• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

‘ಸಬ್ ಚೆಂಗಾಸಿ’ ರಾಗದ ಬಳಿಕ ಮತ್ತೆ ಭುಗಿಲೆದ್ದ ‘ನಾಯಕತ್ವ ಬದಲಾವಣೆ’ ಕೂಗು!

Shivakumar by Shivakumar
June 28, 2021
in ಕರ್ನಾಟಕ, ರಾಜಕೀಯ
0
‘ಸಬ್ ಚೆಂಗಾಸಿ’ ರಾಗದ ಬಳಿಕ ಮತ್ತೆ ಭುಗಿಲೆದ್ದ ‘ನಾಯಕತ್ವ ಬದಲಾವಣೆ’ ಕೂಗು!
Share on WhatsAppShare on FacebookShare on Telegram

ನಾಯಕತ್ವ ಬದಲಾವಣೆ ಎಂಬ ರಾಜ್ಯ ಬಿಜೆಪಿಯ ಬೃಹನ್ನಾಟಕಕ್ಕೆ ಸದ್ಯ ತೆರೆ ಬೀಳುವ ಹಾಗೆ ಕಾಣಿಸುತ್ತಿಲ್ಲ.

ADVERTISEMENT

ಕರೋನಾ ಸೋಂಕಿನ ಎರಡನೇ ಅಲೆಯ ಉಬ್ಬರದ ಜೊತೆಜೊತೆಯಲ್ಲೇ ಭಾರೀ ಗದ್ದಲ ಎಬ್ಬಿಸಿದ್ದ ಬಿಜೆಪಿಯ ನಾಯಕತ್ವ ಬದಲಾವಣೆಯ ಚರ್ಚೆಗಳು, ಕರೋನಾ ಅಲೆ ಇಳಿಮುಖವಾಗುವ ಹೊತ್ತಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಭೇಟಿಯ ಬಳಿಕ ತಗ್ಗಿದ್ದವು. ಪಕ್ಷದ ನಾಯಕತ್ವ ಬದಲಾವಣೆಯೂ ಸೇರಿದಂತೆ ಯಾವುದೇ ವಿಷಯದ ಬಗ್ಗೆ ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು, ಸದ್ಯಕ್ಕೆ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಅರುಣ್ ಸಿಂಗ್ ಹೇಳಿ ದೆಹಲಿಗೆ ವಾಪಸ್ಸಾಗುತ್ತಿದ್ದಂತೆ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಿ ಟಿ ರವಿ ಸೇರಿದಂತೆ ಹಲವರು ನಾಯಕತ್ವ ಬದಲಾವಣೆಯ ವಿಷಯ ಚರ್ಚೆಯಾಗೇ ಇಲ್ಲ ಎನ್ನುವ ಮೂಲಕ ಸ್ವತಃ ತಮ್ಮದೇ ಹೇಳಿಕೆಗಳಿಗೆ ಯೂ ಟರ್ನ್ ಹೊಡೆದಿದ್ದರು.

ಇದನ್ನೂ ಓದಿ:- ಕರ್ನಾಟಕದ ಜನರ ಪಾಲಿಗೆ ಇದಕ್ಕಿಂತ ದೌರ್ಭಾಗ್ಯದ ಸಂಗತಿ ಮತ್ತೊಂದಿದೆಯೇ?

ಆದರೆ, ಒಂದು ಕಾಲದ ಶಿಸ್ತಿನ ಪಕ್ಷ ಬಿಜೆಪಿಯ ಸಬ್ ಚೆಂಗಾಸಿ ಎಂಬ ಆ ಮಂತ್ರಪಠಣೆ ನಡೆದಿದ್ದು ಕೇವಲ ಒಂದು ವಾರ ಮಾತ್ರ! ಅಷ್ಟರಲ್ಲೇ ನಾಯಕತ್ವ ಬದಲಾವಣೆಯ ಜಪ ಮತ್ತೆ ಮಾರ್ದನಿಸತೊಡಗಿದೆ.

