ಕರೋನಾ ಇರಲಿ, ಬಿಡಲಿ. ಜನ ಸಾಯಲಿ, ಬಿಡಲಿ. ಬಿಜೆಪಿಗೆ ಅಧಿಕಾರ ಹಿಡಿಯುವುದು ಮುಖ್ಯ. ಅದಕ್ಕಾಗಿ ಚುನಾವಣೆ ನಡೆಸುವುದು ಮುಖ್ಯ. ತನ್ನ ಈ ಘನಧ್ಯೋಯೋದ್ದೇಶವನ್ನು ಬಿಜೆಪಿ ಇತ್ತೀಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿಶೇಷವಾಗಿ ಪಶ್ಚಿಮ ಬಂಗಾಳದ ವಿಷಯದಲ್ಲಿ ಸಾಬೀತು ಪಡಿಸಿತ್ತು. ಕರೋನಾ ಎರಡನೇ ಅಲೆ ಶುರುವಾತಿನಲ್ಲಿ ಚುನಾವಣೆ ನಡೆಸಿದ ಮತ್ತು ಜವಾಬ್ದಾರಿ ಮರೆತು ಬೃಹತ್ ಸಮಾವೇಶಗಳನ್ನು ನಡೆಸಿದ ಬಿಜೆಪಿಯ ಕ್ರೂರ ವರ್ತನೆ ಬಗ್ಗೆ ವ್ಯಾಪಕವಾದ ಟೀಕೆ-ಟಿಪ್ಪಣಿಗಳು ಕೇಳಿಬಂದಿದ್ದವು. ಆದರೆ ಅವ್ಯಾವುಗಳನ್ನೂ ಬಿಜೆಪಿ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕರೋನಾ ನಡುವೆಯೇ, ಅದರಲ್ಲೂ ಯಾವಾಗ ಬೇಕಾದರೂ ಮೂರನೇ ಅಲೆ ಬಂದು ಅಪ್ಪಳಿಸಬಹುದು ಎಂಬ ಸ್ಪಷ್ಟವಾದ ಮುನ್ಸೂಚನೆ ಇದ್ದರೂ ಮತ್ತೆ ಚುನಾವಣೆಗೆ ಅಣಿಯಾಗುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ‘ಗೆದ್ದಾಗಿದೆ’ ಎಂಬ ವಿಶ್ವಾಸದಲ್ಲಿದ್ದರು ಬಿಜೆಪಿ ನಾಯಕರು. ಪಶ್ಚಿಮ ಬಂಗಾಳದಲ್ಲಿ ಗೆಲ್ಲುವ ಮೂಲಕ 2024ರ ಲೋಕಸಭಾ ಚುನಾವಣೆಗೆ ‘ಟ್ರೆಂಡ್ ಸೆಟ್ ಮಾಡಿಬಿಡುತ್ತೇವೆ’ ಎಂಬ ಕನಸು ಕಾಣುತ್ತಿದ್ದರು. ಅದೇ ಕಾರಣಕ್ಕೆ ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಹಳ ‘ಅಗ್ರೇಸೀವ್ ಅಟ್ಯಾಕ್’ಗಳನ್ನು ಮಾಡಿದರು. ಆದರೆ ಮಮತಾ ಬ್ಯಾನರ್ಜಿ ಅಭೂತಪೂರ್ವ ವಿಜಯ ಸಾಧಿಸಿಬಿಟ್ಟರು. ಹಾಗಾಗಿ ಪಶ್ಚಿಮ ಬಂಗಾಳದ ಸೋಲು ‘ಕೇವಲ ರಾಜ್ಯವೊಂದರ ಸೋಲಾಗಿರದೆ’ ಭಾರೀ ಮುಖಭಂಗ ಉಂಟು ಮಾಡಿತ್ತು. ಇದಾದ ಮೇಲೆ ಉತ್ತರ ಪ್ರದೇಶದ ಪಂಚಾಯತ್ ಚುನಾವಣಾ ಫಲಿತಾಂಶ ಬಂತು. ಅದು ‘ಗಾಯದ ಮೇಲೆ ಎಳೆದ ಬರೆ’ಯಾಗಿತ್ತು.

