• Home
  • About Us
  • ಕರ್ನಾಟಕ
Saturday, July 5, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬಿಜೆಪಿ ಪಾಲಿಗೆ ದಶಕದ ಹಿಂದಿನ ಇತಿಹಾಸ ಮರುಕಳಿಸುವುದೇ ಮತ್ತೆ?

Shivakumar by Shivakumar
August 5, 2021
in ಕರ್ನಾಟಕ, ದೇಶ
0
ಬಿಜೆಪಿ ಪಾಲಿಗೆ ದಶಕದ ಹಿಂದಿನ ಇತಿಹಾಸ ಮರುಕಳಿಸುವುದೇ ಮತ್ತೆ?
Share on WhatsAppShare on FacebookShare on Telegram

ರಾಜ್ಯದಲ್ಲಿ ಬಿಜೆಪಿಯ ಎರಡನೇ ಅವಧಿಯ ಎರಡನೇ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣದ ಮೂಲಕ ಕೆಡವಿ ರಾಜ್ಯದಲ್ಲಿ ಎರಡನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿದಿತ್ತು. ಇದೀಗ ಕೇವಲ ಎರಡು ವರ್ಷದಲ್ಲೇ ಮೊದಲ ಮುಖ್ಯಮಂತ್ರಿ ಬದಲಾಗಿ, ಎರಡನೇ ಮುಖ್ಯಮಂತ್ರಿಯ ಸರ್ಕಾರದ ಆಡಳಿತ ಆರಂಭವಾಗಿದೆ.

ADVERTISEMENT

ಹತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಬಹುತೇಕ ಪೂರ್ಣ ಬಲದ ಮೇಲೆ ಸರ್ಕಾರ ರಚಿಸಿದ್ದ ಬಿಜೆಪಿ ನಾಲ್ಕು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸುವ ಮೂಲಕ ಶಿಸ್ತಿನ ಪಕ್ಷ ಎಂಬ ತನ್ನ ಹೆಗ್ಗಳಿಕೆಯನ್ನು ಕಳಚಿಕೊಂಡಿತ್ತು. ಇದೀಗ ಮತ್ತೆ ಹಿಂದಿನಂತೆಯೇ ಆಪರೇಷನ್ ಕಮಲದ ಮೂಲಕ ಇತರೆ ಪಕ್ಷಗಳ ಶಾಸಕರನ್ನು ಸೆಳೆದು ಸರ್ಕಾರ ರಚಿಸಿದರೂ, ಈಗಲೂ ಪೂರ್ಣಾವಧಿ ಮುಖ್ಯಮಂತ್ರಿ ಕೊಡಲು ಆ ಪಕ್ಷಕ್ಕೆ ಸಾಧ್ಯವಾಗಲೇ ಇಲ್ಲ. ಇನ್ನುಳಿದ ಒಂದೂಮುಕ್ಕಾಲು ವರ್ಷದ ಹಾಲಿ ವಿಧಾನಸಭಾ ಅವಧಿಯನ್ನು ಕೂಡ ಈ ಎರಡನೇ ಮುಖ್ಯಮಂತ್ರಿಯೇ ಪೂರೈಸುತ್ತಾರೆ ಎಂಬುದನ್ನು ಕೂಡ ಖಚಿತವಾಗಿ ಹೇಳಲಾಗದ ಸ್ಥಿತಿ ಇದೆ.

ಅದಕ್ಕೆ ಕಾರಣ; ಈ ಎರಡನೇ ಮುಖ್ಯಮಂತ್ರಿಯ ಆಯ್ಕೆ ಮತ್ತು ಅವರ ಸಚಿವ ಸಂಪುಟ ರಚನೆಯ ವಿಷಯದಲ್ಲಿ ಬಿಜೆಪಿಯ ವರಿಷ್ಠರು ಅನುಸರಿಸಿದ; ಒಂದು ರೀತಿಯಲ್ಲಿ ಮೇಲ್ನೋಟಕ್ಕೆ ದಿಟ್ಟ ಎನ್ನಬಹುದಾದ, ಆದರೆ ಹಲವು ಅಪಾಯಗಳನ್ನು ಮೈಮೇಲೆ ಎಳೆದುಕೊಂಡಂತಹ ನಡೆ.

