ಬೆಂಗಳೂರು: ರಾಜ್ಯದ ಹಾಲು ಉತ್ಪಾದಕ ರೈತರು ಹಾಗೂ ಗ್ರಾಹಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಭ್ರಷ್ಟ ಬಿಜೆಪಿಯೆ ನೇರ ಕಾರಣ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಈ ಮಾರ್ಚ್‍ನಲ್ಲಿ ಪ್ರತಿ ದಿನ 99 ಲಕ್ಷ ಲೀಟರುಗಳಷ್ಟು ಹಾಲು ಸಂಗ್ರಹವಾಗಬೇಕಾಗಿದ್ದ ಕಡೆ ಕೇವಲ 71 ಲಕ್ಷ ಲೀಟರುಗಳಷ್ಟು ಹಾಲನ್ನು ಮಾತ್ರ ಕೆಎಂಎಫ್ ಸಂಗ್ರಹಿಸುತ್ತಿದೆ. ಇದೂ ಕೂಡ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಪ್ರಸ್ತುತ ಪ್ರತಿ ದಿನ ಸುಮಾರು 28 ಲಕ್ಷ ಲೀಟರುಗಳಷ್ಟು ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯದ ಪಶುಪಾಲಕರಿಗೆ ಪ್ರತಿ ದಿನ ಸುಮಾರು 11 ಕೋಟಿ ರೂಪಾಯಿಗಳಷ್ಟು ಹಣ ಕೈತಪ್ಪಿ ಹೋಗುತ್ತಿದೆ ಎಂದು ಆರೋಪಿಸಿದರು.
ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಕಾರಗಳ ಹಾದಿ ತಪ್ಪಿದ ಅಡ್ಡ ಕಸುಬಿ ನೀತಿಗಳೆ ನೇರ ಕಾರಣ ಇದಕ್ಕೆ ಕಾರಣ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯ ದುಷ್ಟ ಆಡಳಿತದಿಂದಾಗಿ ನಮ್ಮ ನಾಡಿನ ಪ್ರತಿಷ್ಠಿತ ಸಂಸ್ಥೆಯಾದ ಕೆಂಎಂಎಫ್‍ಗೆ ಇಂದು ಈ ಗಂಡಾಂತರ ಬಂದೊದಗಿದೆ. ಗುಜರಾತ್ ಮೂಲದ ರಾಜಕಾರಣಿಗಳು ಮತ್ತು ವ್ಯಾಪಾರಿಗಳ ಕಣ್ಣು ನಮ್ಮ ಕೆಎಂಎಫ್ ಮೇಲೆ ಬಿದ್ದಾಗಿನಿಂದ ರಾಜ್ಯದ ಹೈನು ಉದ್ಯಮಕ್ಕೆ ಗರ ಬಡಿದಂತಾಗಿದೆ. ಇವರಿಂದಾಗಿ ರಾಜ್ಯದ ರೈತರಿಗೂ ಸಂಕಷ್ಟ ಬಂದೊದಗಿದೆ. ಕೊಳ್ಳುವ ಗ್ರಾಹಕರೂ ವಿಪರೀತ ಸಂಕಷ್ಟ ಅನುಭವಿಸುತ್ತಿದ್ದಾರೆ. ನಂದಿನಿ ಮಳಿಗೆಗಳಲ್ಲಿ ಕಲಬೆರಕೆ ತುಪ್ಪವೂ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಜನರು ದೂರುತ್ತಿದ್ದಾರೆ. ಜನರಿಗೆ ಉತ್ತಮ ನಂದಿನಿ ತುಪ್ಪ ಸೇರಿದಂತೆ ಗುಣಮಟ್ಟದ ಪದಾರ್ಥಗಳು ಸಿಗುತ್ತಿಲ್ಲ. ಕೊಳ್ಳುವ ಗ್ರಾಹಕರ ಕೈ ಸುಡುವಷ್ಟು ಮಟ್ಟಿಗೆ ಬೆಲೆಗಳು ಏರಿಕೆಯಾಗಿವೆ ಎಂದು ಹೇಳಿದರು.
ಗೋಶಾಲೆಯ ಜನಿಸಿದ ಕರುಗಳು ಎಲ್ಲಿಗೆ ಹೋಗುತ್ತಿವೆ?
