ಗದಗ: ಕಾಂಗ್ರೆಸ್‌ನಲ್ಲಿ ಕಪ್ಪು ಹಣ ಕೊಟ್ಟವರಷ್ಟೇ ಸಚಿವರಾಗುತ್ತಾರೆ. ಕಪ್ಪು ಹಣ ಕೊಡದವರು ಸಚಿವರಾಗಲ್ಲ. ಹಣ ಕೊಟ್ಟರೆ ಮಾತ್ರ ಮಂತ್ರಿಗಳಾಗಿ ಮುಂದುವರೆಯುತ್ತೀರಿ ಅಂತಾ ಸ್ವತಃ ಸಿಎಂ ಅವರೇ ಹೇಳುತ್ತಾರಂತೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿದ್ದಾರೆ.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮಂತ್ರಿಗಳು ಹಣಕೊಡಲು ಆಗಲ್ಲ ಅಂದ್ರೆ ಗೇಟ್‌ಪಾಸ್ ಕೊಟ್ಟು ಕಳುಹಿಸುತ್ತಾರೆ. ಉದಾಹರಣೆಗೆ ರಾಜಣ್ಣ ಪರಿಸ್ಥಿತಿ ನೋಡಬಹುದು. ಸಚಿವ ಸಂಪುಟದ ಸಚಿವರಿಗೆ ಎಲ್ಐಸಿ ಏಜೆಂಟ್‌ಗಳಂತೆ ಟಾರ್ಗೆಟ್ ಕೊಡುತ್ತಿದ್ದಾರೆ. ಇಷ್ಟು ಕಲೆಕ್ಷನ್ ಮಾಡಬೇಕು ಅಂತಾ ಟಾರ್ಗೆಟ್ ಕೊಡುತ್ತಾರೆ. ಟಾರ್ಗೆಟ್ ಕೊಟ್ಟು ಕೆಲಸ ಮಾಡುವ ಪರಿಸ್ಥಿತಿ ಸರ್ಕಾರಕ್ಕೆ ಬಂದಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. 36 ಜನ ಮಂತ್ರಿಗಳಲ್ಲಿ ಒಬ್ಬರಾದ್ರೂ ಸರಿ ಇದ್ದಾರಾ? ಸಿಎಂ ಸೇರಿದಂತೆ ಸರ್ಕಾರದಲ್ಲಿ ಯಾರೂ ಸರಿ ಇಲ್ಲ. ಸಿಎಂ ತಪ್ಪು ಮಾಡಿದರೆ ರಾಜೀನಾಮೆ ಯಾರೂ ಕೇಳಲ್ಲ. ಅದೇ ರಾಜಣ್ಣ, ನಾಗೇಂದ್ರ ಅವರಿಂದ ಮಾತ್ರ ರಾಜೀನಾಮೆ ತೆಗೆದುಕೊಂಡರು. ಅವರಿಗೊಂದು ನ್ಯಾಯ ಇವರಿಗೊಂದು ನ್ಯಾಯನಾ? ಇವರ ಪ್ರಕಾರ ಸಚಿವ ಸಂಪುಟದ ಎಲ್ಲಾ ಮಂತ್ರಿಗಳು ರಾಜೀನಾಮೆ ಕೊಡಬೇಕಾಗುತ್ತದೆ ಎಂದರು.

ಮಾತು ಮುಂದುವರಿಸಿದ ಅವರು, ರಾಜ್ಯದಿಂದ ತೆಲಂಗಾಣಕ್ಕೆ ಹಣ ಕಳುಹಿಸಿದ್ದು ಯಾರು? ಇದಕ್ಕೆ ಮೂಲ ಸೂತ್ರಧಾರ ರಾಹುಲ್ ಗಾಂಧಿ. ಭ್ರಷ್ಟಾಚಾರ ಮಾಡಿಸಿದ್ದೇ ರಾಹುಲ್ ಗಾಂಧಿ. ಇಲ್ಲಿ ಭ್ರಷ್ಟಾಚಾರ ಪಿತಾಮಹ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್. ರಾಜ್ಯದಲ್ಲಿ ಕೋತಿ ಮೊಸರು ತಿಂದು ಬೇರೆಯವರ ಬಾಯಿಗೆ ಒರೆಸಿದಂತಾಗಿದೆ ಎಂದು ಹೇಳಿದರು.












