‘ಚಾಣಕ್ಯ ವಿಶ್ವವಿದ್ಯಾಲಯ ವಿಧೇಯಕದ ಮೂಲಕ ಕಾನೂನುಬಾಹಿರವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಜಮೀನು ನೀಡುವ ಮೂಲಕ ರಾಜ್ಯ ಬಿಜೆಪಿ ಸರಕಾರವು ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು.
ನಾನು ವಿದ್ಯಾಸಂಸ್ಥೆ ನಡೆಸುತ್ತಿದ್ದೇನೆ. ಯಾವುದೇ ಅಸ್ಥಿತ್ವದಲ್ಲಿರುವ ವಿದ್ಯಾಸಂಸ್ಥೆಯು ಖಾಸಗಿ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಲು ಅರ್ಜಿ ಹಾಕುವ ಅವಕಾಶವಿದೆ. ಖಾಸಗಿ ವಿವಿ ಹೇಗಿರಬೇಕು? ಯಾರಿಗೆ ಈ ಅವಕಾಶ ನೀಡಬೇಕು ಎನ್ನುವ ಕಾನೂನನ್ನು ವಿಧಾನಸಭೆಯಲ್ಲಿ ತಂದಿದ್ದೇವೆ. ಅದೇ ರೀತಿ, ಎಂ.ಎಸ್. ರಾಮಯ್ಯ, ಸಿಎಂಆರ್, ಕ್ರೈಸ್ಟ್, ಪಿಇಎಸ್ ಸೇರಿದಂತೆ ಅನೇಕ ವಿದ್ಯಾಸಂಸ್ಥೆಗಳು ಅಭಿವೃದ್ಧಿಗೊಂಡು, ಖಾಸಗಿ ವಿಶ್ವ ವಿದ್ಯಾಲಯಗಳಾಗಿ ಮಾನ್ಯತೆ ಪಡೆದಿವೆ.
ಯಾವುದೇ ವಿದ್ಯಾಸಂಸ್ಥೆ ಖಾಸಗಿ ವಿವಿಯಾಗಿ ಮಾನ್ಯತೆ ಪಡೆಯಬೇಕಾದರೆ, 25 ಎಕರೆ ಜಮೀನು, ನಿರ್ದಿಷ್ಠ ಹಣಕಾಸಿನ ನಿಧಿ ಸೇರಿದಂತೆ ಅನೇಕ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಜತೆಗೆ ಖಾಸಗಿ ವಿವಿ ಮಾನ್ಯತೆ ಪಡೆಯಲು ಅರ್ಜಿ ಹಾಕಬೇಕಾದರೆ ಅರ್ಜಿ ಹಾಕುವ ವೇಳೆಗೆ ಅವರು ಐದು ವರ್ಷಗಳ ಅನುಭವ ಹೊಂದಿರಬೇಕು. ಈ ಅವಧಿಯಲ್ಲಿ ಅವರ ಅಕೌಂಟ್ ಆಡಿಟ್ ಆಗಿರಬೇಕು. ಜತೆಗೆ ಈ ವಿದ್ಯಾ ಸಂಸ್ಥೆಗಳು ತಮ್ಮ ಮಾತೃ ವಿಶ್ವವಿದ್ಯಾಲಯಗಳಿಂದ ನಿರಾಕ್ಷೇಪಣ ಪತ್ರ ಪಡೆಯಬೇಕು – ಹೀಗೆ ಖಾಸಗಿ ವಿವಿ ಮಾನ್ಯತೆ ಪಡೆಯಲು ಅನೇಕ ಮಾನದಂಡಗಳನ್ನು ನಿಗದಿ ಮಾಡಲಾಗಿದೆ.
ಆದರೆ ಈಗ ಸೆಸ್ ಸಂಸ್ಥೆಯು ವಿದ್ಯಾಸಂಸ್ಥೆಯನ್ನೇ ಹೊಂದಿಲ್ಲ. ಅವರಿಗೆ ಈ ರೀತಿ ಜಮೀನು ಮಂಜೂರು ಮಾಡುತ್ತಿರುವುದು ಸರಿಯಲ್ಲ. ನಾಳೆ ಯಾರು ಬೇಕಾದರೂ ಒಂದು ಕಮಿಟಿ ಅಥವಾ ಟ್ರಸ್ಟ್ ಆರಂಭಿಸಿ ಈ ರೀತಿ ವಿವಿ ಹೆಸರಲ್ಲಿ ಸರ್ಕಾರದಿಂದ ಜಮೀನು ಪಡೆಯಲು ಸಾಧ್ಯವೇ?