ಈವರೆಗೆ ರಾಜ್ಯದ ಪ್ರಭಾವಿ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂದೇ ಗುರುತಿಸಿಕೊಂಡಿದ್ದ ಮತ್ತು ಆ ಕಾರಣದಿಂದಾಗಿಯೇ ಬಿಜೆಪಿಯನ್ನು ಪೂರ್ಣ ನಿಚ್ಛಳ ಬಹುಮತವಲ್ಲದೇ ಇದ್ದರೂ ಸರಳ ಬಹುಮತದ ಸಮೀಪಕ್ಕೆ ತಂದು ನಿಲ್ಲಿಸಿದ್ದ ಬಿ ಎಸ್ ಯಡಿಯೂರಪ್ಪ ಎಂಬ ಹಿರಿಯ ನಾಯಕನನ್ನು ಯಾವ ಮುಲಾಜಿಲ್ಲದೆ ಬದಿಗೆ ಸರಿಸಲಾಗಿದೆ.

ವಿಪರ್ಯಾಸವೆಂದರೆ; ಒಬ್ಬ ಮುಖ್ಯಮಂತ್ರಿಯನ್ನು ಬದಲಾಯಿಸುವಾಗ, ಯಾವ ಕಾರಣಕ್ಕಾಗಿ ಬದಲಾಯಿಸಲಾಗುತ್ತಿದೆ ಎಂಬ ಬಗ್ಗೆ ರಾಜ್ಯ ಬಿಜೆಪಿಯಾಗಲೀ, ಅಥವಾ ಬಿಜೆಪಿಯ ದೆಹಲಿ ವರಿಷ್ಠರಾಗಲೀ ಈವರೆಗೆ ರಾಜ್ಯದ ಜನತೆಗಾಗಲೀ, ತಮ್ಮ ಪಕ್ಷಕ್ಕೆ ಮತ ನೀಡಿದ ಮತದಾರರಿಗಾಗಲೀ ತಿಳಿಸಿಲ್ಲ. ಯಡಿಯೂರಪ್ಪ ವಿರುದ್ಧ ಸ್ವಪಕ್ಷೀಯರಿಂದಲೇ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಂತಹ ಗಂಭೀರ ಆರೋಪಗಳು ಕೇಳಿಬಂದಿದ್ದವು. ಅದೇ ಆರೋಪಗಳನ್ನೇ ಮುಂದಿಟ್ಟುಕೊಂಡು ಬಿಜೆಪಿಯ ಒಂದು ಬಣ ಮಾಜಿ ಸಿಎಂ ವಿರುದ್ಧ ದೊಡ್ಡ ಮೊಟ್ಟದ ಬಂಡಾಯ ಸಾರಿದ್ದರು. ಆದರೆ, ಅಂತಿಮವಾಗಿ ಅದೇ ಕಾರಣಕ್ಕಾಗಿಯೇ ಬಿಎಸ್ ವೈ ರಾಜೀನಾಮೆ ಪಡೆಯಲಾಯಿತೆ? ಅಥವಾ ಬೇರೆ ಕಾರಣಗಳಿದ್ದವೆ ಎಂಬುದನ್ನು ಬಿಜೆಪಿ ವರಿಷ್ಠರು ಹೇಳಿಲ್ಲ. ಬದಲಾಗಿ ಯಡಿಯೂರಪ್ಪ ತಾವೇ ವಯಸ್ಸಿನ ಹಿನ್ನೆಲೆಯಲ್ಲಿ ರಾಜೀನಾಮೆ ಕೊಡುತ್ತಿರುವುದಾಗಿ ಅರೆಮನಸ್ಸಿನಿಂದ ಹೇಳಿದ್ದರು.