ಅದರಲ್ಲೂ ಸ್ವತಃ ನಾಯಕತ್ವ ಬದಲಾವಣೆ ಕುರಿತ ಬಹಿರಂಗ ಹೇಳಿಕೆಯ ಮೂಲಕ ಕಳೆದ ಒಂದೂವರೆ ತಿಂಗಳಿಂದ ನಿರಂತರ ಸುದ್ದಿಯಲ್ಲಿರುವ ಮತ್ತು ಸಿಎಂ ಯಡಿಯೂರಪ್ಪ ವಿರೋಧಿ ಬಣದ ಸಾರ್ವಜನಿಕ ಮುಖವಾಗಿ ಕಾಣಿಸಿಕೊಳ್ಳುತ್ತಿರುವ ಸಚಿವ ಸಿ ಪಿ ಯೋಗೇಶ್ವರ್ ನಾಯಕತ್ವ ಬದಲಾವಣೆಯ ಪರೀಕ್ಷೆ ಬರೆದಿದ್ದೇವೆ. ಆ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ. ಒಳ್ಳೆಯ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂಬ ಹೇಳಿಕೆ ನೀಡಿದ ಬೆನ್ನಲ್ಲೇ ಸ್ವತಃ ಮತ್ತೊಮ್ಮೆ ದಿಢೀರ್ ದೆಹಲಿಗೆ ತೆರಳಿರುವುದು ಸಹಜವಾಗೇ ನಾಯಕತ್ವ ಬದಲಾವಣೆಯ ಚರ್ಚೆಗಳು ಮತ್ತೆ ಗರಿಗೆದರುವಂತೆ ಮಾಡಿವೆ.

ಇದನ್ನೂ ಓದಿ:- ಸದ್ದಿಲ್ಲದೆ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ತೆಗೆಯುವ ಪ್ರಯತ್ನ ನಡೆಯುತ್ತಿದೆಯಾ?

ಹಾಗಾಗಿ, ಸಹಜವಾಗೇ ವಾರಾಂತ್ಯದ ಹೊತ್ತಿಗೆ ಮುಖ್ಯಮಂತ್ರಿ ಬದಲಾವಣೆಯ ಬಿಜೆಪಿಯ ಒಳಬೇಗುದಿ ಮತ್ತೊಮ್ಮೆ ಜ್ವಾಲಾಮುಖಿಯಂತೆ ಸಿಡಿಯುವ ಲಕ್ಷಣಗಳು ಗೋಚರಿಸತೊಡಗಿದ್ದು, ಸಕಾಲದಲ್ಲಿ ವರಿಷ್ಠರು ಆ ಕುರಿತ ತಮ್ಮ ಸ್ಪಷ್ಟ ನಿರ್ಧಾರ ಪ್ರಕಟಿಸದೇ ಹೋದರೆ ಬಹುಶಃ ಅದುಮಿಟ್ಟ ಅಸಮಾಧಾನದ ಲಾವಾರಸವನ್ನು(ಅಧಿಕಾರ ಮೋಹದ ಲಾಲಾರಸವೂ !) ಸ್ಫೋಟಿಸದಂತೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲವೇನೋ..ಎಂಬ ಸ್ಥಿತಿ ನಿರ್ಮಾಣವಾದಂತಿದೆ.

ಮುಖ್ಯವಾಗಿ ಪಕ್ಷದ ವರಿಷ್ಠರು ಮತ್ತು ಸ್ವತಃ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬಂದುಹೋದ ಬಳಿಕವೂ, ಯಾವುದೇ ಬಹಿರಂಗ ಹೇಳಿಕೆ ನೀಡಿದರೆ ಉಗ್ರ ಕ್ರಮದ ಎಚ್ಚರಿಕೆ ನೀಡಿದ ಬಳಿಕವೂ ನಾಯಕತ್ವ ಬದಲಾವಣೆಯ ವಿಷಯದಲ್ಲಿ ನಿರಂತರ ಬಹಿರಂಗ ಹೇಳಿಕೆ ನೀಡುತ್ತಲೇ ಇರುವ ಯೋಗೇಶ್ವರ್ ಮತ್ತು ಇತರೆ ಕೆಲವರ ಮೇಲೆ ಈವರೆಗೆ ಯಾವುದೇ ಕ್ರಮ ಜರುಗಿಲ್ಲ ಮತ್ತು ಕನಿಷ್ಟ ಅವರಿಗೆ ಪಕ್ಷದ ಶಿಸ್ತು ಉಲ್ಲಂಘನೆಯ ನೋಟೀಸ್ ಕೂಡ ನೀಡಿಲ್ಲ. ಅದಕ್ಕೆ ಪ್ರತಿಯಾಗಿ ವರಿಷ್ಠರ ಎಚ್ಚರಿಕೆಯ ಹೊರತಾಗಿಯೂ ನಾಲ್ಕು ದಿನ ಮೌನಕ್ಕೆ ಶರಣಾಗಿದ್ದವರು ಇದೀಗ ಒಬ್ಬೊಬ್ಬರಾಗಿ ಮತ್ತೆ ನಾಯಕತ್ವ ಬದಲಾವಣೆಯ ವಿಷಯವನ್ನು ಮಾಧ್ಯಮಗಳ ಮೂಲಕವೇ ಚರ್ಚೆಗೆ ಒಡ್ಡುತ್ತಿದ್ದಾರೆ. ಆದರೂ ಪಕ್ಷದ ವರಿಷ್ಠರು ಅಂತಹ ನಾಯಕರನ್ನೆ ಕರೆಸಿಕೊಂಡು, ದೆಹಲಿಯಲ್ಲಿ ಅವರ ಭೇಟಿಗೂ ಅವಕಾಶ ನೀಡುತ್ತಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಪಕ್ಷದ ವರಿಷ್ಠರ ಈ ನಡೆ ಏನನ್ನು ಹೇಳುತ್ತಿದೆ ಎಂಬುದು ಬಹಳ ಜಟಿಲ ಪ್ರಶ್ನೆಯೇನಲ್ಲ!