ವಿದ್ಯಾ ಸಂಸ್ಥೆಗಳಿಗೆ ಸರ್ಕಾರದಿಂದ ಜಮೀನು ನೀಡುವುದು ಸಹಜ. ಈ ಹಿಂದೆ ಹಲವು ವಿದ್ಯಾಸಂಸ್ಥೆಗಳಿಗೆ ನಾವು ಕೂಡ ಈ ರೀತಿ ಜಮೀನು ನೀಡಿದ್ದೇವೆ. ಆದರೆ ಏರೋಸ್ಪೇಸ್ ಗಾಗಿ ಮೀಸಲಿಟ್ಟಿರುವ ವಿಮಾನ ನಿಲ್ದಾಣ ಪಕ್ಕದ ಕೋಟ್ಯಂತರ ರೂಪಾಯಿ ಮೌಲ್ಯದ ವಾಣಿಜ್ಯ ಭೂಮಿಯನ್ನು ಅರ್ಹತೆ ಇಲ್ಲದ ಸಂಸ್ಥೆಗೆ ನೀಡುತ್ತಿರುವುದು ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಸಂಪುಟ ಸಭೆ ತೀರ್ಮಾನದ ಪ್ರಕಾರ ರಾಷ್ಟ್ರೀಯ ಹೆದ್ದಾರಿ 207ರಿಂದ ಈ ವಿದ್ಯಾಸಂಸ್ಥೆಗೆ ನೇರವಾಗಿ ಸಂಪರ್ಕ ಸಾಧಿಸಲು ರಸ್ತೆ ನಿರ್ಮಾಣಕ್ಕೂ ಅನುಮತಿ ನೀಡಲಾಗಿದೆ.
ಸರ್ಕಾರ ಈ ವಿದ್ಯಾಸಂಸ್ಥೆಗೆ ಬೇರೆ ಜಿಲ್ಲೆಗಳಲ್ಲಿ ಜಾಗ ನೀಡಬಹುದಲ್ಲವೇ? ಉದ್ಯೋಗ ಸೃಷ್ಟಿಯಾಗುವ ಕೈಗಾರಿಕೆಗಳಿಗೆ, ಐಟಿ, ಬಿಟಿ ಪಾರ್ಕ್ ಗಳಿಗೆ ಜಾಗ ನೀಡುವ ಬದಲು ಈ ಸಂಸ್ಥೆಗೆ ನೀಡುತ್ತಿರುವುದು ಸರಿಯಲ್ಲ. ಮಾಗಡಿಯಲ್ಲಿ ಸಂಸ್ಕೃತ ವಿವಿಗೆ ನೀಡಿರುವ ಜಾಗದ ಪಕ್ಕದಲ್ಲೇ ಬೇಕಾದರೆ ಇದಕ್ಕೂ ನೀಡಲಿ, ಯಾರೂ ಬೇಡ ಎನ್ನುವುದಿಲ್ಲ.
ಆರ್ ಎಸ್ಎಸ್ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲು ಸರ್ಕಾರ ಹಿಂಬಾಗಿಲಿನಿಂದ ಇಂತಹ ಪ್ರಯತ್ನ ಮಾಡುತ್ತಿದೆ. ಆರ್ ಎಸ್ಎಸ್ ನವರು ಈಗಾಗಲೇ ಅನೇಕ ವಿದ್ಯಾ ಸಂಸ್ಥೆಗಳನ್ನು ಹೊಂದಿರುವಂತೆ ಇದನ್ನು ತನ್ನದೇ ಹೆಸರು ಹಾಕಿಕೊಂಡು ನಡೆಸಬಹುದಲ್ಲವೇ? ಈ ರೀತಿ ಅಡ್ಡದಾರಿ ಹಿಡಿಯುವ ಪ್ರಯತ್ನ ಯಾಕೆ? ಸರ್ಕಾರ ಕೂಡಲೇ ತನ್ನ ತೀರ್ಮಾನವನ್ನು ಹಿಂಪಡೆಯಬೇಕು. ಬೇಕಾದರೆ ಬಿಜಾಪುರ, ಕಲ್ಬುರ್ಗಿ ಸೇರಿದಂತೆ ಉತ್ತರ ಕರ್ನಾಟಕದ ಬೇರೆ ಜಿಲ್ಲೆಗಳಲ್ಲಿ ಈ ಸಂಸ್ಥೆಗೆ ಜಮೀನು ನೀಡಲಿ.’ ಈ ವೇಳೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್ ಅವರು ಉಪಸ್ಥಿತರಿದ್ದರು.