ರಾಜ್ಯ ರಾಜಕಾರಣದಲ್ಲಿ ಕುಮಾರಸ್ವಾಮಿ ಪ್ರಸ್ತಾಪಿಸಿದ ಬ್ರಾಹ್ಮಣ ಮುಖ್ಯಮಂತ್ರಿ ವಿಚಾರ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ಕುಮಾರಸ್ವಾಮಿ ಎರಡನೇ ಬಾಂಬ್ ಬಳಿಕ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಯಾಗಿದೆ. ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ ಎಂದಿದ್ದರು. ಆ ಬಳಿಕ ಬಿಜೆಪಿ ನಾಯಕರು ಬ್ರಾಹ್ಮಣ ವಿರೋಧಿ ಎನ್ನುವುದನ್ನೇ ವಿವಾದ ಮಾಡಿಕೊಂಡು ಕುಮಾರಸ್ವಾಮಿ ವಿರುದ್ಧ ರಾಜ್ಯಾದ್ಯಂತ ಪ್ರಚಾರ ಮಾಡುವ ಕೆಲಸಕ್ಕೆ ಕೈ ಹಾಕಿದ್ದರು. ಆ ಹೇಳಿಕೆ ಬಿಸಿ ಇರುವಾಗಲೇ ಕುಮಾರಸ್ವಾಮಿ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿರುವುದು ಕೇಸರಿ ಪಾಳಯ ತಲ್ಲಣ ಸೃಷ್ಟಿಸಿದೆ.
ವಚನ ಭ್ರಷ್ಟತೆ ಬಗ್ಗೆ ಮೌನ ಮುರಿದ ಕುಮಾರಸ್ವಾಮಿ..!
2006ರಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ, 20 ತಿಂಗಳ ಅಧಿಕಾರ ಅನುಭವಿಸಿದ ಬಳಿಕ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಮಾಡುವುದಕ್ಕೆ ಪೇಶ್ವೆ ವಂಶದವರೇ ಅಡ್ಡಿ ಮಾಡಿದ್ರು. ಕೇಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳಲು ಪೇಶ್ವೆ ಸಂತತಿಯೇ ಕಾರಣ ಎಂಬ ಸ್ಫೋಟಕ ವಿಚಾರ ಹೊರ ಹಾಕಿದ್ದಾರೆ. ಮೈತ್ರಿ ಸರ್ಕಾರ ಬಿದ್ದ ಬಳಿಕ ಕುಮಾರಸ್ವಾಮಿ ವಚನ ಭ್ರಷ್ಟತೆ ಬಗ್ಗೆ ರಾಜ್ಯಾದ್ಯಂತ ಪ್ರಚಾರ ಮಾಡಿದಾಗಲೂ ಮೌನಕ್ಕೆ ಶರಣಾಗಿದ್ದ ಕುಮಾರಸ್ವಾಮಿ, ಇದೀಗ ಪೇಶ್ವೆ ಸಂತತಿಯವರಿಂದಲೇ ಅದಿಕಾರ ಹಸ್ತಾಂತರ ಆಗಲಿಲ್ಲ ಎಂದಿದ್ದಾರೆ. ಇದೀಗ ಎಲ್ಲವನ್ನು ಬಹಿರಂಗ ಮಾಡುತ್ತಿರುವ ಕುಮಾರಸ್ವಾಮಿ, ಯಾರು ಆ ಕಾರನಕರ್ತ ಅನ್ನೋದನ್ನು ಬಹಿರಂಗ ಮಾಡಿಲ್ಲ. ಬಿಜೆಪಿ ನಾಯಕರು ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ಕೊಡುವುದನ್ನು ಮುಂದುವರಿಸಿದ್ರೆ ಹೆಸರು ಕೂಡ ಬಹಿರಂಗ ಆಗುವ ಸಾಧ್ಯತೆಯಿದೆ.
ಲಿಂಗಾಯತ ನಾಯಕರಿಗೆ ಮನ್ನಣೆ ಕೊಡುವ ಕೆಲಸ..!
ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ನಿರ್ಧಾರ ಆಗಿದೆ ಎನ್ನುವ ಒಂದೇ ಒಂದು ಹೇಳಿಕೆಯಿಂದ ಕಂಗಾಲಾಗಿದ್ದ ಬಿಜೆಪಿ ನಾಯಕತ್ವ, ಲಿಂಗಾಯತ ನಾಯಕರನ್ನು ನಿರ್ಲಕ್ಷ್ಯ ಮಾಡ್ತಿಲ್ಲ ಎನ್ನುವುದನ್ನು ಜನತೆಗೆ ತೋರಿಸುವುದಕ್ಕೆ ಮುಂದಾಗಿದೆ. ಇಷ್ಟು ದಿನಗಳ ಕಾಲ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಯಾವುದೇ ಪ್ರಮುಖ ಕೆಲಸಗಳನ್ನು ನೀಡದೆ ನಿರ್ಲಕ್ಷ್ಯ ಮಾಡಲಾಗಿತ್ತು. ಇದೀಗ ಏಕಾಏಕಿ ಬಿ.ವೈ ವಿಜಯೇಂದ್ರ ಅವರಿಗೆ ಜಿಲ್ಲೆಗಳ ಮೋರ್ಚಾ ಸಮಾವೇಶ ನಡೆಸುವ ಉಸ್ತುವಾರಿ ನೀಡಲಾಗಿದೆ. ಉಸ್ತುವಾರಿ ನೀಡಿದ ಬಗ್ಗೆ ಮಾತನಅಡಿರುವ ವಿಜಯೇಂದ್ರ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಿಂದ ಅಧಿಕಾರ ಹಿಡಿಯುವುದಕ್ಕೆ ಮೋರ್ಚಾಗಳ ಸಮಾವೇಶದ ಅವಶ್ಯಕತೆ ಇದೆ. ಎಲ್ಲಾ ಜಿಲ್ಲೆಗಳಲ್ಲೂ ಮೋರ್ಚಾಗಳ ಸಮಾವೇಶ ಮಾಡುವ ಉದ್ದೇಶದಿಂದ ಸಂಚಾಲಕನನ್ನಾಗಿ ಮಾಡಲಾಗಿದೆ ಎಂದಿದ್ದಾರೆ.
