ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿಯಿಂದ ಇಳಿದ ಬಳಿಕ ರಾಜ್ಯ ಬಿಜೆಪಿಯಲ್ಲಿ ಢಾಳಾಗಿ ಎದ್ದು ಕಾಣುವ ಬದಲಾವಣೆಯ ಗಾಳಿ ಬೀಸತೊಡಗಿದೆ.
ಅದು ಹಿಂದುತ್ವವಾದಿ ಪ್ರಚೋದನಕಾರಿ ಹೇಳಿಕೆಗಳ ವಿಷಯದಲ್ಲಿರಬಹುದು, ನೆಹರು- ಇಂದಿರಾ ಮುಂತಾದ ಕಾಂಗ್ರೆಸ್ ನಾಯಕರ ವಿಷಯದಲ್ಲಿರಬಹುದು, ಉಲ್ಲೇಖಿಸಲು ಅಸಹ್ಯಕರವಾದ ಭಾಷೆಯನ್ನು ಪ್ರತಿಪಕ್ಷಗಳ ವಿರುದ್ಧ ಬಳಸುವ ವಿಷಯದಲ್ಲಿರಬಹುದು, ಕೊನೆಗೆ ಮುಂದಿನ ಚುನಾವಣೆಯ ನೇತೃತ್ವ ಯಾರದು ಎಂಬ ವಿಷಯದಲ್ಲಿರಬಹುದು,.. ಯಡಿಯೂರಪ್ಪ ಅವಧಿಯ ಬಿಜೆಪಿ ನಾಯಕರ ನಡವಳಿಕೆ, ನಿಲುವುಗಳಿಗೂ, ಆ ಬಳಿಕದ ಪ್ರಮುಖರ ನೀತಿ-ನಡವಳಿಕೆಗಳಿಗೂ ಬಹಳಷ್ಟು ವ್ಯತ್ಯಾಸಗಳು ಎದ್ದು ಕಾಣುತ್ತಿವೆ.
ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡದ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕ ಕೆ ಎಸ್ ಈಶ್ವರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಅವರ ನೇತೃತ್ವದಲ್ಲೇ ಪಕ್ಷ ಮುಂದಿನ ಚುನಾವಣೆ ಎದುರಿಸಲಿದ್ದು, ಕನಿಷ್ಟ 150 ಸ್ಥಾನ ಗೆಲ್ಲುವುದಾಗಿ ಘೋಷಿಸಿದ್ದರು. ಆ ಬಳಿಕ ಕಳೆದ ಒಂದೆರಡು ವಾರದಲ್ಲಿ ಈಶ್ವರಪ್ಪ ಈ ಮಾತನ್ನು ಹಲವು ಬಾರಿ ಪುನರುಚ್ಛರಿಸಿದ್ದಾರೆ. ಹಾಗೆ ನೋಡಿದರೆ, ಒಂದು ಕಡೆ ಯಡಿಯೂರಪ್ಪ ರಾಜೀನಾಮೆ ಸಂದರ್ಭದಲ್ಲಿ ಮತ್ತು ಅದಕ್ಕೂ ಮುಂಚೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು 150ಕ್ಕೂ ಹೆಚ್ಚು ಸ್ಥಾನದೊಂದಿಗೆ ಮತ್ತೆ ಅಧಿಕಾರಕ್ಕೆ ತರುವ ಜವಾಬ್ಧಾರಿ ತಮ್ಮದು ಎನ್ನುತ್ತಿರುವಾಗಲೇ ಇತ್ತ ಈಶ್ವರಪ್ಪ ಮುಂದಿನ ಚುನಾವಣೆಯನ್ನು ಕಟೀಲು ನೇತೃತ್ವದಲ್ಲಿ ನಡೆಸುತ್ತೇವೆ ಎನ್ನುತ್ತಿದ್ದರು!