ಇದನ್ನೂ ಓದಿ:- ನಾಯಕತ್ವ ಬಗ್ಗೆ ಚಿಂತೆಯಿಲ್ಲ; ಪಕ್ಷದ ವರ್ಚಸ್ಸೇ ಮುಖ್ಯ – BJPಯಲ್ಲಿ ಮೂರನೆ ಬಣ!

ಯಡಿಯೂರಪ್ಪ ವಿರೋಧಿ ಬಣದ ಯೋಗೇಶ್ವರ್ ಅವರ ವಾರಾಂತ್ಯದ ದೆಹಲಿ ಭೇಟಿಯ ವೇಳೆಯೇ ಯಡಿಯೂರಪ್ಪ ಅವರ ಪಾಲಿನ ಶಾಶ್ವತ ಬಂಡಾಯಗಾರ ಎಂದೇ ಗುರುತಿಸಿಕೊಂಡಿರುವ ಸಿ ಟಿ ರವಿ ಕೂಡ ದೆಹಲಿಯಲ್ಲಿದ್ದರು. ಪಕ್ಷದ ಸಂಸದೀಯ ಮಂಡಳಿ ಸಭೆಯ ಹಿನ್ನೆಲೆಯಲ್ಲಿ ವರಿಷ್ಠರೊಂದಿಗೆ ಪ್ರಮುಖ ವಿಷಯದ ಚರ್ಚೆಗಾಗಿ ತಾವು ದೆಹಲಿಗೆ ಬಂದಿರುವುದಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಿ ಟಿ ರವಿ ಅವರು, ಕಳೆದ ಒಂದು ದಶಕದಿಂದ ಬಹುತೇಕ ಯಡಿಯೂರಪ್ಪ ರಾಜಕಾರಣದ ವಿರುದ್ಧ ಬಿಜೆಪಿಯ ಒಳಗೇ ಪ್ರಬಲ ಪ್ರತಿಪಕ್ಷದಂತೆ ಕೆಲಸ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ ಸಂಗತಿ. ಆ ಹಿನ್ನೆಲೆಯಲ್ಲಿ ಸಿ ಟಿ ರವಿ ಮತ್ತು ಸಿ ಪಿ ಯೋಗೇಶ್ವರ್ ಒಟ್ಟಿಗೇ ದೆಹಲಿಯಲ್ಲಿ ಬೀಡುಬಿಟ್ಟಿರುವುದು ಸಹಜವಾಗೇ ನಾಯಕತ್ವ ಬದಲಾವಣೆಯ ಕುರಿತ ಮತ್ತೊಂದು ಸುತ್ತಿನ ತಂತ್ರಗಾರಿಕೆ ಚಾಲ್ತಿಗೆ ಬಂದಿರುವ ಸೂಚನೆ ನೀಡಿದೆ.

ಇದನ್ನೂ ಓದಿ:- ಜಾರಕಿಹೊಳಿ ಮುಂಬೈ ಭೇಟಿ ಉದ್ದೇಶ ಸಿಎಂ ಕುರ್ಚಿ ಉಳಿಸುವುದೇ? ಉರುಳಿಸುವುದೆ?