ಬಿಜೆಪಿ ಸರ್ಕಾರವೆ ನನಗೆ ಕೊಟ್ಟಿರುವ ಮಾಹಿತಿ ಪ್ರಕಾರ 2019 ರಲ್ಲಿ 1.29 ಕೋಟಿ ಹಸು ಎಮ್ಮೆ, ಎತ್ತು, ಕೋಣಗಳಿದ್ದವು. ಅವು 2022 ರ ಡಿಸೆಂಬರ್ ವೇಳೆಗೆ 1.15 ಕೋಟಿ ಇಳಿಕೆಯಾಗಿವೆ. ಈ 14 ಲಕ್ಷ ಜಾನುವಾರುಗಳು ಎಲ್ಲಿಗೆ ಹೋದವು? ವರ್ಷದಿಂದ ವರ್ಷಕ್ಕೆ ಜಾನುವಾರುಗಳ ಸಂಖ್ಯೆ ಹೆಚ್ಚಾಗುವುದರ ಬದಲಿಗೆ ಕಡಿಮೆಯಾಗುವುದಕ್ಕೆ ಕಾರಣಗಳೇನು? ಸರ್ಕಾರವೆ ನನಗೆ ಕೊಟ್ಟಿರುವ ಮಾಹಿತಿಯ ಪ್ರಕಾರ, ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಬಹುತೇಕ ಗೋಶಾಲೆಗಳಲ್ಲಿ ಗಂಡು ಕರುಗಳ ಪ್ರಮಾಣ ಶೇ.10 ಕ್ಕಿಂತ ಕಡಿಮೆ ಇದೆ. ನಿಸರ್ಗ ತತ್ವದ ಪ್ರಕಾರ ಶೇ.50 ರಷ್ಟು ಗಂಡು ಕರುಗಳು ಹುಟ್ಟುತ್ತವೆ. ಹಾಗಿದ್ದರೆ ಹುಟ್ಟಿದ ಗಂಡುಕರುಗಳು ಎಲ್ಲಿಗೆ ಹೋಗುತ್ತಿವೆ? ಸಬರ್‍ವಾಲ್‍ಗಳು, ಬಿಂದ್ರಾಗಳು, ಜೈನ್‍ಗಳು, ಶರ್ಮಾ ಮುಂತಾದವರು ಮಾಡುತ್ತಿರುವ ಬೀಫ್ ಎಕ್ಸ್‍ಪೋರ್ಟ್ ಪ್ರಮಾಣ ಸಾವಿರಾರು ಕೋಟಿಗಳಿಗೆ ಏರಿಕೆಯಾಗಿರುವುದಾಗಿ ವರದಿಗಳಿವೆ.ಹಾಗಿದ್ದರೆ ಯಾರ ಅಭಯದಿಂದ ಇವರೆಲ್ಲ ಎಕ್ಸ್‍ಪೋರ್ಟ್ ಮಾಡುತ್ತಿದ್ದಾರೆ? ಇದಕ್ಕೆಲ್ಲ ಬಿಜೆಪಿ ಸರ್ಕಾರಗಳು ಉತ್ತರ ಹೇಳಬೇಕು ಎಂದು ಹರಿಹಾಯ್ದರು.

ಕಳೆದ 5 ವರ್ಷಗಳಲ್ಲಿ ಜಾನುವಾರುಗಳಿಗೆ ನೀಡುವ ಹಿಂಡಿ, ಬೂಸಾ ಮುಂತಾದ ಪಶು ಆಹಾರದ ಬೆಲೆಗಳು 3 ಪಟ್ಟಿಗೂ ಹೆಚ್ಚಾಗಿವೆ. 2017-18ಕ್ಕೂ ಮೊದಲು 49 ಕೆಜಿ ಬೂಸಾದ ಬೆಲೆ 450 ರೂ ಇದ್ದದ್ದು ಈಗ 1300 ರಿಂದ 1350 ರೂಗಳಿಗೆ ಏರಿಕೆಯಾಗಿದೆ. 30 ಕೆಜಿ ಹಿಂಡಿಯ ಬೆಲೆ 400 ರೂ ಇದ್ದದ್ದು ಈಗ 1500 ಕ್ಕೂ ಹೆಚ್ಚಾಗಿದೆ. ಆದರೆ ಹಾಲಿನ ದರಗಳು ಮಾತ್ರ ಹೆಚ್ಚಾಗಿಲ್ಲ. ಇದರಿಂದಾಗಿ ನಮ್ಮ ರೈತರು ಜಾನುವಾರುಗಳನ್ನು ಸಾಕಣೆ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂದರು.