ಸಮಗ್ರ ಅಭಿವೃದ್ಧಿ, ಸಾಮಾಜಿಕ ಬದಲಾವಣೆ, ಶೈಕ್ಷಣಿಕ ಮತ್ತು ಔದ್ಯಮಿಕ ಪ್ರಗತಿಯನ್ನಾಗಲೀ ನೆಚ್ಚಿಕೊಳ್ಳದೆ, ಕೇವಲ ಉಗ್ರ ಹಿಂದುತ್ವವಾದಿ ರಾಜಕಾರಣದ ಮೂಲಕವೇ ಕರಾವಳಿಯಲ್ಲಿ ರಾಜಕೀಯ ಯಶಸ್ಸು ಸಾಧಿಸಿರುವ ನಳೀನ್ ಕುಮಾರ್ ಕಟೀಲು ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಎದುರಿಸಿ ಸದ್ಯದ ಬಿಜೆಪಿ ಸ್ಥಾನಗಳಿಕೆಯ ದುಪ್ಪಟ್ಟು ಸ್ಥಾನ ಗಳಿಸುತ್ತೇವೆ ಎಂದು ಬಿಜೆಪಿಯ ಹಿರಿಯ ಮುಖಂಡರು ಪದೇಪದೆ ಹೇಳುತ್ತಿರುವುದಕ್ಕೂ, ಹಿಂದುತ್ವವಾದಿ ಪ್ರಚೋದನಕಾರಿ ಹೇಳಿಕೆಗಳ ಸರಣಿಗೂ ನೇರ ಸಂಬಂಧವಿದೆ.

ಹಾಗೆಯೇ ಬಿ ಎಸ್ ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಿದ ಬಳಿಕ ಅವರು ಮತ್ತು ಅವರ ಪುತ್ರ ಬಿ ವೈ ವಿಜಯೇಂದ್ರ ಮತ್ತು ಬಿ ವೈ ರಾಘವೇಂದ್ರ ಅವರಿಗೆ ಸಚಿವ ಸ್ಥಾನವನ್ನಾಗಲೀ, ಉಪಮುಖ್ಯಮಂತ್ರಿ ಸ್ಥಾನವನ್ನಾಗಲೀ ನೀಡದೆ ಇರುವುದು ಮತ್ತು ಅದೇ ಹೊತ್ತಿಗೆ ಬಿ ಎಸ್ ವೈ ಕಟ್ಟಾ ಬೆಂಬಲಿಗ ನಾಯಕರನ್ನೂ ಬಹುತೇಕ ಸಂಪುಟದಿಂದ ಹೊರಗಿಟ್ಟಿರುವುದರ ಪರಿಣಾಮಗಳನ್ನು ಕೂಡ ಬಿಜೆಪಿಯ ಈ ನಾಯಕರು ಊಹಿಸಿರುವಂತಿದೆ. ಈಗಾಗಲೇ ಯಡಿಯೂರಪ್ಪ ಬಿಜೆಪಿಯಿಂದ ಹೊರಹೋಗಬಹುದು. ತಮ್ಮದೇ ಪಕ್ಷ ಕಟ್ಟಬಹುದು. ಅಥವಾ ಪಕ್ಷದಲ್ಲಿಯೇ ಉಳಿದರೂ ಸಕ್ರಿಯವಾಗಿ ಕೆಲಸ ಮಾಡದೇ ಉದಾಸೀನ ಮಾಡಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ತಮ್ಮ ರಾಜೀನಾಮೆಯ ಬಳಿಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಯಡಿಯೂರಪ್ಪ ಬಹುತೇಕ ನೇಪಥ್ಯಕ್ಕೆ ಸರಿದಿದ್ದಾರೆ. ಪಕ್ಷದ ಸಚಿವ ಸಂಪುಟ ರಚನೆ, ಖಾತೆ ಹಂಚಿಕೆ, ಉಸ್ತುವಾರಿ ಹಂಚಿಕೆಯಂತಹ ಹಲವು ವಿಷಯದಲ್ಲಿ ಸಾಕಷ್ಟು ಗೊಂದಲ, ಬಿಕ್ಕಟ್ಟು ಎದುರಾದರೂ ಬಹುತೇಕ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ಅವರ ಅಂತಹ ಮೌನದ ಹಿಂದೆ ಕೂಡ ಮುಂದಿನ ಚುನಾವಣೆಯ ನೇತೃತ್ವ ಕುರಿತ ಈಶ್ವರಪ್ಪ ಮತ್ತಿತರ ನಾಯಕರ ಹೇಳಿಕೆಗಳ ಕುರಿತ ಅಸಮಾಧಾನ ಇದೆ ಎನ್ನಲಾಗುತ್ತಿದೆ.
