ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದಿಗೆ 100 ದಿನಗಳನ್ನು ಪೂರೈಸಿದೆ. ಈ ಹಿನ್ನೆಲೆ ಮಂಗಳವಾರ (ಆಗಸ್ಟ್ 29) ಸರ್ಕಾರದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡುವ ಮೂಲಕ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ 100 ದಿನಗಳ ರಿಪೋರ್ಟ್ ಕಾರ್ಡ್ನೆಲ್ಲಿ ಅಭಿವೃದ್ಧಿ ಬದಲು ಬರೀ ಭ್ರಷ್ಟಾಚಾರದ ವಾಸನೆಯೇ ಹೆಚ್ಚಾಗಿದೆ ಎಂದು ಕುಟುಕಿದೆ. ‘ವರ್ಗಾವಣೆ ದಂಧೆ, ಕಲುಷಿತ ನೀರು ಸೇವನೆಯಿಂದ ರಾಜ್ಯದಲ್ಲಿ ಅಪಾರ ಸಾವು-ನೋವು, ಪ್ರಧಾನಿ ಮೋದಿ ಸರ್ಕಾರ ಉಚಿತವಾಗಿ ನೀಡುತ್ತಿದ್ದ 5 ಕೆಜಿ ಅಕ್ಕಿಗೂ ಕನ್ನ, ಜನತೆಗೆ ನಂಬಿಕೆ ದ್ರೋಹ, ರಾಜ್ಯದ ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಚಾಲಕ, ನಿರ್ವಾಹಕರಿಗೆ ನಿರುದ್ಯೋಗ ಭಾಗ್ಯ’ ನೀಡಿದೆ ಎಂದು ಟೀಕಿಸಿದೆ.

ನೂರು ದಿನಗಳಲ್ಲಿ ನೂರಕ್ಕೂ ಹೆಚ್ಚು ರೈತರು ಆತ್ಮಹತ್ಯೆ, ರಾಜ್ಯದಲ್ಲಿ ಕಂಡು ಕೇಳರಿಯದಂತಹ ಭೀಕರ ಬರ, ಉಗ್ರರಿಗೆ, ಸಮಾಜಘಾತುಕ ಶಕ್ತಿಗಳಿಗೆ ರಾಜ್ಯ ಈಗ ಸುರಕ್ಷಿತ ಸ್ಥಳ, ಮರಳು ಮಾಫಿಯಾಕ್ಕೆ ಪೊಲೀಸರನ್ನು ಬಲಿಕೊಟ್ಟ ದುರ್ಬಲ ಆಡಳಿತ, ಗರ್ಭಿಣಿ, ಬಾಣಂತಿಯರಿಗೆ ಕಳಪೆ ಮೊಟ್ಟೆ ವಿತರಣೆ, ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಸಿ, ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಹೊರ ರಾಜ್ಯಗಳಿಗೆ ಶಿಫ್ಟ್ ಆಗುವ ಭಾಗ್ಯ’ ನೀಡಿದೆ ಎಂದು ಬಿಜೆಪಿ ಕಿಡಿಕಾರಿದೆ.
‘ಶಾಸಕರ ಮನೆಗೆ ಹಾಗೂ ಪೊಲೀಸ್ ಸ್ಟೇಶನ್‌ಗೆ ಬೆಂಕಿಯಿಟ್ಟ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಬ್ರದರ್ಸ್‌ಗೆ ಬಿಡುಗಡೆಯ ಭಾಗ್ಯ, ಸರ್ಕಾರಿ ಅಧಿಕಾರಿಗಳಿಗೆ ಹಣ ನೀಡುವಂತೆ ಕಿರುಕುಳ/ ಆತ್ಮಹತ್ಯೆ ಭಾಗ್ಯ, ಸಚಿವರ ಲಂಚಗುಳಿತನ ವಿರೋಧಿಸಿ, ಕಾಂಗ್ರೆಸ್ ಶಾಸಕರಿಂದಲೇ ದೂರು-ದುಮ್ಮಾನ, ಕರ್ನಾಟಕದ ಜನತೆಯ ಕಿವಿ ಮೇಲೆ ಹೂವು’ ಇವೇ ಕಾಂಗ್ರೆಸ್ ಸರ್ಕಾರದ ಸಾಧನೆಗಳು ಎಂದು ಬಿಜೆಪಿ ಟೀಕಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ನೂರು ದಿನಗಳ ವೈಫಲ್ಯಗಳ ಕುರಿತು ಬಿಜೆಪಿ ಹೊರ ತಂದಿರುವ ಕೈಕೊಟ್ಟ ಯೋಜನೆಗಳು ಹಳಿ ತಪ್ಪಿದ ಆಡಳಿತ ಪುಸ್ತಕವನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ಅವರೊಂದಿಗೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಗೋವಿಂದ ಕಾರಜೋಳ, ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ ಹಾಜರಿದ್ದರು