ಮಂಡ್ಯ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜನಸಂಕಲ್ಪ ಯಾತ್ರೆ ಮೂಲಕ ಚುನಾವಣಾ ತಯಾರಿ ಆರಂಭಿಸಿರುವ ಬಿಜೆಪಿ ನಾಯಕರು ಶುಕ್ರವಾರ ಸಕ್ಕರೆ ನಾಡು ಮಂಡ್ಯದಲ್ಲಿ ಚುನಾವಣಾ ರಣಕಹಳೆ ಮೊಳಗಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದರು. ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನ ಅಧಿಕಾರಕ್ಕೆ ತರುವಂತೆ ಮಂಡ್ಯ ಜಿಲ್ಲೆಯ ಮತದಾರರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸವಲತ್ತು ಸಿಕ್ಕಿಲ್ಲ ಅನ್ನೋ ಒಂದೇ ಒಂದು ಮನೆ ತೋರಿಸಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎಲ್ಲರ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ರಾಜ್ಯದ ಕಾಂಗ್ರೆಸ್ ನಾಯಕರು ಹಣ, ಹೆಂಡ ಹಾಗೂ ಅಧಿಕಾರ ಬಲದಲ್ಲಿ ಚುನಾವಣೆ ಗೆಲ್ಲುವ ಕನಸು ಕಾಣುತ್ತಿದ್ದಾರೆ. ಆದರೆ 2023ರಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರೋದು ಸೂರ್ಯ ಚಂದ್ರರಷ್ಟೇ ಸತ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಿಂದ ನಾರಾಯಣಗೌಡ, ಇಂದ್ರೇಶ್ ಜೊತೆ ನಾಲ್ಕೈದು ಜನರನ್ನ ಗೆಲ್ಲಿಸಿ ಕಳಿಸಿ ಎಂದ ಅವರು, ನಾನು ಡಾ.ಇಂದ್ರೇಶ್ ಅವರನ್ನ ಅಭಿನಂದಿಸುತ್ತೇನೆ,
ಅವರ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇರಬೇಕು.
ಇಂದ್ರೇಶ್ ಅವರ ಶಕ್ತಿ ಇಮ್ಮಡಿಗೊಳಿಸಿ ಎಂದ ಅವರು, ಇಂದಿನ ಸಮಾರಂಭಕ್ಕೆ ಇಷ್ಟು ಜನ ಸೇರುತ್ತೀರಾ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ಆದರೆ ಮುಂದಿನ ಚುನಾವಣೆಯನ್ನು ಹಗುರವಾಗಿ ಕಾಣಬೇಡಿ. ಸರ್ಕಾರದ ಯೋಜನೆಯನ್ನ ಜನರ ಮನೆ ಮನಕ್ಕೆ ತಲುಪಿಸಿ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಪಾಂಡವಪುರಕ್ಕೆ ನ್ಯಾಯ ಸಿಗಬೇಕಾದರೆ ಬಿಜೆಪಿ ಗೆಲ್ಲಬೇಕಿದೆ. ಯಡಿಯೂರಪ್ಪ ಅವರ ಸುಧೀರ್ಘ ರಾಜಕೀಯಕ್ಕೆ ಮಂಡ್ಯ ಜನರ ಸದಾ ಬೆಂಬಲ ನೀಡಿದ್ದು, ನಾಲ್ಕು ಬಾರಿ ಸಿಎಂ ಆಗಿದ್ದಾರೆ. ಈ ಬಾರಿ ಮತ್ತೆ ಬಿಜೆಪಿ ಸರ್ಕಾರ ತರಲು ಯಡಿಯೂರಪ್ಪ ಸಂಕಲ್ಪ ಮಾಡಿದ್ದು, ಹೀಗಾಗಿ ಜನಸಂಕಲ್ಪ ಯಾತ್ರೆಯ ನೇತೃತ್ವವಹಿಸಿ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ 2023ಕ್ಕೆ ಇತಿಹಾಸ ಬರೆಯುವ ಚುನಾವಣೆಯಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿಯಲ್ಲಿ ವೇಗವಾಗಿ ಹೋಗುತ್ತಿದ್ದು, ರಾಜ್ಯ ಸಮಗ್ರವಾಗಿ ಅಭಿವೃದ್ಧಿ ಆಗಬೇಕು. ಕಲ್ಯಾಣ ರಾಜ್ಯದ ಪರಿಕಲ್ಪನೆಯಿಂದ ನಮ್ಮ ಆಡಳಿತ ಕೂಡಿದ್ದು, ನಮ್ಮ ಅಧಿಕಾರದ ರಿಪೋರ್ಟ್ ಕಾರ್ಡ್ ಹಿಡಿದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ಸರ್ಕಾರ ಕುಡಿಯುವ ನೀರು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವಾರು ಯೋಜನೆಗಳನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ಜಾರಿಗೆ ತಂದಿದೆ. ಹೀಗಾಗಿ ಎಲ್ಲಾ ಕಡೆ ಬಿಜೆಪಿ ಗಾಳಿ ಜೋರಾಗಿ ಬೀಸುತ್ತಿದೆ. ಪಾಂಡವಪುರದಲ್ಲಿ ಬಿಜೆಪಿ ಅರಳಲು ಸನ್ನದ್ಧವಾಗಿದೆ, ಇಲ್ಲಿ ಯಾವಾಗಲೂ ಕಾಂಗ್ರೆಸ್ ವಿರೋಧಿ ಶಾಸಕರನ್ನ ಆಯ್ಕೆ ಮಾಡಿದ್ದೀರಿ. ಈ ಬಾರಿ ಬಿಜೆಪಿ ಶಾಸಕರನ್ನ ಆಯ್ಕೆ ಮಾಡಿ ಎಂದ ಅವರು, ಇಂದ್ರೇಶ್ ರೀತಿಯ ಒಳ್ಳೆಯ ಯುವ ಸಂಘಟಕ ನಿಮಗೆ ಸಿಕ್ಕಿದ್ದಾನೆ. ಆತನಿಗೆ ನಿಮ್ಮ ಸೇವೆಗೆ ಅವಕಾಶ ಕಲ್ಪಿಸಿಕೊಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ, ಕಾಂಗ್ರೆಸ್‌ನಲ್ಲಿ ಒಬ್ಬರು ಟಿಪ್ಪು, ಮತ್ತೊಬ್ಬರು ಟೆರರ್ ಪರ ಮಾತನಾಡುತ್ತಾರೆ. ನಾನು ಈವರೆಗೂ ಕುಕ್ಕರ್ ನಲ್ಲಿ ಅಕ್ಕಿ ಬೇಯಿಸೋದನ್ನ ನೋಡಿದ್ದೇನೆ ಹೊರತು, ಬಾಂಬ್ ಬೇಯಿಸೋದನ್ನ ನೋಡಿಲ್ಲ. ಹೀಗಾಗಿ ಟೆರರ್ ನನ್ನು ಬೆಂಬಲಿಸುವ ಪಕ್ಷ ಮತ್ತು ನಾಯಕರಿಗೆ ಅವರ ಸ್ಥಳ ತೋರಿಸಿ ಎಂದ ಅವರು, ಒಬ್ಬನಂತೂ ಜೈಲಿಗೆ ಹೋಗುತ್ತಾನೆ,
ಇನ್ನೊಬ್ಬರ ಸ್ಥಿತಿಯನ್ನ ನೀವೇ ಅವಲೋಕನ ಮಾಡಿ, ದೇಶ ದ್ರೋಹದ ಬಗ್ಗೆ ಮಾತನಾಡುವಾಗ ಎಚ್ಚರವಾಗಿರಲಿ ಎಂದು ಟಾಂಗ್ ನೀಡಿದರು.
ಸಮಾರಂಭದಲ್ಲಿ ಸಚಿವರಾದ ಆರ್.ಅಶೋಕ್, ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡ, ಎಂಎಲ್ಸಿ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಬಿಜೆಪಿ ಟಿಕೆಟ್ ಆಕಾಂಕ್ಷಿ ಡಿ.ಇಂದ್ರೇಶ್ ಮತ್ತಿತರರು ಹಾಜರಿದ್ದರು