ಈ ನಡುವೆ ಮತ್ತೊಂದು ಬೆಳವಣಿಗೆಯಲ್ಲಿ ಸಿಎಂ ಯಡಿಯೂರಪ್ಪ ಪುತ್ರರಾದ ಸಂಸದ ಬಿ ವೈ ರಾಘವೇಂದ್ರ ಮತ್ತು ಬಿ ವೈ ವಿಜಯೇಂದ್ರ ಅವರು ಕಳೆದ ವಾರ ದಿಢೀರ್ ದೆಹಲಿಗೆ ಭೇಟಿ ನೀಡಿ, ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಿ ವಾಪಸ್ಸಾಗಿದ್ದಾರೆ. ಈ ಮಾತುಕತೆ ವೇಳೆ ಸಿಎಂ ಬದಲಾವಣೆಯ ವಿಷಯವೇ ಮುಖ್ಯವಾಗಿ ಚರ್ಚೆಯಾಗಿದ್ದು, ಒಂದು ಹೊಂದಾಣಿಕೆಯ ಸೂತ್ರವನ್ನು ವರಿಷ್ಠರು ಮಂಡಿಸಿದ್ದಾರೆ. ನಾಯಕತ್ವ ಬದಲಾವಣೆಯ ಒತ್ತಡ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪಕ್ಷ ಮತ್ತು ಸಂಘಟನೆಯ ಹಿತದೃಷ್ಟಿಯಿಂದ ಬಿ ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾಯಿಸುವುದು ಅನಿವಾರ್ಯವಾಗಿದೆ. ಅದಕ್ಕೆ ಪ್ರತಿಯಾಗಿ ಯಡಿಯೂರಪ್ಪ ಪುತ್ರರಾದ ಸಂಸದ ಬಿ ವೈ ರಾಘವೇಂದ್ರ ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗುವುದು ಎಂದು ವರಿಷ್ಠರು ಹೇಳಿದ್ದಾರೆ. ಆ ವಿಷಯವನ್ನು ಮಾತನಾಡುವ ಉದ್ದೇಶದಿಂದಲೇ ಸ್ವತಃ ವರಿಷ್ಠರೇ ಯಡಿಯೂರಪ್ಪ ಪುತ್ರದ್ವಯರನ್ನು ಕರೆಸಿಕೊಂಡಿದ್ದರು ಎಂಬುದು ಬಿಜೆಪಿ ಮೂಲಗಳ ಮಾಹಿತಿ.

ಇದನ್ನೂ ಓದಿ:- ಅರುಣ್ ಸಿಂಗ್ ಎಂಬ ಜೋಕರ್; ನಾಯಕತ್ವ ಬದಲಾವಣೆ ಎಂಬ ಪ್ರಹಸನ

ಆದರೆ, ಈ ಷರತ್ತಿಗೆ, ಹೊಂದಾಣಿಕೆಯ ಸೂತ್ರಕ್ಕೆ ಬಿ ವೈ ವಿಜಯೇಂದ್ರ ಮತ್ತು ರಾಘವೇಂದ್ರ , ಒಪ್ಪದೇ ರಾಜ್ಯ ಸಂಪುಟದಲ್ಲೂ ತಮಗೆ ಸ್ಥಾನ ಬೇಕು. ಸಂಪುಟ ದರ್ಜೆ ಸಚಿವ ಸ್ಥಾನ ಬೇಕು ಎಂಬ ಬೇಡಿಕೆ ಮುಂದಿಟ್ಟರು. ಆದರೆ, ವರಿಷ್ಠರು ಆ ಬೇಡಿಕೆಯ ಬಗ್ಗೆ ತಕ್ಷಣಕ್ಕೆ ಏನೂ ಹೇಳಲಾಗದು, ಮುಂದೆ ಸಂದರ್ಭ ಬಂದಾಗ ಪರಿಶೀಲಿಸಲಾಗುವುದು. ಆದರೆ, ಸದ್ಯಕ್ಕೆ ರಾಘವೇಂದ್ರ ಅವರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ನೀಡಲಾಗುವುದು. ಸದ್ಯಕ್ಕೆ ಅದೊಂದೇ ಬೇಡಿಕೆ ಈಡೇರಿಸುವುದು ಸಾಧ್ಯ. ಪಕ್ಷದ ಶಾಸಕರ ಪೈಕಿ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಿದವರು ಮತ್ತು ಪಕ್ಷದ ವರಿಷ್ಠರ ನಿಲುವಿಗೆ ಬದ್ಧ ಎಂಬ ನಿಲುವು ವ್ಯಕ್ತಪಡಿಸಿದವರು ಸೇರಿದಂತೆ ಬಹುಸಂಖ್ಯಾತರು ಯಡಿಯೂರಪ್ಪ ಅವರ ಆಡಳಿತ ವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ. ಈಗಲೂ ಪರಿಸ್ಥಿತಿ ಸರಿಪಡಿಸದೇ ಹೋದರೆ, ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಸಂಘಟನೆಗೆ ಬಿಕ್ಕಟ್ಟು ಎದುರಾಗಲಿದೆ. ಹಾಗಾಗಿ, ಈ ಹೊಂದಾಣಿಕೆ ಸೂತ್ರವನ್ನು ಒಪ್ಪಿಕೊಂಡು ಯಡಿಯೂರಪ್ಪ ಅವರ ಮನವೊಲಿಸಿ ಎಂದು ವರಿಷ್ಠರು ತಾಕೀತು ಮಾಡಿದ್ಧಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:- ರಾಜ್ಯ ರಾಜಕೀಯದಲ್ಲಿ ಮತ್ತೆ ಫೋನ್ ಟ್ಯಾಪಿಂಗ್ ಸದ್ದು: ಸಿಎಂ ಸ್ಥಾನದ ಆಕಾಂಕ್ಷಿಯಿಂದ ಸಿಎಂ ಮೇಲೆ ಆರೋಪ

