ಎಪ್ರಿಲ್ 6, ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನ. ಆದರೆ ಈ ಬಾರಿಯ ಬಿಜೆಪಿ ಸಂಸ್ಥಾಪನಾ ದಿನ ಅತಿ ಮಹತ್ವ ಪಡೆದುಕೊಂಡಿರುವುದು ಕಾಂಗ್ರೆಸ್ ಪಕ್ಷದ ಪಾಲಿಗೆ. ಏಕೆಂದರೆ ಇಂದು ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ ಹಾಗೂ ಅಸ್ಸಾಂ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮತದಾನ. ಅದರಲ್ಲೂ ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಡೆದ ಒಂದೇ ಹಂತದ ಮತದಾನ.
ಬಿಜೆಪಿ ಸಂಸ್ಥಾಪನಾ ದಿನಕ್ಕೂ, ಕೇರಳ, ತಮಿಳುನಾಡು, ಪುದುಚೇರಿ ರಾಜ್ಯಗಳಲ್ಲಿ ನಡೆದ ಮತದಾನಕ್ಕೂ ಕಾಂಗ್ರೆಸ್ ನಿರ್ಣಾಯಕ ಸ್ಥಿತಿ ತಲುಪಿರುವುದಕ್ಕೂ ಸಂಬಂಧ ಹುಡುಕಬೇಕಾದರೆ ಇತ್ತೀಚೆಗೆ ಆ ಪಕ್ಷದಲ್ಲಿ ಉಂಟಾಗಿದ್ದ ಸಂಚಲನವನ್ನು ನೆನಪಿಸಿಕೊಳ್ಳಬೇಕು. ‘ಜಿ 23’ ಹೆಸರಿನ 23 ಮಂದಿ ಹಿರಿಯ ನಾಯಕರು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ ‘ಆತ್ಮವಿಮರ್ಶೆ’ ಆಗಬೇಕು ಎಂದಿದ್ದರು. ನಾಯಕತ್ವದ ವಿಚಾರದಲ್ಲಿ ಉಂಟಾಗಿರುವ ನಿರ್ವಾತ ಸ್ಥಿತಿಯನ್ನು ನಿವಾರಿಸಿ ‘ಸೂಕ್ತ ನಾಯಕ’ನನ್ನು ಆಯ್ಕೆ ಮಾಡಿ ಎಂದಿದ್ದರು.
ಆತ್ಮವಿಮರ್ಶೆ ಮತ್ತು ನಾಯಕತ್ವದ ವಿಷಯದಲ್ಲಿ ಹಲವು ಮಿತಿಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ‘ಜಿ 23’ ನಾಯಕರ ಪತ್ರ ಬೆವರಿಳಿಸಿತ್ತು. ಇದಾದ ಬಳಿಕ ಕಾಂಗ್ರೆಸ್ ಪಕ್ಷ ‘ಜಿ 23’ ನಾಯಕರನ್ನು ನಗಣ್ಯ ಮಾಡುವ ಮಹಾಅಭಿಯಾನವನ್ನು ಹಮ್ಮಿಕೊಂಡಿತು. ಇನ್ನೊಂದೆಡೆ ‘ಜಿ 23’ ನಾಯಕರು ಅಲ್ಲಲ್ಲಿ ಮಿಸುಕಾಡಿದರಾದರೂ ‘ಕಾಲ’ಕ್ಕಾಗಿ ಕಾಯತೊಡಗಿದರು. ಅಂತಹ ‘ಕಾಲ’ ಈಗ ಕೂಡಿ ಬರುತ್ತಿದೆ.
ಕೇರಳ ಫಲಿತಾಂಶವೇ ನಿರ್ಣಾಯಕ!
ಸದ್ಯ ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳ ಪೈಕಿ ಕಾಂಗ್ರೆಸ್ ಪಕ್ಷ ಅತ್ಯಂತ ನಿರೀಕ್ಷೆ ಇಟ್ಟುಕೊಂಡಿರುವುದು, ಶ್ರಮ ಪಟ್ಟಿರುವುದು ಕೇರಳದ ಬಗ್ಗೆ ಮಾತ್ರ. ಉಳಿದಂತೆ ಪಶ್ಚಿಮ ಬಂಗಾಳದಲ್ಲಿ ಸಮರಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದೆ. ಅಸ್ಸಾಂನಲ್ಲಿ ‘ಬಂದರೆ ಸರಿ, ಬಾರದಿದ್ದರೆ ಪರವಾಗಿಲ್ಲ’ ಎಂದುಕೊಂಡಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ಡಿಎಂಕೆಯನ್ನು ನಂಬಿಕೊಂಡಿದೆ. ಹಾಗಾಗಿ ಕೇರಳದ ಬಗ್ಗೆ ಮಾತ್ರ ಕಣ್ಣರಳಿಸಿಕೊಂಡು ನೋಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಕೇರಳದ ಬಗ್ಗೆ ಮಾತ್ರ ಕುತೂಹಲ ಹುಟ್ಟಲು ಮತ್ತು ಗಂಭೀರವಾಗಿ ಪರಿಗಣಿಸಲು ಹಲವು ಕಾರಣಗಳಿವೆ.
ಮೊತ್ತ ಮೊದಲನೆಯದಾಗಿ ರಾಹುಲ್ ಗಾಂಧಿ ಅವರೀಗ ಕೇರಳದ ವೈನಾಡು ಕ್ಷೇತ್ರದ ಸಂಸದ. ಹಾಗಾಗಿ ತಾನು ಪ್ರತಿನಿಧಿಸುವ ರಾಜ್ಯದಲ್ಲಿ ಗೆದ್ದು ತೋರಬೇಕು ಎಂಬುದು ಅವರ ಛಲ. ಇಲ್ಲಿ ಗೆಲ್ಲುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಬೇಕು. ಕಡೆಯ ಪಕ್ಷ ಅವರಿಗೆ ‘ಆಹಾರ’ ಆಗುವುದನ್ನಾದರೂ ತಪ್ಪಿಸಬೇಕು ಎಂಬ ಲೆಕ್ಕಾಚಾರ. ಇದು ವಿಪಕ್ಷದವರ ವಿಷಯದಲ್ಲಿ ಮಾತ್ರವಲ್ಲ, ಅವರ ವಿರುದ್ಧ ಮೌನ ಕ್ರಾಂತಿ ನಡೆಸುತ್ತಿರುವ ‘ಜಿ 23 ನಾಯಕರ’ ವಿಷಯದಲ್ಲೂ. ಜೊತೆಗೆ ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಗೆಲುವಿನ ಸಾಧ್ಯತೆ ಹೆಚ್ಚಿರುವುದು ಕೇರಳದಲ್ಲಿ ಮಾತ್ರ ಎಂಬುದು ಮತ್ತೊಂದು ಕಾರಣ. ಎಕೆಂದರೆ ಇಲ್ಲಿ ಎಲ್ ಡಿಎಫ್ ಮತ್ತು ಯೂಡಿಎಫ್ ಮೈತ್ರಿಕೂಟಗಳಿದ್ದು ಪ್ರತಿಸಲವೂ ಅಧಿಕಾರ ಅದಲುಬದಲಾಗುತ್ತದೆ. ಈವರೆಗೆ ಎಲ್ ಡಿಎಫ್ ಅಧಿಕಾರದಲ್ಲಿತ್ತು. ಈಗ ಯುಡಿಎಫ್ ಅಧಿಕಾರಕ್ಕೆ ಬರಬಹುದು ಎಂದುಕೊಂಡಿದ್ದಾರೆ.
ಉತ್ತರ ಭಾರತಕ್ಕೆ ಹೋಲಿಸಿಕೊಂಡರೆ ತಮ್ಮ ಬಗ್ಗೆ ದಕ್ಷಿಣ ಭಾರತದಲ್ಲಿ ಸದಾಭಿಪ್ರಾಯವಿದೆ. ಇದನ್ನು ಹಾಗೆ ಮುಂದುವರೆಸಿಕೊಂಡು ಹೋಗಬೇಕು ಎಂಬ ಇನ್ನೊಂದು ಬಗೆಯ ಆಲೋಚನೆ ಕೂಡ ರಾಹುಲ್ ಗಾಂಧಿ ಅವರಿಗಿದ್ದಂತೆ ಇದೆ. ಅದೇ ಕಾರಣಕ್ಕೆ ಅವರು ಚುನಾವಣಾ ದಿನಾಂಕ ನಿಗಧಿ ಆಗುವ ಮುನ್ನವೂ ಕೇರಳ ಮಾತ್ರವಲ್ಲದೆ ನೆರೆಯ ತಮಿಳುನಾಡಿನಲ್ಲೂ ಪ್ರವಾಸ ಕೈಗೊಂಡಿದ್ದರು. ದಿನಾಂಕ ಪ್ರಕಟವಾದ ಮೇಲಂತೂ ಸಂಪೂರ್ಣವಾಗಿ ಕೇರಳದಲ್ಲಿ ತೊಡಗಿಸಿಕೊಂಡರು. ಇದೇ ರೀತಿ ಚುನಾವಣೆ ನಡೆಯುತ್ತಿರುವ ಮತ್ತು ‘ಗೆದ್ದರೂ ಗೆಲ್ಲಬಹುದು’ ಎಂದು ಹೇಳಲಾಗುತ್ತಿರುವ ಅಸ್ಸಾಂನಲ್ಲಿ ಅವರು ಪ್ರಚಾರ ಮಾಡಿದ್ದು ಎರಡೇ ದಿನ. ಇಷ್ಟೇಯಲ್ಲ, ಇದೇ ಮೊದಲ ಬಾರಿಗೆ ಅವರ ಸಹೋದರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ಹೊರಗೆ ಚುನಾವಣೆ ಪ್ರಚಾರ ಭಾಷಣ ಮಾಡಿದ್ದಾರೆ. ಅದು ಕೂಡ ಕೇರಳ ಮತ್ತು ಅಸ್ಸಾಂನಲ್ಲಿ. ಒಂದೊಮ್ಮೆ ಅವರ ಪತ್ನಿ ರಾಬರ್ಟ್ ವಾದ್ರಾ ಅವರು ಕೊರೋನಾ ಸೋಂಕಿಗೆ ಒಳಗಾಗದಿದ್ದರೆ ಪ್ರಿಯಾಂಕಾ ಗಾಂಧಿ ಅವರು ಇನ್ನೂ ಒಂದೆರಡು ದಿನ ಕೇರಳದಲ್ಲಿ ಪ್ರಚಾರ ಕೈಗೊಂಡಿರುತ್ತಿದ್ದರು ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ಒಂದು ವೇಳೆ ಕಾಂಗ್ರೆಸ್ ಪಕ್ಷ ಕೇರಳದಲ್ಲಿ ಗೆಲ್ಲದೆ ಹೋದರೆ ‘ಜಿ 23 ನಾಯಕರು’ ರಾಹುಲ್ ಗಾಂಧಿ ವಿರುದ್ಧ ಸಮರ ಸಾರಬಹುದು. ‘ಗಾಂಧಿ ಕುಟುಂಬಕ್ಕೆ ಹೊರತಾದ ಸೂಕ್ತ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿ’ ಎಂಬ ಕೂಗೆಬ್ಬಿಸಬಹುದು. ಕೆಲವರು ಪಕ್ಷ ತ್ಯಜಿಸಬಹುದು. ಕೇರಳದವರೇಯಾದ ಪಿ.ಸಿ. ಚಾಕೋ ಎನ್ ಸಿಪಿ ಸೇರಿದಂತೆ ಇನ್ನಷ್ಟು ನಾಯಕರು ಬಿಜೆಪಿಗೆ ಹೊರತಾದ ಪಕ್ಷಗಳ ಕಡೆಗೆ ವಾಲಬಹುದು. ‘ಕಾಂಗ್ರೆಸ್ ಬಿಟ್ಟುಹೋಗಿರುವ’ ಮಮತಾ ಬ್ಯಾನರ್ಜಿ, ವೈಎಸ್ ಜಗನ್ ಮೋಹನ್ ರೆಡ್ಡಿ, ಕೆ. ಚಂದ್ರಶೇಖರ್ ರಾವ್, ಶರದ್ ಪವಾರ್ ಮತ್ತಿತರರ ಜೊತೆಗೂಡಿ ರಾಷ್ಟ್ರ ಮಟ್ಟದಲ್ಲಿ ‘ಪರ್ಯಾಯ ಕಾಂಗ್ರೆಸ್’ ಸ್ಥಾಪನೆಗೆ ಮುಂದಾಗಬಹುದು. ಕಡೆ ಪಕ್ಷ ಸದ್ಯ ರಾಹುಲ್ ಗಾಂಧಿ ಅವರ ಆಪ್ತ ಬಳಗದಲ್ಲಿ ಇದ್ದುಕೊಂಡು ಇತರು ಮತ್ತು ರಾಹುಲ್ ಗಾಂಧಿ ನಡುವೆ ಕಂದಕ ಸೃಷ್ಟಿಸುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ (ಕೇರಳದವರೇ) ಅವರನ್ನು ಕಿತ್ತಾಕುವಂತೆ ಅಥವಾ ಅವರಿಗೆ ಮಹತ್ವ ಸಿಗದಂತೆ ಮಾಡಬಹದು ಎಂಬ ಹಲವು ಲೆಕ್ಕಾಚಾರಗಳಿವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಂಸ್ಥಾಪನಾ ದಿನವಾದ ಏಪ್ರಿಲ್ 6ರಂದು ಕೇರಳದ ಜನ ಕಾಂಗ್ರೆಸಿಗೆ ಯಾವ ಪ್ರಮಾಣದಲ್ಲಿ ಮತ ನೀಡುತ್ತಾರೆ ಎಂಬುದುರ ಮೇಲೆ ಆ ಪಕ್ಷದ ಭವಿಷ್ಯ ಅಡಗಿದೆ.
ಇಂದಿನಿಂದ ಆರಂಭ ಅಮರನಾಥ ಯಾತ್ರೆ – ಉಗ್ರರ ದಾಳಿಯ ಆತಂಕ..ಭದ್ರತೆ ಹೆಚ್ಚಿಸಿದ ಕೇಂದ್ರ !!
ಇಂದಿನಿಂದ ಜಮ್ಮು ಕಾಶ್ಮೀರದಲ್ಲಿ (Jammu Kashmir) ಅಮರನಾಥ ಯಾತ್ರೆ (Amaranatha yatra) ಆರಂಭವಾಗಲಿದೆ. ಈ ಯಾತ್ರೆಯ ಯಾತ್ರಾರ್ಥಿಗಳು ಕಾಶ್ಮೀರದ ಪಹಲ್ಗಾಮ್ (Pahalgam) ಮೂಲಕವೇ ಸಾಗಿ ಹೋಗಬೇಕಿದೆ. ಹೀಗಾಗಿ...
Read moreDetails