ಹುಬ್ಬಳ್ಳಿ: ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಪಕ್ಷ. ಇವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡವರು. ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವ ಯಾರೊಬ್ಬರೂ ಬಿಜೆಪಿಗೆ ಮತ ಹಾಕಬಾರದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.
ಹುಬ್ಬಳ್ಳಿ ಧಾರವಾಡ ಪಶ್ಚಿಮ -74 ವಿಧಾನಸಭಾ ಕ್ಷೇತ್ರದಲ್ಲಿ ಇಂದು ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೊದಲೆಲ್ಲ ಹಿಂದೂಗಳನ್ನು ಮುಸ್ಲೀಮರ ವಿರುದ್ಧ, ಮುಸ್ಲೀಮರನ್ನು ಹಿಂದೂಗಳ ವಿರುದ್ಧ ಎತ್ತಿಕಟ್ಟಿ ಚುನಾವಣೆ ಗೆಲ್ಲುತ್ತಿದ್ದರು, ಈಗ ಜನ ಹುಷಾರಾಗಿದ್ದಾರೆ, ಹೀಗೆ ಮಾಡಿದ್ರೆ ಓಟು ಬರಲ್ಲ ಎಂದು ದುಡ್ಡಿನ ಮೂಲಕ ಚುನಾವಣೆ ಗೆಲ್ಲಲು ಹೊರಟಿದ್ದಾರೆ ಎಂದು ಗುಡುಗಿದರು.
ಒಬ್ಬೊಬ್ಬ ಮಂತ್ರಿ ಇಂತಿಷ್ಟು ಲಂಚ ಕಲೆಕ್ಷನ್ ಮಾಡಿ ಕೊಡಬೇಕು ಎಂದು ನಿಗದಿ ಮಾಡಿದ್ದಾರೆ. ನಾವು ಈ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರೆ ದಾಖಲಾತಿ ಕೊಡಿ ಎಂದು ಕೇಳುತ್ತಾರೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗಳಿಗೆ ಪತ್ರ ಬರೆದು ನಮ್ಮನ್ನು ಕಮಿಷನ್ ಹಾವಳಿಯಿಂದ ಕಾಪಾಡಿ ಎಂದು ಹೇಳಿರುವುದು ಇದೇ ಮೊದಲು. ನಿನ್ನೆ ಚನ್ನಗಿರಿಯ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಅವರು ಗುತ್ತಿಗೆದಾರರಿಂದ 40 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವಿರೂಪಾಕ್ಷಪ್ಪ ಯಾವ ಪಕ್ಷದ ಶಾಸಕ? ಯಡಿಯೂರಪ್ಪ ಅವರ ಆಪ್ತ ಅಲ್ಲವಾ? 80 ಲಕ್ಷ ಲಂಚ ಮಾತಾಡಿ 40 ಲಕ್ಷ ಲಂಚ ಪಡೆಯುವಾಗ ಇವರ ಮಗ ಸಿಕ್ಕಿಬಿದ್ದಿದ್ದಾನೆ, ಇದು ದಾಖಲೆ ಅಲ್ಲವಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು.
ಪಿಎಸ್’ಐ ನೇಮಕಾತಿಯಲ್ಲಿ ಎಡಿಜಿಪಿ ಅಮೃತ್ ಪೌಲ್ ಜೈಲಿಗೆ ಹೋಗಿದ್ದಾರೆ, 70 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದು ಸಾಕ್ಷಿ ಅಲ್ಲವಾ ಬೊಮ್ಮಾಯಿ? ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಸಮಾಜಕ್ಕೆ ಗೊತ್ತಾಗಲ್ಲ ಎಂದು ಬಿಜೆಪಿಯವರು ಅಂದುಕೊಂಡಿದ್ದಾರೆ ಎಂದು ಹರಿಹಾಯ್ದರು.