ಇಡೀ ಉತ್ತರ ಪ್ರದೇಶದಾದ್ಯಂತ ಹಿನ್ನಡೆಯಾಗಿದ್ದರೂ ಬಿಜೆಪಿ ಇಷ್ಟು ಚಿಂತಿತವಾಗುತ್ತಿರಲಿಲ್ಲ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ, ‘ಮೋದಿ ಬಿಟ್ಟರೆ ಯೋಗಿ’ ಎಂಬ ‘ಅಭಿಯಾನ’ ಜಾರಿಯಲ್ಲಿರುವಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಿಂದೆ ಪ್ರತಿನಿಧಿಸುತ್ತಿದ್ದ ಗೋರಖ್ ಪುರ ಲೋಕಸಭಾ ಕ್ಷೇತ್ರದಲ್ಲಿ, ಇಷ್ಟು ದಿನ ಯಾವ ಊರಿನ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು ಬಂದಿತ್ತೋ ಅದೇ ಅಯೋಧ್ಯಯಲ್ಲಿ, ಅದೂ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ನಂತರ ಹಾಗೂ ಅಯೋಧ್ಯೆ ಬಳಿಕ ಗುರಿ ಮಾಡಿಕೊಂಡಿರುವ ಮಥುರಾದಲ್ಲಿ ಬಿದ್ದಿರುವ ಪೆಟ್ಟಿನಿಂದ ಬಿಜೆಪಿ ವಿಚಲಿತವಾಗಿದೆ.
ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲೂ ಮರ್ಮಾಘಾತ ಆಗಬಹುದು ಎಂದುಕೊಂಡಿದೆ. ಉತ್ತರ ಪ್ರದೇಶ ಗೆಲ್ಲದಿದ್ದರೆ 2024ರ ಲೋಕಸಭಾ ಚುನಾವಣೆಯನ್ನೂ ಸೋಲು ಅನುಭವಿಸಬೇಕಾಗುತ್ತದೆ ಎಂಬ ನಿರ್ಧಾರಕ್ಕೆ ಬಂದಿದೆ. ಅದೇ ಕಾರಣಕ್ಕೆ ಬಿಜೆಪಿಗೆ ಉತ್ತರ ಪ್ರದೇಶದ ಚುನಾವಣೆಯ ಮುಂದೆ ಕರೋನಾ ತೃಣಮಾತ್ರವಾಗಿದೆ. ಈಗಾಗಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಲಕ್ನೋಗೆ ತೆರಳಿ ಸಭೆಗಳನ್ನು ನಡೆಸಿದ್ದಾರೆ. ಕರೋನಾದಿಂದ ಸತ್ತವರ ಅಂತ್ಯಸಂಸ್ಕಾರ ಮಾಡದೆ, ಅಂಕಿ ಅಂಶಗಳನ್ನು ಮುಚ್ಚಿಡಲು ‘ಮಾತೆ’ ಎಂದು ಕರೆಯುವ ಅಥವಾ ‘ಪವಿತ್ರ ನದಿ’, ‘ಪೂಜ್ಯನೀಯ ನದಿ’ ಎಂದು ಹೇಳುವ ಗಂಗಾ ನದಿಗೆ ಶವಗಳನ್ನು ಎಸೆದಿದ್ದರೂ, ನೂರಾರು ಶವಗಳು ಗಂಗಾ ನದಿಯಲ್ಲೇ ಕೊಳೆತುಹೋದರೂ ‘ಯೋಗಿ ಆದಿತ್ಯನಾಥ್ ಯಶಸ್ವಿಯಾಗಿ ಕರೋನಾ ನಿರ್ವಹಣೆ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದಂತೆ ಗುಜರಾತ್ ಕೂಡ ಮುಖ್ಯ. ನರೇಂದ್ರ ಮೋದಿ ಮತ್ತು ‘ಬಿಜೆಪಿ ಪಾಲಿನ ಚಾಣಾಕ್ಯ’ ಅಮಿತ್ ಶಾ ಇಬ್ಬರೂ ಗುಜರಾತಿನವರು. ಇಂಥ ಅತಿರಥ-ಮಹಾರಥರನ್ನು ಇಟ್ಟುಕೊಂಡು ಚುನಾವಣೆ ಸೋತರೆ ಕೆಟ್ಟ ಸಂದೇಶ ರವಾನೆ ಆಗುತ್ತದೆ. ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಸಿಯುತ್ತದೆ. 2024ರ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕಾಗಿ ಮುಖ್ಯ. ಕಳೆದ ಬಾರಿ ಕರೋನಾದಂತಹ ಕೆಟ್ಟ ಪರಿಸ್ಥಿತಿ ಇಲ್ಲದಿದ್ದರೂ ಇದೇ ಮೋದಿ-ಶಾ ಜೋಡಿ ಅವಿರತವಾಗಿ ದುಡಿದರೂ ಗುಜರಾತ್ ಗೆಲ್ಲಲು ಬಿಜೆಪಿ ಎದುಸಿರು ಬಿಡಬೇಕಾಯಿತು. ಆದುದರಿಂದ ಗುಜರಾತ್ ಅನ್ನು ಕಡೆಗಣಿಸುವಂತಿಲ್ಲ. ಪಕ್ಷಕ್ಕೆ ಬಹುಮತ ಸಿಗದಿದ್ದರೂ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದ ಗೋವಾ ಮತ್ತು ಮಣಿಪುರದಲ್ಲಿ ಮರಳಿ ಅಧಿಕಾರ ಪಡೆಯದಿದ್ದರೆ ಸಂಖ್ಯೆಗಳ ದೃಷ್ಟಿಯಲ್ಲಿ ಬಿಜೆಪಿ ಮಂಕಾಗಬೇಕಾಗುತ್ತದೆ. ರೈತರ ಪ್ರತಿಭಟನೆ ಹಿನ್ನಲೆಯಲ್ಲಿ ಪಂಜಾಬ್ ಚುನಾವಣೆ ಮಹತ್ವದ್ದು.