ಆದರೆ, ಯಡಿಯೂರಪ್ಪ ಸಾರ್ವಜನಿಕವಾಗಿ ಏನೇ ಹೇಳಿದ್ದರೂ, ಅವರ ರಾಜೀನಾಮೆಯ ಹಿಂದಿನ ಅಸಲೀ ಕಾರಣಗಳು ಸಾರ್ವಜನಿಕವಾಗಿ ಜನಜನಿತ ಚರ್ಚೆಯ ವಸ್ತುವೇ ಆಗಿದ್ದವು ಎಂಬುದನ್ನು ಯಾರೂ ತಳ್ಳಿ ಹಾಕಲಾಗದು. ಆದರೆ, ಈ ವಿಷಯದಲ್ಲಿ ಕನಿಷ್ಟ ಆರು ತಿಂಗಳಿಂದ ಭುಗಿಲೆದ್ದಿದ್ದ ಪ್ರಬಲ ಭಿನ್ನಮತ, ಬಹಿರಂಗ ಬಂಡಾಯವನ್ನು ಸಹಿಸಿಕೊಂಡಿದ್ದ ಹೈಕಮಾಂಡ್, ಕೊನೆಗೂ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿಷಯದಲ್ಲಿ ತೆಗೆದುಕೊಂಡ ನಿರ್ಧಾರ, ಹೊಸ ಸರ್ಕಾರದ ಭವಿಷ್ಯವನ್ನು ತೂಗುಯ್ಯಾಲೆಯಲ್ಲಿಟ್ಟಿದೆ ಎಂಬುದನ್ನು ತಳ್ಳಿಹಾಕಲಾಗದು.

ಯಡಿಯೂರಪ್ಪ ಬಳಿಕ ಅದೇ ಸಮುದಾಯದವರಾದರೂ ಸಮುದಾಯದ ಒಳಗೆ ಹೆಚ್ಚೇನು ಪ್ರಭಾವಿಯಲ್ಲದ ಮತ್ತು ಸ್ವತಃ ಬಿಜೆಪಿಯ ರಾಜ್ಯ ಘಟಕದಲ್ಲಿ ಕೂಡ ಹೆಚ್ಚಿನ ಹಿಡಿತವಿಲ್ಲದ ನಾಯಕ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಿದ ಮತ್ತು ಅವರ ಸಂಪುಟ ರಚನೆಯ ವಿಷಯದಲ್ಲಿ ಮಾಡಿಕೊಂಡ ಆಯ್ಕೆಗಳು ಕೂಡ ಸರ್ಕಾರದ ಭವಿಷ್ಯದ ದೃಷ್ಟಿಯಿಂದ ಅಂತಹದ್ದೇ ಅನಿಶ್ಚಿತತೆಯನ್ನು ತಂದೊಡ್ಡಿವೆ ಎಂಬುದು ಕೂಡ ಅಷ್ಟೇ ನಿಜ.

ಏಕೆಂದರೆ; ಒಂದು ಕಡೆ ಲಿಂಗಾಯತ ಸಮುದಾಯದ ಸ್ವಾಮೀಜಿಗಳು ಭರ್ಜರಿ ಸಮಾವೇಶ, ಸರಣಿ ಪತ್ರಿಕಾ ಗೋಷ್ಠಿ, ಹೇಳಿಕೆ, ಪತ್ರ, ಆಗ್ರಹಗಳ ಮೂಲಕ ಯಡಿಯೂರಪ್ಪ ಪರವಾಗಿ ಎಷ್ಟೇ ಲಾಬಿ ನಡೆಸಿದರೂ ಬಿಜೆಪಿ ಹೈಕಮಾಂಡ್ ಅವರಾರಿಗೂ ಸೊಪ್ಪು ಹಾಕಿಲ್ಲ ಎಂಬುದು ಕೇವಲ ಸಿಎಂ ಬದಲಾವಣೆಯ ವಿಷಯದಲ್ಲಿ ಮಾತ್ರವಲ್ಲ; ಬಳಿಕ ಹೊಸ ಸಂಪುಟದಲ್ಲಿ ಅವರ ಪುತ್ರ ವಿಜಯೇಂದ್ರಗೆ ಯಾವುದೇ ಅವಕಾಶವನ್ನು ನೀಡದೇ ಇರುವ ಮೂಲಕವೂ ಸಾಬೀತು ಮಾಡಲಾಗಿದೆ. ಈ ನಡುವೆ ಹಾನಗಲ್ ಉಪ ಚುನಾವಣೆಯಲ್ಲಿ ನಿಂತು ಗೆದ್ದು ಬರುವ ಮೂಲಕ ಸರ್ಕಾರದಲ್ಲಿ ಸಕ್ರಿಯವಾಗುವ ಯೋಜನೆಯಲ್ಲಿದ್ದ ವಿಜಯೇಂದ್ರ ಅವರ ಲೆಕ್ಕಾಚಾರಗಳಿಗೂ ಹೈಕಮಾಂಡ್ ತಣ್ಣೀರೆರಚಿದೆ ಎಂಬುದು ಮಾಜಿ ಸಿಎಂ ಪುತ್ರರ ಮಾತುಗಳಲ್ಲೇ ವ್ಯಕ್ತವಾಗುತ್ತಿದೆ.