ದುಷ್ಟ ಬಿಜೆಪಿ ಸರ್ಕಾರ ಸರ್ಕಾರಿ ಕಾವಲು ಜಮೀನುಗಳನ್ನು, ಡಿನೋಟಿಫೈ ಮಾಡಿ ಉಳ್ಳವರಿಗೆ, ಆರೆಸ್ಸೆಸ್ಸಿನವರಿಗೆ, ಬಂಡವಾಳಿಗರಿಗೆ ಹಂಚಲು ಪ್ರಾರಂಭಿಸಿದೆ. ಟಿಪ್ಪುಸುಲ್ತಾನನ ದೂರದೃಷ್ಟಿಯ ಕಾರಣದಿಂದ ಹಳೆ ಮೈಸೂರು ಭಾಗದಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ‘ಅಮೃತ್ ಮಹಲ್ ಕಾವಲು’ಗಳೆಂದು ಮೀಸಲಿರಿಸಲಾಗಿತ್ತು. ಇದರಲ್ಲಿ ಚಿತ್ರದುರ್ಗ ಜಿಲ್ಲೆಯೊಂದರಲ್ಲೆ 23189 ಎಕರೆಗೂ ಹೆಚ್ಚಿನ ಭೂಮಿಯನ್ನು ಅಮೃತ್ ಮಹಲ್ ಕಾವಲ್ ಎಂದು ಕಾಯ್ದಿರಿಸಿದ್ದ. ಬ್ರಿಟಿಷ್ ಸರ್ಕಾರ, ಮೈಸೂರು ಅರಸರ ಆಡಳಿತಗಳೂ ಕೂಡ ಕಾವಲುಗಳನ್ನು ಕಾಪಾಡಿಕೊಂಡು ಬಂದಿದ್ದವು. ಸ್ವಾತಂತ್ರ್ಯಾ ನಂತರದ ಸರ್ಕಾರಗಳು ಅನಿವಾರ್ಯ ಕಾರಣಗಳಲ್ಲದೆ ಇನ್ನಿತರೆ ಉದ್ದೇಶಗಳಿಗೆ ಈ ಜಮೀನುಗಳನ್ನು ಮುಟ್ಟಿರಲಿಲ್ಲ. ಆದರೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಈ ಜಮೀನುಗಳ ಮೇಲೆ ಕಣ್ಣು ಹಾಕಿದೆ. ಚಿತ್ರದುರ್ಗದ ಪಶುಪಾಲಕರ ಬೆನ್ನಿಗೆ ಇರಿಯಲು ನಿಂತಿರುವ ಈ ಸರ್ಕಾರ ಸಾವಿರಗಟ್ಟಲೆ ಎಕರೆಗಳನ್ನು ಡಿನೋಟಿಫೈ ಮಾಡಲು ಮುಂದಾಗಿದೆ. ಇದು ಅಕ್ಷಮ್ಯ. ಜಾನುವಾರುಗಳ ಸಂರಕ್ಷಣೆ ಮತ್ತು ಅವುಗಳಿಗೆ ಆಹಾರವಿಲ್ಲದಂತೆ ಮಾಡುವುದು ಇವೆರಡೂ ಸಹ ಎಂದಿಗೂ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಆದರೂ ಜನದ್ರೋಹಿಯಾದ ಬಿಜೆಪಿ ಹುಲ್ಲುಗಾವಲುಗಳನ್ನು ಜನರಿಂದ ಕಿತ್ತುಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿದರು.
ಸರ್ಕಾರ ಕೂಡಲೆ ಎಲ್ಲ ಹುಲ್ಲುಗಾವಲುಗಳನ್ನು
ಆರೆಸ್ಸೆಸ್ಸಿಗೆ ಸರ್ಕಾರಿ ಜಮೀನುಗಳನ್ನು ಮನಸೋ ಇಚ್ಛೆ ನೀಡಲಾಗುತ್ತಿದೆ. ನಮ್ಮ ರೈತರ ಜಾನುವಾರುಗಳು ಮೇಯಲು ಜಾಗ ಇಲ್ಲದಂತಾಗಿದೆ. ಇದನ್ನು ಕೂಡಲೆ ನಿಲ್ಲಿಸಿ ರಾಜ್ಯದಲ್ಲಿರುವ ಎಲ್ಲ ಮೇವಿನ ಕ್ಷೇತ್ರಗಳನ್ನು ಉಳಿಸಬೇಕು. ಸರ್ಕಾರ ಕೂಡಲೆ ಮಧ್ಯ ಪ್ರವೇಶಿಸಿ ರೈತರು ಮತ್ತು ಗ್ರಾಹಕರ ಇಬ್ಬರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ವೈಜ್ಞಾನಿಕವಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಪಶುಭಾಗ್ಯ ಯೋಜನೆಯನ್ನು ಸಶಕ್ತಗೊಳಿಸಬೇಕು. ರೈತರಿಗೆ ಸಂಭವಿಸುತ್ತಿರುವ ನಷ್ಟವನ್ನು ಸರ್ಕಾರ ತುಂಬಿಕೊಡಬೇಕು. ಹಿಂಡಿ ಬೂಸಾ ಸೇರಿದಂತೆ ಎಲ್ಲ ಪಶು ಆಹಾರಗಳ ಬೆಲೆಯನ್ನು ಕಡಿಮೆ ಮಾಡಿ ರಿಯಾಯಿತಿ ದರದಲ್ಲಿ ಒದಗಿಸಬೇಕು. ಹಿಂಡಿಯ ಮೇಲಿನ ಜಿಎಸ್’ಟಿಯನ್ನು ಕೂಡಲೆ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.












