ ಅಪರಾಧವೇ . ಲಂಚ ಸ್ವೀಕರಿಸಿದವರ ಹೆಸರು ಹಾಗೂ ಮಾಹಿತಿಯನ್ನು ಮುಚ್ಚಿಡೋದು ಕೂಡ ಅಪರಾಧವೇ. ಇಂತಹ ಪ್ರಕರಣಗಳಿದ್ದರೆ ಸಂಪೂರ್ಣ ಸಾಕ್ಷ್ಯಾಧಾರಗಳೊಂದಿಗೆ ಪ್ರಕರಣ ದಾಖಲಿಸಿ. ಅದನ್ನು ಬಿಟ್ಟು ಕೇವಲ ಆರೋಪ ಮಾಡೋದಲ್ಲ ಎಂದು ವಿಪಕ್ಷಗಳಿಗೆ ಟಾಂಗ್ ನೀಡಿದ್ದಾರೆ.
ಈ ಹಿಂದೆ 85 ಪರ್ಸೆಂಟ್ ಸರ್ಕಾರ ಎಂಬ ಆರೋಪ ಹೊತ್ತಿದ್ದ ಪಕ್ಷವೇ ಇಂದು ನಮಗೆ 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡ್ತಿರೋದು ನಿಜಕ್ಕೂ ಹಾಸ್ಯಾಸ್ಪದ. ಭ್ರಷ್ಟ ಕಾಂಟ್ರಾಕ್ಟರ್ಗಳ ಮೇಲೆ ಕಾಂಗ್ರೆಸ್ನವರಿಗೆ ಯಾಕಿಷ್ಟು ಸಹಾನುಭೂತಿ ಎನ್ನುವುದು ಅರ್ಥವಾಗುತ್ತಿಲ್ಲ ಎಂದು ಸುಧಾಂಶು ಮರು ಆರೋಪ ಮಾಡಿದ್ದಾರೆ.

ಆಝಾನ್ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಆಝಾನ್ ಬಗ್ಗೆ ಸುಪ್ರೀಂ ಕೋರ್ಟ್ ಈಗಾಗಲೇ ಆದೇಶವನ್ನು ನೀಡಿದೆ. ಮುಸ್ಲಿಂ ರಾಷ್ಟ್ರಗಳಾದ ಸೌದಿ ಅರೇಬಿಯಾ ಹಾಗೂ ಇಂಡೋನೇಷ್ಯಾಗಳಲ್ಲಿ ಆಝಾನ್ ಕೂಗುವುದನ್ನು ನಿಷೇಧಿಸಲಾಗಿದೆ. ಆದರೆ ನಮ್ಮಲ್ಲಿ ಆಝಾನ್ ವಿಚಾರಕ್ಕೆ ಇಂದಿಗೂ ರಾಜಕೀಯ ನಡೆಯುತ್ತಿದೆ. ಲವ್ ಜಿಹಾದ್ ಪದ ಮೊದಲು ಬಳಕೆ ಮಾಡಿದ್ದು ಬಿಜೆಪಿ ಅಥವಾ ಆರ್ಎಸ್ಎಸ್ ಅಲ್ಲ. ಕೇರಳದ ಇವರದೇ ಮುಖ್ಯಮಂತ್ರಿ ಬಿ.ಎಸ್ ಅಚ್ಯುತಾನಂದನ್ ಎಂದು ಆರೋಪಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗದ ಗ್ಯಾರಂಟಿ ನೀಡುತ್ತಿರುವ ಕಾಂಗ್ರೆಸ್ನ ಆಶ್ವಾಸನೆಯನ್ನು ಮೋಸ ಎಂದು ವ್ಯಾಖ್ಯಾನಿಸಿದ ಸುಧಾಂಶು, ರಾಜಸ್ಥಾನದಲ್ಲಿ 5000 ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಅದನ್ನು ಕೊಟ್ಟಿದ್ದಾರಾ..? ಛತ್ತೀಸಗಢದಲ್ಲಿ ಚುನಾವಣೆಯ ಹೊಸ್ತಿಲಲ್ಲಿ ನೀಡಿದ್ದ ಭರವಸೆಯನ್ನು ಕಾಂಗ್ರೆಸ್ನವರು ಈಡೇರಿಸಿದ್ದಾರಾ..? ಕಾಂಗ್ರೆಸ್ ಹೇಳಿದ್ದನ್ನು ಎಂದಿಗೂ ಮಾಡೋದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.