ಬಿಜೆಪಿ ತನ್ನ ಭದ್ರ ಮತಬ್ಯಾಂಕ್ ಲಿಂಗಾಯತರನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ. ಬಿಎಸ್ವೈ ರನ್ನು ನಡೆಸಿಕೊಂಡ ರೀತಿಗೆ ಹಾಗೂ ಲಿಂಗಾಯತ ಹಿರಿಯ ನಾಯಕರಾದ ಲಕ್ಷ್ಮಣ ಸವದಿ ಹಾಗೂ ಜಗದೀಶ್ ಶೆಟ್ಟರ್ ರನ್ನು ನಡೆಸಿಕೊಂಡಿರುವ ರೀತಿಗೆ ಲಿಂಗಾಯತರಲ್ಲಿ ಅಸಮಾಧಾನ ಎದ್ದಿದೆ ಎನ್ನಲಾಗಿದೆ. ಈ ಡ್ಯಾಮೇಜ್ ಅನ್ನು ಕಂಟ್ರೋಲ್ ಮಾಡಲು ಬಿಜೆಪಿ ಬಿಎಸ್‌ವೈ ಮನೆ ಬಾಗಿಲಿಗೆ ಹೋಗಿದೆ. ಆ ಮೂಲಕ ಬಿಎಸ್‌ವೈರನ್ನು ಹೊರತುಪಡಿಸಿ ಬಿಜೆಪಿಗೆ ನೆಲೆಯಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಲಿಂಗಾಯತರ ಸಭೆ ನಡೆಸಲು ಬಿಜೆಪಿ ಹೈಕಮಾಂಡ್ ನಿರ್ದೇಶನ ನೀಡಿದ್ದು, ಅದರಂತೆ ಲಿಂಗಾಯತ ಸಮುದಾಯದ 23 ಮುಖಂಡರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಸೇರಿ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಸಂಸದರು, ನಿಗಮ ಮಂಡಳಿ ಅಧ್ಯಕ್ಷರು ಸೇರಿದಂತೆ ಇನ್ನಿತರ ಲಿಂಗಾಯತ ಮುಖಂಡರು ಭಾಗಿಯಾಗಿದ್ದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬೆಂಗಳೂರಿನ ಕುಮಾರಕೃಪಾ ರಸ್ತೆಯ ‘ಕಾವೇರಿ’ ನಿವಾಸದಲ್ಲಿ ಸಭೆ ನಡೆದಿದೆ.
ಸಭೆಯಲ್ಲಿ ಲಿಂಗಾಯತ ಮತಬ್ಯಾಂಕ್ ಅನ್ನು ಭದ್ರವಾಗಿ ತಮ್ಮಲ್ಲೇ ಇರಿಸುವುದು ಹೇಗೆಂದು ಚರ್ಚೆಯಾಗಿದ್ದು, ಶೆಟ್ಟರ್ ಹಾಗೂ ಸವದಿ ನಿರ್ಗಮನದ ಬಿಸಿ ಪಕ್ಷಕ್ಕೆ ತಟ್ಟದಂತೆ ಮುತುವರ್ಜಿ ವಹಿಸಲಾಗಿದೆ. ಅದಕ್ಕಾಗಿಯೇ ಬಿಎಸ್ ವೈಯನ್ನು ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಂದೆ ಬಿಟ್ಟು ಲಿಂಗಾಯತ ಸಮುದಾಯದ ಬೆಂಬಲ ಮುಂದುವರೆಸುವಂತೆ ನೋಡಿಕೊಳ್ಳುವ ತಂತ್ರ ಹೆಣೆದಿದೆ .
ಪಕ್ಷದಿಂದ ಸವದಿಗೆ ಹಾಗೂ ಶೆಟ್ಟರ್ ಗೆ ಯಾವುದೇ ಅನ್ಯಾಯ ಆಗಿಲ್ಲ ಎಂದು ಸಮುದಾಯದ ಮುಖಂಡರಿಂದಲೇ ಹೇಳಿಸುವ ಬಗ್ಗೆ ಬಿಜೆಪಿ ಪ್ರಯತ್ನ ಪಡುತ್ತಿದ್ದು, ಲಿಂಗಾಯತ ಮತವಿಭಜನೆ ಯಾವುದೇ ಕಾರಣಕ್ಕೂ ಆಗಬಾರದೆಂಬ ಯೋಜನೆಯಲ್ಲಿದೆ. ಡ್ಯಾಮೇಜ್ ಕಂಟ್ರೋಲಿನ ಭಾಗವಾಗಿ, ಈಗಾಗಲೇ ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ನೀಡಿದ್ದು, ಈ ಮೂಲಕ ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಿಲ್ಲ ಎನ್ನುವ ಸಂದೇಶ ರವಾನಿಸಿದೆ.