ಹಾಗಾಗಿ, ಬಿಜೆಪಿ ವರಿಷ್ಠರು ಮತ್ತು ರಾಜ್ಯ ನಾಯಕರು ಯಡಿಯೂರಪ್ಪ ಹೊರತಾಗಿ ಮುಂದಿನ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ! ಆದರೆ, ಅವರಿಗೆ ಯಡಿಯೂರಪ್ಪ ಅವರಂತಹ ಜನನಾಯಕರ ಗೈರಿನಲ್ಲಿ ಚುನಾವಣೆಗೆ ಹೋದರೆ ಎಂಥ ಫಲಿತಾಂಶ ಸಿಗಬಹುದು ಎಂಬುದಕ್ಕೆ ಈಗಾಗಲೇ 2013ರ ವಿಧಾನಸಭೆಯ ಪಾಠ ನೆನಪಿದೆ. ಜೊತೆಗೆ ಹಿಂದಿನ ಚುನಾವಣೆಗಳಂತೆ ಅಭಿವೃದ್ಧಿ, ವಿಕಾಸ, ಅಚ್ಛೇದಿನದಂತಹ ಪೊಳ್ಳು ಭರವಸೆಗಳನ್ನು ಜನ ಈಗ ನಂಬುವುದಿಲ್ಲ ಮತ್ತು ಅಂತಹ ಪದಗಳನ್ನು ಬಳಸಿದರೆ, ಜನ ತಿರುಗೇಟು ಕೊಟ್ಟರೂ ಅಚ್ಚರಿ ಇಲ್ಲ ಎಂಬುದು ಗೊತ್ತಿದೆ!
ಆ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಗೆ ಕೆಲಸಕ್ಕೆ ಬಾರದ ‘ಅಚ್ಛೇದಿನ’, ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಮುಂತಾದ ಘೋಷಣೆಗಳನ್ನು ಹೊರತುಪಡಿಸಿದರೆ, ಬಿಜೆಪಿ ಪಾಲಿಗೆ ಉಳಿದಿರುವುದು ಕೋಮುವಾದ ಎಂಬ ಎವರ್ ಗ್ರೀನ್ ಅಸ್ತ್ರವೊಂದೇ!

ಬಿ ಎಸ್ ಯಡಿಯೂರಪ್ಪ ಸಿಎಂ ಆಗಿರುವಷ್ಟು ದಿನ ಕೆಲಮಟ್ಟಿಗಾದರೂ ರಾಜಾರೋಷವಾಗಿ ಆ ಅಸ್ತ್ರವನ್ನು ಪ್ರಯೋಗಿಸುವುದು ಅದರ ಪರಿಣತ ಪ್ರವೀಣರಾದ ಕೆ ಎಸ್ ಈಶ್ವರಪ್ಪ, ಸಿ ಟಿ ರವಿ, ನಳೀನ್ ಕುಮಾರ್ ಕಟೀಲು, ತೇಜಸ್ವಿ ಸೂರ್ಯ ಮುಂತಾದವರಿಗೆ ಕಷ್ಟವಾಗಿತ್ತು. ಆದರೆ, ಇದೀಗ ಅವರ ಬಳಿಕ ಮತ್ತೆ ಆ ಅಸ್ತ್ರವನ್ನು ತಿಕ್ಕಿ ತೀಡಿ ಸಜ್ಜುಗೊಳಿಸತೊಡಗಿದ್ದಾರೆ. ಕೋಮುದ್ವೇಷದ ಕೈದುವನ್ನು ಹರಿತಗೊಳಿಸುವ ಅಂತಹ ಪ್ರಯತ್ನದ ಭಾಗವಾಗಿಯೇ “ನಮ್ಮ ಮೈಮುಟ್ಟಿ ನೋಡಿ..”, “ಯಾವುದರಲ್ಲಿ ಹೊಡೆಯುತ್ತಾರೋ ಅದರಲ್ಲಿ ತಿರುಗಿಸಿ ಹೊಡೆಯಿರಿ..”, “ಒಂದಕ್ಕೆ ಎರಡು ತಿರುಗೇಟು ಕೊಡಿ..”, ತಮ್ಮನ್ನು ಟೀಕಿಸಿದ ಪ್ರತಿಪಕ್ಷ ನಾಯಕರನ್ನು “ಕುಡುಕ ಸೂ..ಮಕ್ಕಳು” ಎಂಬಂತಹ ಅಪ್ಪಟ ಸು’ಸಂಸ್ಕೃತಿ’ಯ, ‘ಸಚ್ಛಾರಿತ್ರ್ಯ’ದ ಮತ್ತು ‘ಶೀಲ’ದ ಅಣಿಮುತ್ತುಗಳು ಉದುರತೊಡಗಿವೆ.
