ಬೆಂಗಳೂರು: ಕಾಂಗ್ರೆಸ್ ಸರ್ಕಾರ ಹೋಳಾಗಿದ್ದು, ಜನರ ಪಾಲಿಗೆ ಗೋಳು ಹಾಗೂ ರೈತರಿಗೆ ಹೂಳು ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಕಾಂಗ್ರೆಸ್ ಕರ್ಮಕಾಂಡಗಳ ಅನಾವರಣ ಪೋಸ್ಟರ್ ಬಿಡುಗಡೆ ಬಳಿಕ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಕಾಯಿಲೆ ಬಿದ್ದು ಸೊರಗಿ ಡ್ರಿಪ್ ಹಾಕಿಸಿಕೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ದೆಹಲಿಗೆ ಹೋದವರಿಗೆ ಕ್ಯಾಬಿನೆಟ್‍ನಿಂದ ವಜಾ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಶಾಸಕರ ನಿಧಿ ಕೊಡುವುದಿಲ್ಲ ಎಂದು ಧಮ್ಕಿ ಹಾಕಿರುವುದು ಕೂಡ ಮಾಧ್ಯಮಗಳಲ್ಲಿ ಬರುತ್ತಿದೆ ಎಂದರು.

ಒಂದು ಕಡೆ ಡಿ.ಕೆ.ಶಿವಕುಮಾರ್ ದೆಹಲಿಗೆ ಹೋಗಿ ಎನ್ನುತ್ತಾರೆ. ಇನ್ನೊಂದೆಡೆ ಸಿದ್ದರಾಮಯ್ಯನವರು ದೆಹಲಿಗೆ ಯಾಕೆ ಹೋದೆ ಎಂದು ಕೇಳುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಎರಡುವರೆ ವರ್ಷದ ಓಳು. ವರೆ ವರ್ಷ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ಅವರಿಗೆ ಪೂರ್ತಿ ವರಿ ತಂದಿದೆ. ರಾಜ್ಯದ ಜನರ ಪಾಲಿಗೆ ಇದು ಬೆಲೆ ಏರಿಕೆಯ ಹೊರೆ, ಜನರಿಗೆ ಬರೆ ಎಂದು ಆಕ್ಷೇಪಿಸಿದರು.

ಇವತ್ತಿನವರೆಗೂ ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
25 ವಸ್ತುಗಳ ಬೆಲೆ ಏರಿಸಿದ್ದಾರೆ. ವಿದ್ಯುತ್, ಹಾಲು ದರ, ನೋಂದಣಿ ಶುಲ್ಕ, ಪೆಟ್ರೋಲ್, ಡೀಸೆಲ್, ಅಬಕಾರಿ ಸೇರಿ- ಏನೇನಿದೆಯೋ ಅದೆಲ್ಲವೂ ದುಬಾರಿಯಾಗಿದೆ. ಒಂದೇ ವರ್ಷದಲ್ಲಿ ಇಷ್ಟು ಬೆಲೆ ಏರಿಸಿದ ನಂಬರ್ 1 ಪಾಪಿ ಸರಕಾರ ಇದೆಂದು ಆಕ್ಷೇಪಿಸಿದರು. ಇವತ್ತಿನವರೆಗೂ ಅತಿ ಹೆಚ್ಚು ಸಾಲ (2 ಲಕ್ಷ ಕೋಟಿಗೂ ಹೆಚ್ಚು) ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ತಿಳಿಸಿದರು. ಇವರು ಬೆಲೆ ಏರಿಕೆ, ಅಕ್ರಮ, ಹಗರಣಗಳ, ಸಾಲ ಮಾಡುವುದರಲ್ಲಿ ಚಾಂಪಿಯನ್ ಎಂದು ಟೀಕಿಸಿದರು.

ರೈತರನ್ನು ಸಾಯಿಸುವುದರಲ್ಲಿ ಇವರು ಚಾಂಪಿಯನ್, ಗುತ್ತಿಗೆದಾರರ ಆತ್ಮಹತ್ಯೆಯಲ್ಲಿ ಚಾಂಪಿಯನ್, ಜಾತಿಗಳ ನಡುವೆ ಬೆಂಕಿ ಹಚ್ಚುವುದರಲ್ಲಿ ಚಾಂಪಿಯನ್, ದೆಹಲಿಗೆ ಗರಿಷ್ಠ ಹಣ ಕಳಿಸುವುದರಲ್ಲೂ ಇವರೇ ಚಾಂಪಿಯನ್- ಈ ಥರ ಎರಡೂವರೆ ವರ್ಷದಲ್ಲಿ ನೀವು ಚಾಂಪಿಯನ್ ಆಗಿದ್ದೀರಿ ಎಂದು ವ್ಯಂಗ್ಯವಾಗಿ ನುಡಿದರು.

ನಿಮ್ಮನ್ನು ಸಿಎಂ ಆಗಿ ಆಯ್ಕೆ ಮಾಡಿದ ಶಾಸಕರೇ ನೀವು ಬೇಡ ಎಂದು ದೆಹಲಿಯಲ್ಲಿ ಖರ್ಗೆಯವರನ್ನು ಭೇಟಿ ಮಾಡಿದ್ದಾರೆ. ಇಷ್ಟಿದ್ದರೂ ಕ್ರಾಂತಿ- ಭ್ರಾಂತಿ ಇಲ್ಲವೆಂದು ಸಿದ್ದರಾಮಯ್ಯ ಹೇಳುತ್ತಾರೆ ಎಂದು ಟೀಕಿಸಿದರು. ಶಾಸಕರು ಖರ್ಗೆ ಮನೆಗೆ ವಾಂತಿ ಮಾಡಲು ಹೋಗಿದ್ದರೇ ಎಂದು ಕೇಳಿದರು.