ಯಡಿಯೂರಪ್ಪ ಇಲ್ಲದೆ ಬಿಜೆಪಿ ಇಲ್ಲ ಎಂದು ನಾಯಕರು..!

ಯಡಿಯೂರಪ್ಪ ಅವರ ಹಿಡಿತದಿಂದ ಬಿಜೆಪಿಯನ್ನು ಬಿಡಿಸಿಕೊಂಡು ಬೇರೆ ನಾಯಕತ್ವಕ್ಕೆ ಮಣೆ ಹಾಕುವ ತಯಾರಿಯನ್ನು ಕೇಂದ್ರ ಬಿಜೆಪಿ ನಾಯಕರು ಮಅಡಿದ್ದಾರೆ ಎನ್ನುವುದು ಜಗತ್ತಿಗೆ ಗೊತ್ತಿರುವ ಸಂಗತಿ. ಆದರೆ ಕುಮಾರಸ್ವಾಮಿ ಸಿಡಿಸಿದ ಬಾಂಬ್ ಬಳಿಕ ಬಿಜೆಪಿಗೆ ಹಿನ್ನಡೆ ಆಗುವ ಭೀತಿಯಿಂದ ಮತ್ತೆ ಯಡಿಯೂರಪ್ಪ ಹಾಗು ವಿಜಯೇಂದ್ರಗೆ ಪ್ರಾಮುಖ್ಯತೆ ನೀಡುವ ನಿರ್ಧಾರ ಹೊರಬಿದ್ದಿದೆ. ಬಿಜೆಪಿ ನಾಯಕರು ಕೂಡ ಯಡಿಯೂರಪ್ಪ ಜಪ ಮಾಡುತ್ತಿದ್ದಾರೆ. ಯಡಿಯೂರಪ್ಪ, ಮೋದಿ ನಾಯಕತ್ವದ ಬಲ ನಮಗಿದೆ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಚುನಾವಣೆ ಗೆಲ್ಲುತ್ತೇವೆ ಎಂದು ಸಚಿವ ಡಾ. ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ರೆ, ಯಡಿಯೂರಪ್ಪ ನಮ್ಮ ಪರಮೋಚ್ಛ ನಾಯಕ . ಬಿಜೆಪಿಯ ಎಲ್ಲಾ ನಿರ್ಧಾರಗಳಲ್ಲೂ ಬಿಎಸ್ವೈ ಪ್ರಮುಖ ಪಾತ್ರ ವಹಿಸುತ್ತಾರೆ ಎಂದಿದ್ದಾರೆ ಕೇಂದ್ರ ಸಚಿವ ಪಿಯೂಷ್ ಗೋಯೆಲ್. ಇನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಕೂಡ ಯಡಿಯೂರಪ್ಪ ಅವರಂತಹ ನಾಯಕ ಸಿಕ್ಕಿರುವುದು ನಮ್ಮ ಪುಣ್ಯ, ನಮ್ಮ ಬಳಿ ಎಲ್ಲವೂ ಇದೆ, ಚುನಾವಣೆ ಗೆಲ್ಲುವ ವಿಶ್ವಾಸ ಇದೆ. ಕಾಂಗ್ರೆಸ್ನಲ್ಲಿ ನೇತಾರನೂ ಇಲ್ಲ, ನಾಯಕತ್ವವೂ ಇಲ್ಲ ಎಂದಿದ್ದಾರೆ.
ಕುಮಾರಸ್ವಾಮಿ ಕೊಟ್ಟ ಹೇಳಿಕೆಯ ಪ್ರಬಾವವೋ..? ಅಥವಾ ಈಗಾಗಲೇ ಬಿಜೆಪಿ ಹೈಕಮಾಂಡ್ ತರಿಸಿಕೊಂಡಿರುವ ವರದಿಯ ಪ್ರಕಾರ 60 ರಿಂದ 65 ಸ್ಥಾನ ಗೆಲ್ಲಬಹುದು ಅಷ್ಟೆ ಎನ್ನುವ ಸರ್ವೇ ವರದಿಯ ಪರಿಣಾಮವೋ ಗೊತ್ತಿಲ್ಲ. ಆದರೆ ತೆರೆಮರೆಗೆ ಸರಿಸಿದ್ದ ಯಡಿಯೂರಪ್ಪ ಹಾಗು ಬಿ.ವೈ ವಿಜಯೇಂದ್ರಗೆ ಮತ್ತೆ ಬೆಲೆ ಬಂದಿರುವುದಂತೂ ಸತ್ಯ. ಏನಂತೀರಾ..?









