ಬೆಳಗಾವಿಯ ಚಳಿಗಾಲದ ಅಧಿವೇಶನದ ಆರಂಭಕ್ಕೂ ಮೊದಲೇ ಮತಾಂತರ ನಿಷೇಧ ಕಾಯ್ದೆ ಮಂಡನೆಯ ಚರ್ಚೆ ಶುರುವಾಗಿತ್ತು.
ಬಿಜೆಪಿಯ ನಾಯಕರು ಈ ವಿಷಯವನ್ನು ಬೇಕೆಂತಲೇ ಪ್ರಸ್ತಾಪಿಸುತ್ತ ಜನರ ಗಮನವನ್ನು ಬೇರೆಡೆ ಸೆಳೆಯುವ ಯತ್ನ ನಡೆಸಿದ್ದಾರೆ. ಬೆಲೆ ಏರಿಕೆ, ಅತಿವೃಷ್ಟಿಯಿಂದ ಬೆಳೆ ನಾಶ , ಪ್ರವಾಹದಿಂದ ವಸತಿರಹಿತರಾದ ಜನರು-ಇಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸುವ ಛಾತಿ ಆಡಳಿತ ಪಕ್ಷಕ್ಕಿಲ್ಲ.
ವಿರೋಧ ಪಕ್ಷಗಳು ಮತಾಂತರ ನಿಷೇಧ ಕಾಯಿದೆಗೆ ತೀವ್ರ ವಿರೋಧ ವ್ಯಕ್ತ ಮಾಡುತ್ತಿವೆ.
ಸದ್ಯ ವಿಧಾನ ಪರಿಷತ್ ಚುನಾವಣಾ ಫಲಿತಾಂಶಗಳು ಬಿಜೆಪಿಗೆ ಪರಿಷತ್ನಲ್ಲಿ ಬಹುಮತ ತಂದು ಕೊಟ್ಟಿವೆ. ಈಗ ಅದಕ್ಕೆ 12 ಸ್ಥಾನಗಳು ಪಕ್ಕಾ ಆಗಿದ್ದು, 75 ಸದಸ್ಯರ ಪರಿಷತ್ನಲ್ಲಿ ಬಿಜೆಪಿ ಸದಸ್ಯರ ಸಂಖ್ಯೆ 38ಕ್ಕೆ ಏರಿದ್ದು ಸರಳ ಬಹುಮತ ಪ್ರಾಪ್ತವಾಗಿದೆ.
ಆದರೆ ಈ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ಮಸೂದೆಯನ್ನು ಬಹುಮತದಿಂದ ಅಂಗೀಕರಿಸಿಕೊಳ್ಳುವುದು ಅಸಾಧ್ಯ. ವಿಧಾನಸಭೆಯಲ್ಲಿ (ಕೆಳಮನೆಯಲ್ಲಿ) ಅಂಗೀಕಾರ ಮಾಡಿಕೊಳ್ಳಬಹುದು. ಆದರೆ, ಪರಿಷತ್ನಲ್ಲಿ (ಮೇಲ್ಮನೆ) ತಾಂತ್ರಿಕವಾಗಿ ಅದು ಅಸಾಧ್ಯ. ಏಕೆಂದರೆ ನಿವೃತ್ತರಾದ ಪರಿಷತ್ ಸದಸ್ಯರ ಅವಧಿ ಜನೆವರಿ 5ರವರೆಗೆ ಇದೆ. ಅಂದರೆ ಅಲ್ಲಿವರೆಗೆ ಬಿಜೆಪಿಯ ಪರಿಷತ್ ಸದಸ್ಯರ ಸಂಖ್ಯೆ 26 ಮಾತ್ರ.

ಹೇಗೂ ಪರಿಷತ್ನಲ್ಲೂ ಬಹುಮತ ಸಿಗಲಿರುವ ಕಾರಣಕ್ಕೆ ಮುಂದಿನ ಅಧಿವೇಶನದಲ್ಲಿ ಅಂಗೀಕಾರ ಮಾಡಲು ಬಿಜೆಪಿ ಯತ್ನಿಸಬಹುದು.
ಆದರೆ, ಈ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಮಂಡಿಸಿ ಕೋಲಾಹಲ ಸೃಷಿಸುವುದು ಅದರ ಉದ್ದೇಶ. ಈಗಾಗಲೇ ಸಿಎಂ ಬೊಮ್ಮಾಯಿ, ಸಚಿವ ಸುನಿಲ್ ಕುಮಾರ್, ನಟಿ ತಾರಾ ಮತ್ತು ಇತರರು ಇದರ ಸುಳಿವು ನೀಡಿದ್ದಾರೆ.
ಈಗಿನ ವಿಷಯ ಇಷ್ಟೇ: ಪರಿಷತ್ನಲ್ಲಿ ಬಿಜೆಪಿಗೆ ಬಹುಮತ ಪ್ರಾಪ್ತ ಆಗುವುದು ಜನೆವರಿ 5ರ ನಂತರ, ಅದೂ ಪ್ರಮಾಣ ವಚನ ನಡೆದ ನಂತರ!