ಈ ನಡುವೆ, ಬೊಮ್ಮಾಯಿ ಅವರ ಸಂಪುಟದಲ್ಲಿ ಕೂಡ ಯಡಿಯೂರಪ್ಪ ಅವರ ಪರಮಾಪ್ತರಿಗೆ ಅವಕಾಶ ನಿರಾಕರಿಸಲಾಗಿದೆ. ಸ್ವತಃ ಸಿಎಂ ಬೊಮ್ಮಾಯಿ ಅವರೇ ಯಡಿಯೂರಪ್ಪ ಆಪ್ತರು ಎಂದರೂ, ಅವರ ಆಯ್ಕೆಯಲ್ಲಿ ಬಿಎಸ್ ವೈ ಮಾತಿಗಿಂತ ಲಿಂಗಾಯತ ಸಮುದಾಯ ಮತ್ತು ಪ್ರಾದೇಶಿಕ ಲೆಕ್ಕಾಚಾರಗಳೇ ಕೆಲಸ ಮಾಡಿರುವಂತಿದೆ.

ಹೀಗೆ ಪ್ರತಿ ಹಂತದಲ್ಲೂ ಪಕ್ಷದ ಹೈಕಮಾಂಡ್ ತಮ್ಮ ವಿಷಯದಲ್ಲಿ ಇಷ್ಟು ನಿರ್ದಯವಾಗಿರುವಾಗ, ಯಡಿಯೂರಪ್ಪ ಮತ್ತು ಅವರ ಆಪ್ತರು ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೇ ಇರುತ್ತಾರೆಯೇ? ಈಗಾಗಲೇ ವರಿಷ್ಠರಿಗೆ ಹೇಳಿರುವಂತೆ ಹಿಂದಿನ ತಮ್ಮ ಪ್ರಯೋಗದಂತೆ ಮತ್ತೆ ಬಿಜೆಪಿಯಿಂದ ಹೊರನಡೆದು ಹೊಸ ಪಕ್ಷ ಕಟ್ಟುವಂತಹ ಯೋಜನೆಯನ್ನು ಜಾರಿಗೆ ತರುವುದಿಲ್ಲವೆ? ಕನಿಷ್ಟ ತಕ್ಷಣಕ್ಕೆ ಅಂತಹ ಅಂತಿಮ ನಿರ್ಧಾರ ಕೈಗೊಳ್ಳದೇ ಹೋದರೂ ಸರ್ಕಾರದ ಮೇಲಿನ ಹಿಡಿತ ಸಾಧಿಸಲು ಪಕ್ಷ ತೊರೆಯುವ ಪ್ರಯತ್ನವನ್ನೇ ಅಸ್ತ್ರವಾಗಿ ಬಳಸುವುದಂತೂ ನಿಜ.

