ರಾಜ್ಯ ಬಿಜೆಪಿಯ ಹಳವಂಡಗಳು ಎಂದೆಂದೂ ಮುಗಿಯದ ಕಥೆಯಂತೆ ಮೆಗಾ ಧಾರಾವಾಹಿಯಾಗಿ ಮುಂದುವರಿದಿವೆ.
ಎರಡು ವರ್ಷದ ಹಿಂದೆ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಉರುಳಿಸಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಆರಂಭವಾದ ‘ನಾಯಕತ್ವ ಬದಲಾವಣೆ’ಯ ತೆರೆಮರೆಯ ತಾಲೀಮುಗಳು ನಂತರ ಕ್ರಮೇಣ ಭಾರಿ ಬಹಿರಂಗ ಪ್ರದರ್ಶನಗಳಾಗಿ ಬದಲಾಗಿದ್ದವು.
ಕಳೆದ ಏಪ್ರಿಲ್- ಮೇ ಹೊತ್ತಿಗೆ ಕರೋನಾ ಎರಡನೇ ಅಲೆ ತಾರಕಕ್ಕೇರುತ್ತಲೇ ಬಿಜೆಪಿಯ ಆಂತರಿಕ ಬಂಡಾಯದ ಈ ಬಹಿರಂಗ ಪ್ರದರ್ಶನಗಳು ಭರ್ಜರಿ ಮೇಳಗಳಾಗಿ ರಾಷ್ಟ್ರಾದ್ಯಂತ ಸದ್ದು ಮಾಡಿದ್ದವು. ಅದರ ಪರಿಣಾಮವಾಗಿ ತಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಿದ ದಿನವೇ, ಕಳೆದ ಜುಲೈ 26ರಂದು ಬಿಎಸ್ ಯಡಿಯೂರಪ್ಪ ಪದಚ್ಯುತಿಯಾಗಿತ್ತು.
ಸಾರ್ವಜನಿಕವಾಗಿ ಕಣ್ಣೀರಿಟ್ಟು ಯಡಿಯೂರಪ್ಪ, ರಾಜೀನಾಮೆ ನಿರ್ಧಾರ ತಮ್ಮ ವೈಯಕ್ತಿಕ ಸ್ವಯಂಪ್ರೇರಿತ ಎಂದು ಹೇಳಿದ್ದರೂ ಸುರಿದ ಕಣ್ಣೀರು ವಾಸ್ತವ ಸಂಗತಿಯನ್ನು ಸಾರಿ ಹೇಳಿತ್ತು. ಅವರ ನಾಯಕತ್ವ ಬದಲಾವಣೆಗಾಗಿ ಆರ್ ಎಸ್ ಎಸ್ ಮತ್ತು ಪಕ್ಷನಿಷ್ಠರ ನಿರಂತರ ಲಾಬಿ ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ಪಕ್ಷದ ಹೈಕಮಾಂಡ್ ರವಾನಿಸಿದ ಸಂದೇಶದ ಅಂತಿಮ ಫಲಿತಾಂಶ ಆ ರಾಜೀನಾಮೆ ಎಂಬುದು ಜಗಜ್ಜಾಹೀರಾಗಿತ್ತು.
ಆ ಬಳಿಕ ಅಸ್ತಿತ್ವಕ್ಕೆ ಬಂದ ಬಸವರಾಜ ಬೊಮ್ಮಾಯಿ ಸರ್ಕಾರವಾದರೂ ಕನಿಷ್ಠ ಬಿಜೆಪಿಯ ಆತಂರಿಕ ಬೇಗುದಿಯ ವ್ಯಾಧಿಯಿಂದ ಮುಕ್ತವಾಗಬಹುದು. ಕನಿಷ್ಟ ಈ ವಿಧಾನಸಭೆಯ ಇನ್ನುಳಿದ ಒಂದೂಮುಕ್ಕಾಲು ವರ್ಷವಾದರೂ ಒಂದು ಸುಸೂತ್ರ ಆಡಳಿತ ಮತ್ತು ಸ್ಥಿರ ಸರ್ಕಾರ ಕರ್ನಾಟಕದ ಜನತೆಯ ಕಷ್ಟಸುಖಗಳತ್ತ ಗಮನ ಹರಿಸಬಹುದು ಎಂಬ ನಿರೀಕ್ಷೆಗಳಿದ್ದವು.
ಅಧಿಕಾರ ಸ್ವೀಕರಿಸಿದ ಬಳಿಕ ಕರೋನಾ ನಿಯಂತ್ರಣ, ಆಡಳಿತಾತ್ಮಕ ಶಿಷ್ಟಾಚಾರದ ಕೆಲವು ನಿಲುವುಗಳ ಮೂಲಕ ಭರವಸೆ ಹುಟ್ಟಿಸಿದ್ದ ಬೊಮ್ಮಾಯಿ ಅವರ ಆಡಳಿತ ಕೂಡ ಹುಟ್ಟಿದ ಮೂರೇ ದಿನಕ್ಕೆ ಬಿಜೆಪಿಯ ರೂಢಿಗತ ಸಮಸ್ಯೆಗಳ ಸುಳಿಗೆ ಸಿಲುಕಿದೆ. ಬಂಡಾಯ, ಅತೃಪ್ತಿ, ಅಸಮಾಧಾನ, ಆಕ್ರೋಶದ ಅಲೆಗಳು ಮತ್ತೆ ಅಪ್ಪಳಿಸತೊಡಗಿವೆ.
ಮುಖ್ಯಮುಖ್ಯಮಂತ್ರಿ ಆಯ್ಕೆಯ ಆರಂಭದಿಂದಲೇ ಶುರುವಾದ ಬಿಜೆಪಿಯ ಆ ಬಂಡಾಯದ ಬಗೆಗಳು ದಿನದಿಂದ ದಿನಕ್ಕೆ ಉಲ್ಬಣಗೊಳ್ಳತೊಡಗಿವೆ.
ಎಲ್ಲಾ ಲೆಕ್ಕಾಚಾರ ತಲೆಕೆಳಗು ಮಾಡಿ ಯಡಿಯೂರಪ್ಪ ಪರಮಾಪ್ತ ಬೊಮ್ಮಾಯಿ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ ಕ್ಷಣವೇ ಮುಖ್ಯಮಂತ್ರಿ ಹುದ್ದೆಯ ಇತರೆ ಆಕಾಂಕ್ಷಿಗಳ ಅಸಮಾಧಾನ ಮತ್ತು ಅವರ ಬೆಂಬಲಿಗರ ಆಕ್ರೋಶ ಭುಗಿಲೆದ್ದಿತ್ತು.
ನಂತರ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆ ಹಂತದಲ್ಲಿ ಯಾರು ಸಚಿವರಾಗಬೇಕು ಯಾವ ಮಾನದಂಡದ ಮೇಲೆ ಸಚಿವರನ್ನು ಮಾಡಬೇಕು ಅನ್ನೋ ವಿಷಯದಲ್ಲಿ ಚರ್ಚೆ ಶುರುವಾದಾಗ ಕೂಡ ಅಸಮಾಧಾನದ ಮಹಾಸ್ಫೋಟಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಅಂತಿಮವಾಗಿ ಸಂಪುಟ ಘೋಷಣೆಯಾದಾಗ ಸ್ಥಾನ ವಂಚಿತರು ತೀವ್ರ ಅಸಮಾಧಾನ, ಅತೃಪ್ತಿ ಹೊರಹಾಕಿದ್ದರು.
ಸಿದ್ಧಾಂತ ನಿಷ್ಠರು, ಪಕ್ಷನಿಷ್ಠರು, ಹಿರಿಯ ನಾಯಕರು ತಮಗೆ ಅವಕಾಶ ಸಿಕ್ಕಿಲ್ಲ ಎಂಬ ಕಾರಣಕ್ಕೆ ಒಂದು ಬಗೆಯಲ್ಲಿ ಆಕ್ರೋಶ, ಹತಾಶೆ ಹೊರಹಾಕಿದರೆ, ಮತ್ತೊಂದು ಕಡೆ ಯಡಿಯೂರಪ್ಪ ಪರ ವಕಾಲತ್ತು ವಹಿಸಿ ದಿಲ್ಲಿ ಯಾತ್ರೆ ಮಾಡಿದವರು ಮತ್ತು ಯಡಿಯೂರಪ್ಪ ವಿರುದ್ಧ ಬಂಡಾಯವೆದ್ದು ನಿರಂತರ
‘ನಾಯಕತ್ವ ಬದಲಾವಣೆ’ಯ ಕೂಗು ಹಾಕಿದವರು ಕೂಡ ಸಂಪುಟ ವಂಚಿತರಾಗಿ ಬೀದಿಗಿಳಿದಿದ್ದರು.
ನಂತರ ಸಚವರ ಖಾತೆ ಹಂಚಿಕೆಯಾಗುತ್ತಲೇ ಅಸಮಾಧಾನದ ಮೂರನೇ ಅಲೆ ಭುಗಿಲೆದ್ದಿದೆ. ಸಂಘ ನಿಷ್ಠೆಯ ಹಲವರಿಗೆ ಅನಿರೀಕ್ಷಿತವಾಗಿ ಭಾರಿ ಖಾತೆಗಳು ಸಿಕ್ಕಿವ. ಮತ್ತೆ ಬಹುತೇಕರಿಗೆ ಯಡಿಯೂರಪ್ಪ ಸಂಪುಟದಲ್ಲಿ ಸಿಕ್ಕ ಖಾತೆಗಳನ್ನೇ ಉಳಿಸಿಕೊಡಲಾಗಿದೆ. ಖಾತೆ ಹಂಚಿಕೆ ವಿಷಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಪಕ್ಷದ ಹೈಕಮಾಂಡ್ ಗಳೆಲ್ಲರಿಗಿಂತ ಮುಖ್ಯವಾಗಿ ಆರೆಸ್ಸೆಸ್ ಮತ್ತು ಸಂಘಪರಿವಾರದ ಪ್ರಭಾವ ಹೆಚ್ಚು ಕೆಲಸ ಮಾಡಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಆದರೆ ಸಂಘದ ಇಂಥ ತೀರ್ಮಾನಗಳ ವಿರುದ್ಧವೇ ಬಿಜೆಪಿಯ ಸಚಿವ ಸ್ಥಾನ ವಂಚಿತರು ಮತ್ತು ಅಪೇಕ್ಷಿತ ಖಾತೆ ವಂಚಿತರು ಬಂಡಾಯ ಸಾರಿದ್ದಾರೆ.
ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೂಲದ ಬಾಂಬೆ ಬಾಯ್ಸ್ ಟೀಂ ಸಚಿವರು ತಮ್ಮ ಖಾತೆಗಳ ವಿಷಯದಲ್ಲಿ ಬಂಡಾಯವೆದ್ದಿದ್ದಾರೆ.
ಪರಿಸರ, ಪ್ರವಾಸೋದ್ಯಮ ಖಾತೆ ಸಚಿವ ಆನಂದ್ ಸಿಂಗ್ ಮತ್ತು ಪೌರಾಡಳಿತ ಖಾತೆ ಸಚಿವ ಎಂಟಿಬಿ ನಾಗರಾಜ್ ಭಾರೀ ಬಂಡಾಯದ ಸೂಚನೆ ನೀಡಿದ್ದಾರೆ.
ಇಬ್ಬರು ಅತೃಪ್ತ ಸಚಿವರ ಜೊತೆ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದ ಬಳಿಕವೂ ಅವರ ಬಂಡಾಯದ ಮಾತುಗಳು ಬದಲಾಗಿಲ್ಲ.
ಆನಂದ್ ಸಿಂಗ್ ಅವರಂತೂ ದೆಹಲಿಗೂ ಹೋಗಿ ಹೈಕಮಾಂಡಿಗೂ ತಮ್ಮ ಅಸಮಾಧಾನ ತಲುಪಿಸಿಬಂದಿದ್ದಾರೆ. ಹಾಗೇ, ದೆಹಲಿಯಿಂದ ವಾಪಸಾದ ಆನಂದ್ ಸಿಂಗ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಮಾತೂ ಕೇಳಿಬರುತ್ತಿವೆ. ಹಾಗಾಗಿ ಹೊಸಪೇಟೆಯ ತಮ್ಮ ಅಧಿಕೃತ ಕಚೇರಿಯನ್ನು ಧಿಡೀರನೆ ಮುಚ್ಚಿ, ಅದರ ನಾಮಫಲಕಗಳನ್ನು ತೆರವುಗೊಳಿಸಿದ್ದಾರೆ.
ಅಲ್ಲದೆ, ತಮ್ಮ ಅಪ್ತರೊಂದಿಗೆ ಮಾತನಾಡುತ್ತಾ, “ನಾನು ಬಯಸಿದ ಖಾತೆ ನನಗೆ ಸಿಕ್ಕಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ, ಹೈಕಮಾಂಡಿಗೆ ಮನವಿಯನ್ನೂ ಮಾಡಿದೆ. ಅದರೂ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿಲ್ಲ. ಆ ಕಾರಣಕ್ಕೆ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಈ ನನ್ನ ನಿರ್ಧಾರದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಜೊತೆಗೆ ಅಗತ್ಯಬಿದ್ದರೆ ಶಾಸಕ ಸ್ಥಾನಕ್ಕೆ ಕೂಡ ರಾಜೀನಾಮೆ ಸಲ್ಲಿಸಲು ಸಿದ್ಧ” ಎಂದು ಹೇಳಿದ್ದಾರೆ ಎನ್ನಲಾಗಿದೆ.
ಜೊತೆಗೆ ತಕ್ಷಣವೇ ತಮ್ಮ ಬೇಡಿಕೆ ಈಡೇರದೇ ಇದ್ದರೆ ಆಗಸ್ಟ್ 15ರ ಧ್ವಜಾರೋಹಣಕ್ಕೆ ಕೂಡ ಹಾಜರಾಗುವುದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ಮತ್ತೊಂದು ಕಡೆ, ಎಂಟಿಬಿ ನಾಗರಾಜ್, ತಮ್ಮ ನೋವನ್ನು ಮುಖ್ಯಮಂತ್ರಿಗಳ ಜೊತೆ ಹಂಚಿಕೊಂಡಿದ್ದೇವೆ ಅವರು ನ್ಯಾಯ ಕೊಡುತ್ತಾರೆ ಎಂಬ ಭರವಸೆಯಿದೆ ಕಾದು ನೋಡುತ್ತೇನೆ. ಇಲ್ಲವಾದಲ್ಲಿ ಮುಂದಿನ ಯೋಚನೆ ಮಾಡುವೆ ಎಂದಿದ್ದಾರೆ.
ಇದೇ ಮಾತನ್ನು ಸಚಿವ ಸ್ಥಾನ ವಂಚಿತರು ಕೂಡ; ಅದರಲ್ಲೂ ಮುಖ್ಯವಾಗಿ ಯಡಿಯೂರಪ್ಪ ಆಪ್ತರಾದ ಎಂಪಿ ರೇಣುಕಾಚಾರ್ಯ ಮತ್ತಿತರು ಕೂಡ ಆಡಿದ್ದಾರೆ.
ಹಾಗಾಗಿ ಬಿಜೆಪಿಯಲ್ಲಿ ಮತ್ತೆ ಯಥಾಸ್ಥಿತಿ ಮರಳಿದೆ. ಅಂದರೆ; ರಾಜ್ಯ ಬಿಜೆಪಿ ಮತ್ತೆ ಬಂಡಾಯ, ಅಸಮಾಧಾನ, ಅತೃಪ್ತಿ ಮತ್ತು ರಾಜಿನಾಮೆ ಬೆದರಿಕೆಯ ಬಂಡಾಯದ ಯಥಾಸ್ಥಿತಿಗೆ ಮರಳಿದೆ. ರಚನೆಯಾಗಿ ಹತ್ತು-ಹನ್ನೆರಡು ದಿನದಲ್ಲಿ ಸರ್ಕಾರಕ್ಕೆ ಗಂಡಾಂತರ ಎದುರಾಗಿದೆ.
ಹಾಗೆ ನೋಡಿದರೆ ಇದೆಲ್ಲಾ ನಿರೀಕ್ಷಿತವೇ. ಸಚಿವ ಸಂಪುಟ ರಚನೆಯಾದ ಮಾರನೇ ದಿನವೇ ಸಿಡಿ ಹಗರಣದಿಂದ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಮನೆಯಲ್ಲಿ ಅತೃಪ್ತರು ಸಭೆ ನಡೆಸಿ ಅಸಮಾಧಾನ ಹೊರಹಾಕಿದ್ದ ಕ್ಷಣದಿಂದಲೇ ಸರ್ಕಾರದ ಗಂಡಾಂತರಗಳ ಸರಣಿ ಆರಂಭವಾಗಿತ್ತು.
ಅದು ಈಗ ಇನ್ನೊಂದು ಹಂತ ಮುಂದೆ ಹೋಗಿ ಆನಂದ್ ಸಿಂಗ್ ಮತ್ತು ಎಂಟಿಬಿ ನಾಗರಾಜ್ ಬಂಡಾಯದಲ್ಲಿ ಢಾಳಾಗಿ ವ್ಯಕ್ತವಾಗಿದೆ.
ಈ ನಡುವೆ ಸ್ವತಃ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಈ ಅಸಮಾಧಾನ, ಅತೃಪ್ತಿಯ ಬೇಗೆಗೆ ದಂಗಾಗಿದ್ದು, ಈ ಬಿಕ್ಕಟ್ಟನ್ನು ತಮ್ಮಿಂದ ಶಮನ ಮಾಡಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆ ಹಿನ್ನಲೆಯಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಸಲು ಮತ್ತೆ ದೆಹಲಿಗೆ
ಪ್ರಯಾಣ ಬೆಳೆಸುವ ಯೋಚನೆಯಲ್ಲಿದ್ದಾರೆ. ಬಹುಶಃ ಈ ವಾರಾಂತ್ಯ ಅವರು ಮತ್ತೆ ಸಮಸ್ಯೆ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ದೆಹಲಿಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ.
ಒಂದು ಕಡೆ ಕೊಟ್ಟಿರುವ ಖಾತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಗುಂಪು, ಮತ್ತೊಂದು ಕಡೆ ತಮಗೆ ಸಂಪುಟದಲ್ಲಿ ಸ್ಥಾನವೇ ಸಿಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಗುಂಪು. ಹೀಗೆ ಎರಡೆರಡು ಬಗೆಯ ಬಂಡಾಯದ ಸುಳಿಗಳು ಸಿಎಂ ಕುರ್ಚಿಯ ಸುತ್ತ ಸುತ್ತಿಕೊಂಡಿವೆ. ಹಾಗಾಗಿ ಸಿಎಂ ದಿಕ್ಕೆಟ್ಟು ದಿಲ್ಲಿಯ ಕಡೆ ಮುಖ ಮಾಡಿದ್ದಾರೆ.