ರಾಜ್ಯ ಸರ್ಕಾರದಲ್ಲಿ ಹಿರಿಯ ಸಚಿವರಾಗಿ, ಅನುಭವಿ ನಾಯಕರಾಗಿ, ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸನ್ನಡತೆಗೆ, ಸದ್ವಿಚಾರಕ್ಕೆ, ಸದಾಚಾರಕ್ಕೆ ಮಾದರಿಯಾಗಬೇಕಾದ ನಾಯಕ ಕೆ ಎಸ್ ಈಶ್ವರಪ್ಪ, ಹಾದಿಬೀದಿಯ ಪೊರ್ಕಿಗಳೂ ಬಳಸಲು ಹಿಂಜರಿಯುವ ಭಾಷೆಯಲ್ಲಿ ಮಾಧ್ಯಮಗಳ ಮೂಲಕ ಇಡೀ ನಾಡಿನ ಜನತೆಯ ಎದುರು ಇಂತಹ ಮಾತುಗಳನ್ನು ಆಡುತ್ತಾರೆ ಎಂದರೆ, ಅದು ಕೇವಲ ಅಚಾನಕ್ ಅಲ್ಲ. ಹಾಗೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ತಮಿಳುನಾಡು ಮತ್ತು ಗೋವಾ ಉಸ್ತುವಾರಿ ಹೊಣೆಹೊತ್ತಿರುವ ನಾಯಕ ಸಿ ಟಿ ರವಿ ಕೂಡ “ಕಾಂಗ್ರೆಸ್ ನಾಯಕರು ಇಂದಿರಾ ಬಾರ್, ನೆಹರೂ ಹುಕ್ಕಾ ಬಾರ್ ಮಾಡಲಿ” ಎಂಬಂತಹ ಅಸಹ್ಯಕರ ಹೇಳಿಕೆ ನೀಡುತ್ತಾರೆ ಎಂದರೆ ಅದು ಕೇವಲ ತಾಳತಪ್ಪಿದ ಹೇಳಿಕೆಯಲ್ಲ.
ಬಿಜೆಪಿಯ ನಾಯಕರ ಇಂತಹ ಹೇಳಿಕೆಗಳ ಹಿಂದೆ ಒಂದು ವ್ಯವಸ್ಥಿತ ಯೋಜನಾಬದ್ಧ ತಂತ್ರಗಾರಿಕೆ ಇರುತ್ತದೆ ಮತ್ತು ಅಂತಹ ತಂತ್ರಗಾರಿಕೆಯ ಅಸ್ತ್ರಗಳು ಸಂಘಪರಿವಾರದ ಮೋಸೆಯಿಂದಲೇ ಬಂದಿರುತ್ತವೆ ಎಂಬುದಕ್ಕೆ ಇತಿಹಾಸದುದ್ದಕ್ಕೂ ಸಾಲುಸಾಲು ಉದಾಹರಣೆಗಳಿವೆ. ಹಾಗೆ ಸ್ಪಷ್ಟ ಲೆಕ್ಕಾಚಾರಗಳಿಲ್ಲದೆ, ತಂತ್ರವಿಲ್ಲದೆ ಬಿಜೆಪಿಯಲ್ಲಿ ಒಂದು ಕಡ್ಡಿಯೂ ಅಲುಗಾಡುವುದಿಲ್ಲ ಎಂಬುದು ಬಿಜೆಪಿಯನ್ನು ಬಲ್ಲವರಿಗೆ ಗೊತ್ತಿಲ್ಲದ ಸಂಗತಿಯೇನಲ್ಲ.