ವರಿಷ್ಠರು ಹೀಗೆ ಸಿಎಂ ಯಡಿಯೂರಪ್ಪ ಪುತ್ರದ್ವಯರನ್ನು ಕರೆಸಿಕೊಂಡು ಮಾತನಾಡಿದ ಬಳಿಕವೇ ಯಡಿಯೂರಪ್ಪ ವಿರೋಧಿ ಬಣ ಮತ್ತೆ ಚುರುಕಾಗಿದೆ. ಆ ಚುರುಕುತನದ ಹಿಂದೆ ಪರೋಕ್ಷವಾಗಿ ಪಕ್ಷದ ವರಿಷ್ಠರ ಕುಮ್ಮಕ್ಕೇ ಇದೆ ಎಂಬುದು ಕೂಡ ಬಿಜೆಪಿಯ ವಲಯದಲ್ಲೇ ಕೇಳಿಬರುತ್ತಿರುವ ಮಾತು. ಹಾಗಾಗಿ, ಸಚಿವ ಸಿ ಪಿ ಯೋಗೇಶ್ವರ ಮತ್ತು ಮಿತ್ರಮಂಡಳಿ ಬರೆದಿರುವ ಪರೀಕ್ಷೆಯ ಫಲಿತಾಂಶ ಬಹುಶಃ ಅವರ ನಿರೀಕ್ಷೆಗೆ ಮುಂಚೆಯೇ ಬಂದರೂ ಅಚ್ಚರಿ ಇಲ್ಲ!

Tags: ಬಿ ಎಸ್ ಯಡಿಯೂರಪ್ಪಬಿಜೆಪಿಸಿ ಟಿ ರವಿಸಿ ಪಿ ಯೋಗೇಶ್ವರ್‌
Previous Post

ಪಂಚಾಯತ್ ಚುನಾವಣೆಗೆ ತಯಾರಿ: ಬಿಜೆಪಿ ಕಾರ್ಯಕರ್ತರಿಗೆ ಪ್ರಾಥಮಿಕ ಆರೋಗ್ಯ ಸೇವೆ ತರಬೇತಿ

Next Post

ಕಾಸರಗೋಡಿನ ಗ್ರಾಮಗಳ ಹೆಸರು ಬದಲಿಸದಂತೆ ಕೇರಳ ಸರ್ಕಾರಕ್ಕೆ ಹೆಚ್ ಡಿ ಕುಮಾರಸ್ವಾಮಿ ವಿನಂತಿ

Related Posts

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ
ಕರ್ನಾಟಕ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

by ಪ್ರತಿಧ್ವನಿ
March 5, 2026
0

ಬೆಂಗಳೂರು: ಮೀಸಲಾತಿ ಹಾಗೂ ಒಳಮೀಸಲಾತಿ ಜಾರಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ಧತೆಯಿಲ್ಲದೆ ನಡೆದುಕೊಳ್ಳುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಶೀಘ್ರದಲ್ಲೇ ರಾಜ್ಯಾದ್ಯಂತ ದೊಡ್ಡ...

Read moreDetails
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
Next Post
ಕಾಸರಗೋಡಿನ ಗ್ರಾಮಗಳ ಹೆಸರು ಬದಲಿಸದಂತೆ ಕೇರಳ ಸರ್ಕಾರಕ್ಕೆ ಹೆಚ್ ಡಿ ಕುಮಾರಸ್ವಾಮಿ ವಿನಂತಿ

ಕಾಸರಗೋಡಿನ ಗ್ರಾಮಗಳ ಹೆಸರು ಬದಲಿಸದಂತೆ ಕೇರಳ ಸರ್ಕಾರಕ್ಕೆ ಹೆಚ್ ಡಿ ಕುಮಾರಸ್ವಾಮಿ ವಿನಂತಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada