ನೂತನ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರದ ಬೆನ್ನಲ್ಲೇ ಬಿಜೆಪಿ ವಿರುದ್ಧ ಸ್ವಪಕ್ಷೀಯರಿಂದಲೇ ಅಪಸ್ವರ ಎದ್ದಿದೆ. ಹಳೆ ಮೈಸೂರು ಪ್ರಾಂತ್ಯ, ಕಲ್ಯಾಣ ಕರ್ನಾಟಕ ಪ್ರಾಂತ್ಯ ಮೈಸೂರು, ಕೊಡಗು, ಕಲಬುರಗಿ-ಯಾದಗಿರಿ ಮೊದಲಾದ ಭಾಗಗಳಿಗೆ ಸಚಿವಗಿರಿ ಸಿಗದಿರುವುದು ಅಲ್ಲಿಯ ಸ್ಥಳೀಯ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಮೈಸೂರು ಪ್ರಾಂತ್ಯದ ಜಿಲ್ಲೆಗಳ ಪೈಕಿ ಮಂಡ್ಯ ಜಿಲ್ಲೆಗೊಂದೇ ಸಚಿವ ಸ್ಥಾನ ನೀಡಲಾಗಿದೆ. ಮೈಸೂರು, ಕೊಡಗು, ಹಾಸನ , ಚಾಮರಾಜನಗರ ಜಿಲ್ಲೆಗಳ ಯಾವುದೇ ನಾಯಕರಿಗೆ ಈ ಬಾರಿ ಸಚಿವ ಸ್ಥಾನ ದೊರೆತಿಲ್ಲ. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿಯೂ ಮೈಸೂರು ಜಿಲ್ಲೆಗೆ ಸಚಿವ ಸ್ಥಾನದ ಪ್ರಾತಿನಿಧ್ಯ ದೊರೆತಿರಲಿಲ್ಲ.
ಹಾಗಾಗಿ, ಈ ಬಾರಿ ಸಚಿವಗಿರಿ ಲಭಿಸುವ ನಿರೀಕ್ಷೆಯಲ್ಲಿದ್ದರು ಆ ಭಾಗದ ಕಾರ್ಯಕರ್ತರು. ಕೃಷ್ಣರಾಜ ಕ್ಷೇತ್ರದ ಶಾಸಕ, ಐದು ಬಾರಿ ಶಾಸಕರಾಗಿರುವ ರಾಮದಾಸ್ ಗೆ ಈ ಬಾರಿ ಸಚಿವ ಸ್ಥಾನ ಪಕ್ಕಾ ಎನ್ನಲಾಗಿತ್ತು. ಸ್ವತಃ ಯಡಿಯೂರಪ್ಪ ಅವರೇ ರಾಮ್‌ದಾಸ್ ಬಳಿ ಸಚಿವ ಸ್ಥಾನ ನೀಡುವುದಾಗಿ ಹೇಳಿದ್ದರು, ಹಾಗಾಗಿ ನಿರೀಕ್ಷೆ ಇಟ್ಟಿದ್ದೆ ಎಂದು ರಾಮ್‌ದಾಸ್ ಅವರೇ ಮಾಧ್ಯಮಗಳೆದುರು ತಿಳಿಸಿದ್ದಾರೆ.
ಕರಾವಳಿ ಬಳಿಕ ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗಿರುವ ಕೊಡಗು ಜಿಲ್ಲೆ ಕೂಡಾ ಸಚಿವ ಸ್ಥಾನದಿಂದ ವಂಚಿತವಾಗಿದೆ. ಜಿಲ್ಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರು ಹಾಗೂ ಒಬ್ಬ ವಿಧಾನ ಪರಿಷತ್ ಸದಸ್ಯರಿದ್ದರೂ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ ಎನ್ನುವುದು ಸ್ಥಳೀಯ ಕಾರ್ಯಕರ್ತರ ಅಸಮಾಧಾನಕ್ಕೆ ಮುಖ್ಯ ಕಾರಣವಾಗಿದೆ.
ಅರವಿಂದ್ ಬೆಲ್ಲದ, ಬಸನಗೌಡ ಪಾಟೀಲ್ ಯತ್ನಾಳ್, ಸಿಪಿ ಯೋಗೇಶ್ವರ್ ಮೊದಲಾದವರಿಗೂ ಸಚಿವ ಸ್ಥಾನ ಸಿಗದಿರುವುದು ಅವರ ಅಭಿಮಾನಿ ಬಳಗಕ್ಕೆ ತೀವ್ರ ನಿರಾಸೆಯಾಗಿದೆ. ಬಿಎಸ್‌ವೈ ಪದಚ್ಯುತಿ ಬಳಿಕವಂತೂ ಯತ್ನಾಳ್ ತನಗೆ ಸಚಿವ ಸ್ಥಾನ ನೀಡುವ ಕುರಿತು ನಿರೀಕ್ಷೆ ಇಟ್ಟಿದ್ದರು. ಆದರೆ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಸಿಕ್ಕಿಲ್ಲ.
ಈ ನಡುವೆ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಕೃಷ್ಣಪ್ಪ ಬಹಿರಂಗವಾಗಿಯೇ ಪಕ್ಷದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಿಂದ ಅನ್ಯಾಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇದು ಪಕ್ಷವು ನಮ್ಮ ಜಿಲ್ಲೆಗೆ ಮಾಡುತ್ತಿರುವ ಅವಮಾನ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ರಾಜ್ಯದ ಗೊಲ್ಲ ಸಮುದಾಯವು 80ರಷ್ಟು ಭಾಗವು ಬಿಜೆಪಿಗೆ ಮತ ನೀಡಿರುವುದು ಪಕ್ಷ ಮರೆಯಬಾರದಿತ್ತು.ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯದ ಮತಗಳಿದ್ದು,ಒಂದು ಸ್ಥಾನ ನೀಡದೇ ಇರುವುದು ತುಂಬಾ ನೋವುಂಟು ಮಾಡಿದೆ ಎಂದು ಪೂರ್ಣಿಮಾ ಹೇಳಿದ್ದಾರೆ.
ಕಲಬುರಗಿ-ಯಾದಗಿರಿ ಭಾಗಕ್ಕೆ ಯಾವುದೇ ಪ್ರಾತಿನಿಧ್ಯ ಸಿಗದಿರುವುದು ಕೂಡಾ ಆ ಭಾಗದ ಜನತೆಗೆ ನಿರಾಸೆ ತಂದಿಟ್ಟಿದೆ. ಶಾಸಕ ದತ್ತಾತ್ರೇಯ ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗದಿರುವುದರಿಂದ ಅವರ ಅಭಿಮಾನಿಗಳು ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಟೀಲ್ ಬೆಂಬಲಿಗರು, ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯಪುರ, ಕೋಲಾರ, ಚಿಕ್ಕಮಗಳೂರು, ದಾವಣಗೆರೆ, ರಾಮನಗರ ಹಾಗೂ ಬಳ್ಳಾರಿ ಜಿಲ್ಲೆಗಳಿಗೆ ಸಚಿವ ಸ್ಥಾನ ದೊರೆಯದಿರುವುದು ಕೂಡಾ ಆ ಭಾಗದ ಜನರಲ್ಲಿ ನಿರಾಸೆ ಮೂಡಿಸಿದೆ.
ಈ ನಡುವೆ ಶಾಸಕ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ಸಿಗದಿರುವುದನ್ನು ವಿರೋಧಿಸಿ ಅವರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂರು ಬಾರಿ ಶಾಸಕರಾಗಿರುವ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವ ಭರವಸೆಯಲ್ಲಿ ಅವರ ಅಭಿಮಾನಿಗಳು ಇದ್ದರು. ಆದರೆ ಅವರಿಗೆ ಸಚಿವ ಸ್ಥಾನ ನೀಡದೆ ಇರೋದನ್ನು ವಿರೋಧಿಸಿ ಅವರ ಅಭಿಮಾನಿಗಳು, ಹಾವೇರಿ ಹಾಗೂ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಉಳಿದಂತೆ ಶಾಸಕ ರಾಜುಗೌಡ, ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಮೊದಲಾದವರು ಸಚಿವ ಸ್ಥಾನ ಸಿಗದಿರುವುದಕ್ಕೆ ತಮ್ಮ ಬೇಸರವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.