ಆದರೆ, ಪ್ರಚೋದನಕಾರಿ ಮತ್ತು ಅವಹೇಳನಕಾರಿ ಹೇಳಿಕೆಗಳ ಮೂಲಕ ಬಿಜೆಪಿಯ ಈ ಹಿರಿಯ ನಾಯಕರು ಯಾವ ಗುರಿ ಸಾಧಿಸಲು ಹೊರಟಿದ್ದಾರೆ ಮತ್ತು ಅವರ ಪ್ರಚೋದನೆಯ ತತಕ್ಷಣದ ಗುರಿ ಯಾರು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಿದೆ. ಅದು ಅರ್ಥವಾಗಬೇಕಾದರೆ, ಯಡಿಯೂರಪ್ಪ ರಾಜೀನಾಮೆ ಬಳಿಕ, ನಳೀನ್ ಕುಮಾರ್ ಕಟೀಲು ನೇತೃತ್ವದಲ್ಲಿಯೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಪುನರುಚ್ಛರಿಸುತ್ತಿರುವುದನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಈ ನಡುವೆ ಯಡಿಯೂರಪ್ಪ ಮೌನದ ಹಿಂದಿನ ನಡೆಗಳನ್ನೂ ಅರ್ಥಮಾಡಿಕೊಳ್ಳಬೇಕು!

ಹಾಗಾಗಿ, ನಳೀನ್ ಕುಮಾರ್ ಕಟೀಲು ನೇತೃತ್ವದಲ್ಲಿ ಚುನಾವಣೆ ಎದುರಿಸಲು ಬಿಜೆಪಿ ಈಗಾಗಲೇ ಭರ್ಜರಿ ತಯಾರಿಗಳನ್ನು ಆರಂಭಿಸಿದೆ. ಅದಕ್ಕಾಗಿ ಮತ್ತೆ ಉಗ್ರ ಹಿಂದುತ್ವದ ಅಸ್ತ್ರಗಳಿಗೆ ಸಾಣೆ ಹಿಡಿಯಲಾಗುತ್ತಿದೆ. ಹಾಗಾಗಿ ಈ ವಿಧಾನಸಭೆಯ ಇನ್ನುಳಿದ ಒಂದೂಮುಕ್ಕಾಲು ವರ್ಷದ ಅವಧಿಯಲ್ಲಿ (ಅಥವಾ ಮುನ್ನವೇ ಚುನಾವಣೆ ಬಂದರೂ!) ರಾಜ್ಯದ ಕರಾವಳಿ, ಮಲೆನಾಡಿನಿಂದ ಆರಂಭವಾಗಿ ಹಲವು ಕಡೆ ಕೋಮು ದಳ್ಳುರಿಗಳು ಹೊತ್ತಿಕೊಳ್ಳುವ ಸಾಧ್ಯತೆಯನ್ನು ನಿರಾಕರಿಸಲಾಗದು.
ಏಕೆಂದರೆ, ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಮೋದಿಯ ಸಾಧನೆಗಳ ಬಗ್ಗೆ ಜನಸಾಮಾನ್ಯರು ಈಗಾಗಲೇ ಆಕ್ರೋಶ ವ್ಯಕ್ತಪಡಿಸತೊಡಗಿದ್ದಾರೆ. ಕೇವಲ ಕರೋನಾ ನಿರ್ವಹಣೆ, ಲಸಿಕೆ ಅವಾಂತರ, ಪೆಟ್ರೋಲ್- ಡೀಸೆಲ್ ಬೆಲೆ ವಿಷಯಗಳೇ ಜನ ಸಾಮಾನ್ಯರಿಗೆ ಮೋದಿಯವರ ಅಚ್ಛೇದಿನದ ರುಚಿ ಉಣ್ಣಿಸಿವೆ. ಇನ್ನು ರಾಜ್ಯದಲ್ಲಂತೂ ಬ್ರಹ್ಮಾಂಡ ಭ್ರಷ್ಟಾಚಾರ, ಗುಂಪುಗಾರಿಕೆ, ಸ್ವಜನಪಕ್ಷಪಾತ, ಬಂಡಾಯದಲ್ಲೇ ಎರಡು ವರ್ಷಗಳನ್ನು ಕಳೆದಿರುವ ಬಿಜೆಪಿಗೆ, ಜನರ ಮುಂದೆ ಹೋಗಲು ಈಗ ಉಳಿದಿರುವುದು ಕೋಮುವಾದವೊಂದೇ ಅಸ್ತ್ರ!