ಇದರಿಂದಾಗಿ ಬಿಜೆಪಿಯ ಆದ್ಯತೆ ಮುಂಬರುವ ಚುನಾವಣೆಯಾಗಿದೆ. ಮೂರನೇ ಅಲೆಯ ಕರೋನಾ ಬಂದು ಮತ್ತೆ ಲಕ್ಷಾಂತರ, ಕಡೆಯ ಪಕ್ಷ ಸಾವಿರಾರು ಜನ ಸಾಯುತ್ತಾರೆ ಎಂಬುದು ಒಂದು ವಿಷಯವೇ ಅಲ್ಲ. ಹಾಗಾಗಿ ಈಗಾಗಲೇ ಉತ್ತರ ಪ್ರದೇಶ, ಗುಜರಾತ್, ಗೋವಾ, ಮಣಿಪುರ ಮತ್ತು ಪಂಜಾಬ್ ರಾಜ್ಯಗಳ ವಿಧಾನಸಭಾ ಚುನಾವಣೆ ತಯಾರಿ ಆರಂಭಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ ಜೆ.ಪಿ. ನಡ್ಡ ಜೂನ್ 5 ಮತ್ತು 6ರಂದು ಎರಡು ದಿನ ದೆಹಲಿಯಲ್ಲಿ ಈ ರಾಜ್ಯಗಳ ಬಿಜೆಪಿ ಉಸ್ತುವಾರಿಗಳು ಹಾಗೂ ಇನ್ನಿತರ ಪಕ್ಷದ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಸುತ್ತಿದ್ದಾರೆ. ಮುಂದೆ ಕರೋನಾ ಮೂರನೇ ಅಲೆ ಇದ್ದರೂ ಬೃಹತ್ ಸಮಾವೇಶಗಳನ್ನು ಮಾಡಬಹುದು; ಪಶ್ಚಿಮ ಬಂಗಾಳದಲ್ಲಿ ಮಾಡಿದಂತೆ. ಸಾಯುವವರು ಜನ ತಾನೇ!
‘ಬಾಹುಬಲಿ’ ಸಿನಿಮಾದಲ್ಲಿ ಬಲ್ಲಾಳ ದೇವನ ವಿಗ್ರಹ ಪ್ರತಿಷ್ಠಾಪನೆ ಮಾಡುವಾಗ ವಿಗ್ರಹ ಕೆಳೆಗೆ ಬೀಳುತ್ತಿರುತ್ತದೆ. ಗಾಲಿಗೆ ಸಿಲುಕಿ ಜನ ಸಾಯುತ್ತಿರುತ್ತಾರೆ. ಆಗ ಬಲ್ಲಾಳದೇವನ ಅಪ್ಪ ‘ಏನೂ ಸಮಸ್ಯೆ ಇಲ್ಲ, 50 ಅಡಿ ಎತ್ತರದ ಪ್ರತಿಮೆ ನೂರಿನ್ನೂರು ಜನರ ಬಲಿ ಪಡೆಯಬಾರದಾ?’ (ಕೋಯಿ ಚಿಂತಾ ನಹಿ.. ಪಚಾಸ್ ಗಜ್ ಕಿ ಪ್ರತಿಮಾ, ಕ್ಯಾ ಸೌ, ದೋ ಸೌ ಲೋಗೋಂಕಾ ಬಲಿ ನಹೀ ಮಾಂಗ್ ಸಖ್ತಿ) ಎಂದು ಹೇಳುತ್ತಾನೆ. ಬಿಜೆಪಿ ನಾಯಕರ ಭಾವನೆ ಕೂಡ ಅದೇ; ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯ ಗೆಲ್ಲಲು ಸಾವಿರಾರು ಜನ ಸತ್ತರೇನಂತೆ? ಅಂತಾ…