ಹಾಗೊಂದು ವೇಳೆ ಯಡಿಯೂರಪ್ಪ ತಮ್ಮ ವಿಷಯದಲ್ಲಿ ಪಕ್ಷದ ವರಿಷ್ಠರು ತೋರುತ್ತಿರುವ ವರಸೆಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು ಪಕ್ಷದಲ್ಲಿ ತಮ್ಮ ಪುತ್ರರಿಗೆ ತತಕ್ಷಣಕ್ಕೆ ಪ್ರಾಧಾನ್ಯತೆ ಸಿಗುತ್ತಿಲ್ಲ ಎಂಬುದನ್ನೇ ಮುಖ್ಯವಾಗಿ ಇಟ್ಟುಕೊಂಡು ತಮ್ಮದೇ ಬಣ ಕಟ್ಟಿಕೊಂಡು 2012ರ ಇತಿಹಾಸ ಮರುಕಳಿಸುವಂತೆ ಮಾಡಿದರೆ, ಸರ್ಕಾರದ ಭವಿಷ್ಯಕ್ಕೆ ಕುತ್ತು ಬರದೇ ಎಂಬುದು ಪ್ರಶ್ನೆ. 2012ರಲ್ಲಿ ಕೂಡ, ಪಕ್ಷ ತಮ್ಮನ್ನು ಸಿಎಂ ಕುರ್ಚಿಯಿಂದ ಇಳಿಸುವಾಗ, ತಮ್ಮ ಆಪ್ತರೇ ಆಗಿದ್ದ ಡಿ ವಿ ಸದಾನಂದ ಗೌಡರನ್ನು ಸಿಎಂ ಕುರ್ಚಿಗೆ ತರುವ ಷರತ್ತಿನ ಮೇಲೆ ರಾಜೀನಾಮೆ ನೀಡಿದ್ದರು. ಬಳಿಕ ಒಂದು ಕಡೆ ಗೌಡರ ಆಡಳಿತದ ಮೇಲೆ ಹಿಡಿತ ಸ್ಥಾಪಿಸುವ ಯತ್ನ ನಡೆಯುತ್ತಿರುವಾಗಲೇ, ಭ್ರಷ್ಟಾಚಾರ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲಿಗೆ ಹೋಗಿದ್ದ ಬಿಎಸ್ ವೈ ರಿಂದ ಅಂತರ ಕಾಯ್ದುಕೊಳ್ಳುವ ಯತ್ನಗಳು ಪಕ್ಷದ ಕಡೆಯಿಂದ ನಡೆದಿದ್ದವು. ಈ ಇರಿಸುಮುರಿಸಿನ ಹಿನ್ನೆಲೆಯಲ್ಲೇ ಪಕ್ಷದಿಂದ ಸಿಡಿದು ಕೆಜೆಪಿ ಎಂಬ ಸ್ವಂತ ಪಕ್ಷ ಕಟ್ಟಿ 2013ರ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾಗಿದ್ದರು.

ಒಂದು ಕಡೆ ಪಕ್ಷವನ್ನು ನಾಲ್ಕು ದಶಕಗಳಿಂದ ಕಟ್ಟಿ ಬೆಳೆಸಿದ ‘ರಾಜಾಹುಲಿ’ಯ ವಿಷಯದಲ್ಲಿ ಪಕ್ಷದ ಹೈಕಮಾಂಡ್ ನಡೆ ಬೊಮ್ಮಾಯಿ ಸರ್ಕಾರದ ಭವಿಷ್ಯದ ಮೇಲೆ ತೂಗುಗತ್ತಿ ತೂಗುವಂತೆ ಮಾಡಿದ್ದರೆ, ಮತ್ತೊಂದು ಕಡೆ, ವಾಸ್ತವವಾಗಿ 17 ಮಂದಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಗುಂಪು ಕಟ್ಟಿ, ಅವರನ್ನು ಬಿಜೆಪಿ ನಾಯಕರೊಂದಿಗೆ ಸಂಪರ್ಕಗೊಳಿಸಿ, ಮುಂಬೈಗೆ ಕರೆದೊಯ್ದು, ಅಲ್ಲಿ ರಹಸ್ಯ ಸ್ಥಳದಲ್ಲಿ ಅವರನ್ನು ಬಚ್ಚಿಟ್ಟು ಅಂತಿಮವಾಗಿ ಸಮ್ಮಿಶ್ರ ಸರ್ಕಾರ ಉರುಳಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ‘ಸಾಹುಕಾರ’ ರಮೇಶ್ ಜಾರಕಿಹೊಳಿ ವಿಷಯದಲ್ಲಿ ಕೂಡ ಹೈಕಮಾಂಡ್ ಕಠಿಣ ನಿಲುವು ತಳೆದಿದೆ. ಈ ಬಾರಿಯ ಸಂಪುಟದಲ್ಲಿ ಸಿಡಿ ಹಗರಣದಲ್ಲಿ ಸಿಲುಕಿ ಸೊರಗಿರುವ ‘ಸಾಹುಕಾರ’ನಿಗೆ ಅವಕಾಶ ಸಿಗದೇ ಹೋದರೂ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಪ್ರಮುಖ ಖಾತೆಯೊಂದಿಗೆ ಸಚಿವ ಸ್ಥಾನ ಪಕ್ಕಾ ಎಂದೇ ಹೇಳಲಾಗಿತ್ತು. ಆದರೆ, ವರಿಷ್ಠರು ಆ ಲೆಕ್ಕಾಚಾರವನ್ನು ಕೂಡ ಮುಲಾಜಿಲ್ಲದೆ ಬುಡಮೇಲು ಮಾಡಿದ್ದಾರೆ. ಆದರೆ, ಅದೇ ಹೊತ್ತಿಗೆ ಜಾರಕಿಹೊಳಿ ಹೊರತುಪಡಿಸಿ ಉಳಿದ ಬಹುತೇಕ ಬಾಂಬೆ ಬಾಯ್ಸ್ ಗೆ ಸಂಪುಟದಲ್ಲಿ ಸ್ಥಾನ ಕೊಡಲಾಗಿದೆ. ಅಂದರೆ; ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಗಿರುವ ವಲಸಿಗರನ್ನು ಜಾರಕಿಹೊಳಿ ಹಿಡಿತದಿಂದ ಪ್ರತ್ಯೇಕಿಸಿ ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ಲೆಕ್ಕಾಚಾರ ವರಿಷ್ಠರದು!