ಧಾರವಾಡಕ್ಕೆ ನೀಡಿರುವ ಕೊಡುಗೆ ಬಗ್ಗೆ ಮೋದಿ ಅವರನ್ನು ಪ್ರಶ್ನಿಸಿ
11ನೇ ತಾರೀಕು ಮೋದಿ ಅವರು ಇಲ್ಲಿಗೆ ಬರುತ್ತಾರಂತೆ ಆಗ ನೀವು “ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪತ್ರ ಬರೆದು ಒಂದುವರೆ ವರ್ಷ ಆಗಿದೆ, ಯಾಕೆ ಏನು ಕ್ರಮ ಕೈಗೊಂಡಿಲ್ಲ?” ಎಂದು ಕೇಳಬೇಕು. ಧಾರವಾಡಕ್ಕೆ ಇಂಡಿಯನ್ ಇನ್ಸ್’ಟಿಟ್ಯೂಟ್ ಆಫ್ ಮ್ಯಾನೆಂಜ್ ಮೆಂಟ್ ಗೆ ಮಂಜೂರಾತಿ ನೀಡಿದ್ದು, ಜಾಗ ನೀಡಿದ್ದು ನಾವು. ಈಗ ನರೇಂದ್ರ ಮೋದಿ ಅವರು ಅದರ ಉದ್ಘಾಟನೆಗೆ ಬರುತ್ತಿದ್ದಾರೆ. ಧಾರವಾಡಕ್ಕೆ ನಿಮ್ಮ ಕೊಡುಗೆ ಏನು ಎಂದು ಮೋದಿಯವರನ್ನು ನೀವು ಪ್ರಶ್ನೆ ಮಾಡಿ ಎಂದರು.
ನೀರು ಕೊಡಲಾಗದವರು ರಾಜ್ಯ ಉದ್ದಾರ ಮಾಡುತ್ತಾರಾ?
ಈ ಬಿಜೆಪಿ ಸರ್ಕಾರ ಬಂದಮೇಲೆ ಧಾರವಾಡಕ್ಕೆ ಹದಿನೈದು ದಿನಕ್ಕೊಮ್ಮೆ ನೀರು ಕೊಡುತ್ತಿದ್ದಾರೆ. ನೀರು ಕೊಡಲಾಗದವರು ರಾಜ್ಯ ಉದ್ಧಾರ ಮಾಡುತ್ತಾರ? ಅರವಿಂದ ಬೆಲ್ಲದ್ ಅವರು ಧಾರವಾಡಕ್ಕೆ ನೀಡಿರುವ ಕೊಡುಗೆ ಏನು? ನಮ್ಮ ಸರ್ಕಾರ ಮಂಜೂರು ಮಾಡಿದ್ದ ಆಶ್ರಯ ಮನೆಗಳನ್ನು ವಜಾ ಮಾಡಿ, ಹೊಸದಾಗಿ ಮನೆಗಳನ್ನು ತಮ್ಮ ಕಾರ್ಯಕರ್ತರಿಗೆ ಮಾತ್ರ ಹಂಚುತ್ತಿದ್ದಾರೆ ಎಂದು ಆರೋಪಿಸಿದರು.
ಲಂಚ ಹೊಡೆಯುವುದರಲ್ಲಿ ಬಿಜೆಪಿ ಸರ್ಕಾರ ವೇಗವಾಗಿ ಹೋಗುತ್ತಿದೆ
ಹೀಗಾಗಿಯೇ ಮಾಡಾಳ್ ವಿರೂಪಾಕ್ಷಪ್ಪನ ಮಗ ಪ್ರಶಾಂತ್ ಮಾಡಾಳ್ ಲಂಚ ತೆಗೆದುಕೊಂಡು ಸಿಕ್ಕಿಬಿದ್ದಿದ್ದಾನೆ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಅಭಿವೃದ್ಧಿ ವೇಗವಾಗಿ ಓಡುತ್ತೆ ಎಂದು ಹೇಳಿ ಅಧಿಕಾರಕ್ಕೆ ಬಂದು ಲಂಚ ಹೊಡೆಯುವುದರಲ್ಲಿ ವೇಗವಾಗಿ ಹೋಗುತ್ತಿದ್ದಾರೆ. ಇದು ಅಭಿವೃದ್ಧಿಗಾಗಿ ಓಡುತ್ತಿರುವ ಇಂಜಿನ್ ಅಲ್ಲ ಎಂದು ಹರಿಹಾಯ್ದರು.
ಕಾಂಗ್ರೆಸ್ ಪಕ್ಷ ಮಾತ್ರ ಎಲ್ಲ ಧರ್ಮದ, ಎಲ್ಲ ಜಾತಿಯ ಜನರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ, ಗೆಲ್ಲಿಸಿ, ನಾವು ನಿಮ್ಮ ಕಷ್ಟ ಸುಖಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತೇವೆ, ರಾಜ್ಯದ ಅಭಿವೃದ್ಧಿಯ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತದೆ ಎಂದು ಜನರಲ್ಲಿ ಸಿದ್ದರಾಮಯ್ಯ ಮನವಿ ಮಾಡಿದರು.