ಬೆಂಗಳೂರು: ಗುತ್ತಿಗೆದಾರನಿಂದ 5 ಲಕ್ಷ ರೂಪಾಯಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಬೆಂಗಳೂರು ಜನಪ್ರತಿನಿಧಿಗಳ ನ್ಯಾಯಾಧೀಶರ ನಿವಾಸಕ್ಕೆ ಶಾಸಕರನ್ನು ಲೋಕಾಯುಕ್ತ ಪೊಲೀಸರು ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ನ್ಯಾಯಾಧೀಶರ ಆದೇಶದ ಮೇರೆಗೆ ಬಿಜೆಪಿ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಪಿಎ ಮಂಜುನಾಥ್, ಸಂಬಂಧಿ ಗುರು ಲಮಾಣಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಆಡಿಯೋ ಮತ್ತು ಪರಸ್ಪರ ಸಂಭಾಷಣೆಯ ದಾಖಲೆ ಆಧಾರದ ಮೇಲೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸದ್ಯ ಶಾಸಕ ಚಂದ್ರು ಲಮಾಣಿ ಮತ್ತು ಗುತ್ತಿಗೆದಾರನ ನಡುವಿನ ಆಡಿಯೋ ಸೇರಿ, ಕಮಿಷನ್ ಸಂಬಂಧಿತ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದು, ಆಡಿಯೋ ಎಫ್ಎಸ್ಎಲ್ ವರದಿಗಾಗಿ ಕಾಯುತ್ತಿದ್ದಾರೆ. ಸದ್ಯ ಶಾಸಕರು ಹಾಗೂ ಪಿಎಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದ್ದು, ಪ್ರಕರಣ ಸಂಬಂಧ ವಿಚಾರಣೆ ಮುಂದುವರಿದಿದೆ.