ಆದರೆ, ಇಷ್ಟಾಗಿಯೂ ವಲಸಿಗ ಶಾಸಕರೊಂದಿಗೆ ಸಂಪರ್ಕದಲ್ಲಿರುವ ಮತ್ತು ಸಾಕಷ್ಟು ಹಿಡಿತವನ್ನೂ ಹೊಂದಿರುವ ಜಾರಕಿಹೊಳಿ, ಬಿಜೆಪಿ ವರಿಷ್ಠರ ಈ ಮರ್ಮಾಘಾತದ ಹೊಡೆತವನ್ನು ಸಹಿಸಿಕೊಂಡು ಸುಮ್ಮನಿರುತ್ತಾರೆಯೇ? ಎಂಬುದು ಕೂಡ ಬೊಮ್ಮಾಯಿ ಸರ್ಕಾರದ ಭವಿಷ್ಯದ ದೃಷ್ಟಿಯಿಂದ ಮಹತ್ವದ ಪ್ರಶ್ನೆ.

ಒಟ್ಟಾರೆ ಒಂದು ಕಡೆ ‘ರಾಜಾಹುಲಿ’, ಮತ್ತೊಂದು ಕಡೆ ‘ಸಾಹುಕಾರ’. ಈ ನಡುವೆ, ಬೆಲ್ಲದ್, ಯತ್ನಾಳ್, ಯೋಗೇಶ್ವರ್ ಅವರನ್ನೊಳಗೊಂಡ ಪಕ್ಷನಿಷ್ಠೆಯ ಹೆಸರಿನಲ್ಲಿ ಅಧಿಕಾರದ ಮೇಲೆ ಕಣ್ಣಿಟ್ಟಿರುವ ತೃತೀಯ ಶಕ್ತಿ ಕೂಡ ತಿದಿಯೊತ್ತುತ್ತಿದೆ. ಈ ಮೂರೂ ಅತೃಪ್ತ ಮತ್ತು ಒಂದರ್ಥದಲ್ಲಿ ಅವಮಾನಿತ ಶಕ್ತಿಗಳ ನಡುವೆ ಯಾವ ಕ್ಷಣದಲ್ಲಿ ಮೈತ್ರಿಯಾಗುವುದೋ ಎಂಬುದರ ಮೇಲೆ ಬೊಮ್ಮಾಯಿ ಅವರ ಆಡಳಿತದ ಭವಿಷ್ಯ ನಿಂತಿದೆ. ಹಾಗೊಂದು ವೇಳೆ ಅವರು ಒಂದಾಗದೇ, ಸಿಡಿದು ಹೋಗುವಷ್ಟು ಪ್ರಬಲವಾಗದೆ ಕಾಲಕ್ರಮೇಣ ತಣ್ಣಗಾಗುವುದು ಸಾಧ್ಯವಾದರೆ, ಬಹುಶಃ ರಾಜ್ಯ ಬಿಜೆಪಿ ಪಾಲಿಗೆ 2012ರ ದಿನಗಳು ಮತ್ತೆ ಮರುಕಳಿಸಲಾರವು. ಆದರೆ, ಅಂತಹ ಅದೃಷ್ಟ ಬೊಮ್ಮಾಯಿ ಅವರಿಗೆ ಇದೆಯೇ ಎಂಬುದು ಕೆಲಮಟ್ಟಿಗೆ ಸ್ವತಃ ಅವರ ಆಡಳಿತ ಶೈಲಿಯ ಮೇಲೆ ನಿಂತಿದೆ ಎಂಬುದು ಕೂಡ ನಿಜವೇ.

