ಬಿಜೆಪಿ – ಜೆಡಿಎಸ್ ನಿಂದ ಪ್ರೀತಿ ನಿರೀಕ್ಷೆ ಅಸಾಧ್ಯ

“ಧರ್ಮಸ್ಥಳ ಪ್ರಕರಣದ ಬಗ್ಗೆ ಬಾಯಿ ಮುಚ್ಚಿಕೊಂಡಿದ್ದ ಬಿಜೆಪಿಯವರು ಈಗ ರಾಜಕೀಯ ಮಾಡುತ್ತಾ ಧರ್ಮಸ್ಥಳವನ್ನು ಅಶುದ್ಧ ಮಾಡಲು ಹೊರಟಿದ್ದಾರೆ. ಭಕ್ತಾದಿಗಳನ್ನು ಇಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿಚಾರ ಮಾತನಾಡಿದರು.

“ಬಿಜೆಪಿಯ ಎರಡು ಗುಂಪುಗಳ ಆಂತರಿಕ ರಾಜಕಾರಣದಿಂದ ಈ ‘ಷಡ್ಯಂತ್ರ’, ‘ಕುತಂತ್ರ’ ನಡೆಯುತ್ತಿದೆ. ಯಾರ್ಯಾರ ಬಂಧವಾಗಿದೆ, ಯಾರ್ಯಾರ ಹೇಳಿಕೆ ಯಾರ್ಯಾರ ಮೇಲೆ ಇದೆ ಎನ್ನುವುದನ್ನು ನೋಡಿದರೆ ತಿಳಿಯುತ್ತದೆ. ಬಂಧನವಾಗಿರುವವನು ಯಾವ ಪಕ್ಷದವನು. ಆತ ‘ನಮ್ಮ ಶಾಸಕ’ ಎಂದು ಹೇಳುತ್ತಾನೆ. ಅವರ ಶಾಸಕ ಏನು ಹೇಳಿದ್ದಾನೆ” ಎಂದರು.
ಷಡ್ಯಂತ್ರ ಮಾಡಿರುವುದೇ ಬಿಜೆಪಿ
“ಬಿಜೆಪಿಯವರೇ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ತೊಡಗಿದ್ದಾರೆ. ‘ಷಡ್ಯಂತ್ರ’ ಮಾಡಿರುವುದೇ ಬಿಜೆಪಿ ಮತ್ತು ಅಂಗ ಸಂಸ್ಥೆಗಳು. ಈಗ ಎಲ್ಲಿ ಹೆಸರುಗಳು ಬಯಲಾಗುತ್ತದೆಯೋ ಎಂದು ಮುಚ್ಚಲು ಪ್ರಯತ್ನ ಪಡುತ್ತಿದ್ದಾರೆ. ಸೆಪ್ಟೆಂಬರ್ 1 ರಂದು ಅಲ್ಲಿ ಸಭೆ ಮಾಡುವ ಬದಲು ಇಲ್ಲೇ ಬೆಂಗಳೂರಿನಲ್ಲಿ ಮಾಡಲಿ. ದಕ್ಷಿಣ ಕನ್ನಡ ಜಿಲ್ಲೆಗೆ ಎಷ್ಟು ಅವಮಾನ ಆಗಬೇಕೋ ಅಷ್ಟು ಆಗಿದೆ. ಭಕ್ತಾಧಿಗಳು ನಿಮ್ಮನ್ನು ಕೇಳಿ ಬಸ್ ನಲ್ಲಿ ಹೋಗುತ್ತಾರೆಯೇ? ನಾವು ಮಹಿಳೆಯರಿಗೆ ಉಚಿತ ಬಸ್ ನೀಡಿದ್ದೇವೆ” ಎಂದರು.

“ಯಾರೋ ಒಬ್ಬ ಬೈದನಲ್ಲ (ಮಹೇಶ್ ಶೆಟ್ಟಿ ತಿಮರೋಡಿ) ಆತ ಬೈದಿದ್ದು ಕಾಂಗ್ರೆಸ್ ನಾಯಕರನ್ನಲ್ಲ. ಆತ ಬೈದಿದ್ದು ಬಿಜೆಪಿ ಹಿರಿಯ ನಾಯಕನನ್ನು. ಇದು ಆಂತರಿಕ ರಾಜಕೀಯವಲ್ಲವೇ? ಆತ ಸಂಘದಲ್ಲಿ ಇದ್ದವನು, ಹಿಂದೂ ಸಂಘಟನೆಯವನು ತಾನೇ? ಕಾಂಗ್ರೆಸ್ ನವರು ಬಿ.ಎಲ್.ಸಂತೋಷ್ ಅವರನ್ನು ಬೈದಿದ್ದೇವಾ? ನಮ್ಮದು ಸಂವಿಧಾನ, ಜಾತ್ಯಾತೀತ ತತ್ವವೇ ಹೊರತು ಧರ್ಮದಲ್ಲಿ ರಾಜಕೀಯ ಮಾಡುವವರಲ್ಲ” ಎಂದು ತಿಳಿಸಿದರು.
“ಇಂತಹ ರಾಜಕೀಯ ಕುತಂತ್ರಗಳಿಗೆ ತಾವು ತಮ್ಮ ಕ್ಷೇತ್ರ ಬಲಿಯಾಗಬೇಡಿ. ಧರ್ಮಸ್ಥಳ ರಾಜಕೀಯ ವೇದಿಕೆಯಲ್ಲ. ಇದನ್ನು ದುರ್ಬಳಕೆ ಮಾಡಿಕೊಳ್ಳಲು ತಾವು ಅವಕಾಶ ಕೊಡಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳ ಬಳಿ ನಾನು ಮನವಿ ಮಾಡಿಕೊಳ್ಳುತ್ತೇನೆ” ಎಂದರು.

“ಎಸ್ ಐಟಿ ರಚನೆಯನ್ನು ವಿಪಕ್ಷಗಳು, ವೀರೇಂದ್ರ ಹೆಗ್ಗಡೆಯವರು ಒಪ್ಪಿದ್ದರು. ಈ ಮೊದಲೇ ಏಕೆ ಇವರ ರಕ್ಷಣೆಗೆ ಬಿಜೆಪಿಯವರು ನಿಲ್ಲಲಿಲ್ಲ. ಕ್ಷೇತ್ರದ ಮೇಲಿನ ನಂಬಿಕೆಗೆ ಲೋಪ ಬರದಂತೆ ನಾವು ನೋಡಿಕೊಳ್ಳಬೇಕಿದೆ. ಧರ್ಮದ ಹೆಸರಿನಲ್ಲಿ ಅಶಾಂತಿ ಮೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಎನ್ ಐಎ ತನಿಖೆ ಬೇಕು ಎಂದು ಅಂದೇ ಏಕೆ ಸೂಚನೆ ನಿಡಲಿಲ್ಲ” ಎಂದರು.
ಅವರಿಂದ ಪ್ರೀತಿ ನಿರೀಕ್ಷೆ ಅಸಾಧ್ಯ
ಆರ್ ಎಸ್ ಎಸ್ ಗೀತೆ ಕ್ಷಮೆ ವಿಚಾರವಾಗಿ ಜೆಡಿಎಸ್- ಬಿಜೆಪಿ ಟೀಕೆಯ ಬಗ್ಗೆ ಕೇಳಿದಾಗ, “ಅವರುಗಳು ಇರುವುದು ನನ್ನ ಪ್ರೀತಿ ಮಾಡಲೇ? ಅವರುಗಳು ಇರುವದೇ ನನ್ನ ಟೀಕೆ ಮಾಡಲು. ಅವರಿಂದ ಪ್ರೀತಿ ನಿರೀಕ್ಷೆ ಮಾಡಲು ಸಾಧ್ಯವೇ? ನಾನು ಅವರಿಂದ ನಿರೀಕ್ಷೆ ಮಾಡುವುದು ಕೇವಲ ದ್ವೇಷ ಮಾತ್ರ” ಎಂದು ಕುಹಕವಾಡಿದರು.

“ಯಾರೂ ಸಹ ನನ್ನ ಬಗ್ಗೆ ಅನುಕಂಪ, ಪ್ರೀತಿ ತೋರಿಸುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾನು ಅವರ ವಕ್ತಾರನಲ್ಲ. ಅವರು ನನಗಿಂತ ಹಿರಿಯ ನಾಯಕರು ಅವರ ಬಳಿಯೇ ಪ್ರತಿಕ್ರಿಯೆ ಕೇಳಿ” ಎಂದರು.