Tags: Covid 19ಬಸವರಾಜ ಬೊಮ್ಮಾಯಿಬಾಲಚಂದ್ರ ಜಾರಕಿಹೊಳಿಬಿ ಎಸ್ ಯಡಿಯೂರಪ್ಪಬಿ ವೈ ವಿಜಯೇಂದ್ರಬಿಜೆಪಿರಮೇಶ್ ಜಾರಕಿಹೊಳಿ
Previous Post

ಕೋವಿಡ್-19, ನೆರೆ ಪ್ರವಾಹಗಳನ್ನು ನಿರ್ವಹಿಸಲು ಜಿಲ್ಲಾವಾರು ಮಂತ್ರಿಯನ್ನು ನೇಮಿಸಿದ ಸಿಎಂ ಬೊಮ್ಮಾಯಿ

Next Post

ಅಣ್ಣ ಮಲೈ ಹಾದಿಯಲ್ಲೇ ಮತ್ತೊರ್ವ ಐಪಿಎಸ್‌ ಅಧಿಕಾರಿ: ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾದ ರವಿ ಡಿ ಚನ್ನಣ್ಣನವರ್

Related Posts

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
0

ನಟಿ ಭಾವನಾ ಈಗ ತಾಯಿ! ಮದ್ವೆ ಆಗದೆ ಅವಳಿ ಮಕ್ಕಳಿಗೆ ಅಮ್ಮ.. ನಟಿ ಭಾವನಾ ಅಮ್ಮ ಅಗ್ತಾ ಇದ್ದಾರೆ! ಅರೇ ಇದು ಜಾಕಿ ಭಾವನಾ ಅವರ ಸುದ್ದಿನಾ...

Read moreDetails

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

July 4, 2025

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

July 4, 2025
Next Post
ಅಣ್ಣ ಮಲೈ ಹಾದಿಯಲ್ಲೇ ಮತ್ತೊರ್ವ ಐಪಿಎಸ್‌ ಅಧಿಕಾರಿ: ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾದ ರವಿ ಡಿ ಚನ್ನಣ್ಣನವರ್

ಅಣ್ಣ ಮಲೈ ಹಾದಿಯಲ್ಲೇ ಮತ್ತೊರ್ವ ಐಪಿಎಸ್‌ ಅಧಿಕಾರಿ: ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾದ ರವಿ ಡಿ ಚನ್ನಣ್ಣನವರ್

Please login to join discussion

Recent News

Top Story

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

by ಪ್ರತಿಧ್ವನಿ
July 4, 2025
Top Story

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಬಾಲಕಿಯರ ಬಾಲಮಂದಿರಕ್ಕೆ ದಿಢೀರ್ ಭೇಟಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
Top Story

CM Siddaramaiah: ಕಾನೂನು ತೊಡಕು ನಿವಾರಿಸಿ ರೈತರ ಸಭೆ-ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
July 4, 2025
Top Story

Lakshmi Hebbalkar: ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
July 4, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Bhavana Ramanna: ಮದುವೆಯಾಗದೆ 6 ತಿಂಗಳ ಗರ್ಭಿಣಿ, ಶಾಕ್‌ ಕೊಟ್ಟ ನಟಿ ಭಾವನಾ..!!

July 4, 2025

KJ George: ಕುಸುಮ್-ಸಿ ಯೋಜನೆಯಡಿ ಶೀಘ್ರ 745 ಮೆ.ವ್ಯಾ. ವಿದ್ಯುತ್ ಉತ್ಪಾದನೆ: ಸಚಿವ ಕೆ.ಜೆ.ಜಾರ್ಜ್‌

July 4, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada