ಲೋಕಸಭಾ ಚುನಾವಣೆಗೆ ಕಾಂಗ್ರೆಸ್ಗೆ ಸವಾಲು ಎನ್ನುವ ರೀತಿಯಲ್ಲಿ ಕೇಸರಿ ಪಡೆ ಸಜ್ಜಾಗುತ್ತಿದೆ. ಅದರಲ್ಲೂ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ನೇಮಕಗೊಂಡ ಬಳಿಕ ಎಲ್ಲಾ ಚಟುವಟಿಕೆಗಳು ಚುರುಕು ಪಡೆದಿವೆ. ಬಿಜೆಪಿ ಹೈಕಮಾಂಡ್ ಕೂಡ ಬಿ.ವೈ ವಿಜಯೇಂದ್ರ ನಿರ್ಧಾರಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಿದೆ. ಆದರೆ ಈಗಾಗಲೇ ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣ ವಿಜಯೇಂದ್ರ ನಿರ್ಧಾರದ ವಿರುದ್ಧ ತಿರುಗಿ ಬೀಳುತ್ತಿದೆ. ಅದರಲ್ಲೂ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ನೇರವಾಗಿಯೇ ವಾಗ್ದಾಳಿ ಮಾಡುತ್ತಿದ್ದಾರೆ. ಇದು ಬಿಜೆಪಿಗೆ ಭಾರೀ ದೊಡ್ಡ ಪಟ್ಟನ್ನು ಕೊಡುವ ಸಾಧ್ಯತೆ ಇದೆ. ಹೈಕಮಾಂಡ್ ನಾಯಕರು ಮಾತುಗಳಿಗೆ ಕಡಿವಾಣ ಹಾಕದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಭಾರೀ ಬೆಲೆಯನ್ನು ತೆರಬೇಕಿದೆ.
ಹೈಕಮಾಂಡ್ ನಾಯಕರನ್ನು ಬೆದರಿಸಿದ್ರಾ ಯಡಿಯೂರಪ್ಪ..?
ಲೋಕಸಭಾ ಚುನಾವಣೆ ತನಕ ಮಾತ್ರ ಈಗಿರುವ ಟೀಂ ಇರಲಿದೆ ಎಂದಿರುವ ಯತ್ನಾಳ್, ಚುನಾವಣೆ ಬಳಿಕ ಒಂದೇ ಒಂದು ಸೀಟ್ ಕಡಿಮೆ ಆದರೂ ಸಿಗರೇಟ್ ಪ್ಯಾಕೇಟ್‌ನಿಂದ ಆಟವಾಡಲು ಜೋಡಿಸಿದ ಗೋಪುರ ಬೀಳುವಂತೆ ಬಿದ್ದು ಬಿಡುತ್ತೆ ಎಂದಿದ್ದಾರೆ. ಬಿಜೆಪಿಯಲ್ಲಿ ಸ್ಥಾನಮಾನ ಹಂಚಿಕೆ ವಿಚಾರದ ಬಗ್ಗೆ ನನಗೇನು ನಿರಾಸೆ ಆಗಿಲ್ಲ. ಪಕ್ಷದಲ್ಲಿ ಲಂಪಟರದ್ದೆ ಜಾಸ್ತಿ ಆಗಿದೆ, ಮೌಲ್ಯಾಧಾರಿತ ರಾಜಕಾರಣ ಇಲ್ಲ. ಹಲ್ಕಾ ಕೆಲಸ ಮಾಡ್ತಾರೆ, ಕಳ್ಳರೆ ಲಫಂಗರೆ ಹೆಚ್ಚು ಸೇರ್ತಿದ್ದಾರೆ. ಒಳ್ಳೆಯವರಿಗೆ ಬ್ಲಾಕ್ ಮೇಲ್ ಮಾಡ್ತಾರೆ. ನಾನು ಒಳ್ಳೆ ಕೆಲಸ ಮಾಡಿದ್ದೇನೆ ಆತ್ಮತೃಪ್ತಿ ಇದೆ ಎಂದಿದ್ದಾರೆ ಯತ್ನಾಳ್. ಲೋಕಸಭೆ ಚುನಾವಣೆ ಬಳಿಕ ಹೊಸ ತಿರುವು ಎಂದಿದ್ದಾರೆ. 2024 ಲೋಕಸಭೆ ಚುನಾವಣೆ ಬಳಿಕ ಮೇಜರ್ ಆಫರೇಷನ್ ಮಾಡದೆ ಇದ್ದರೇ ಮುಂದಿನ ನಿರ್ಣಯ ಮಾಡ್ತೇವೆ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದಾರೆ ಯತ್ನಾಳ್.
ಯತ್ನಾಳ್ ಪಕ್ಷ ವಿರೋಧಿ ಕೆಲಸ ಮಾಡ್ತಾರಾ..?
ಕಟ್ಟರ್ ಹಿಂದುತ್ವವಾದಿ ಆಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷ ವಿರೋಧಿ ಕೆಲಸ ಮಾಡುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ರಾಜಕೀಯವಾಗಿ ರಾಜ್ಯ ಮಟ್ಟದಲ್ಲಿ ಮತಗಳ ವಿಭಜನೆ ಮಾಡುವ ಶಕ್ತಿ ಇಲ್ಲದಿದ್ದರೂ ಕೆಲವೊಂದಿಷ್ಟು ಅಭಿಮಾನಿಗಳನ್ನು ನಿಶ್ಚಯವಾಗಿ ಯತ್ನಾಳ್ ಹೊಂದಿದ್ದಾರೆ. ಆ ಮತಗಳು ಬಿಜೆಪಿಯಿಂದ ದೂರ ಆಗುವ ಆತಂಕ ಎದುರಾಗಿದೆ. ಒಂದೆರಡು ಸಾವಿರ ಮತಗಳು ಕಾಂಗ್ರೆಸ್ ಪರವಾಗಿ ವಾಲಿದರೂ ಕೇಸರಿ ಪಾಳಯಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ. ಯತ್ನಾಳ್ ಇದೇ ರೀತಿ ತನ್ನ ಹೇಳಿಕೆಯಿಂದಲ ಪಕ್ಷಕ್ಕೆ ಬಿರುಕು ಮೂಡಿಸುತ್ತಲೇ ಇದ್ದರೆ ಲೋಕಸಭಾ ಚುನಾವಣೆಯಲ್ಲಿ ಸಣ್ಣ ಪ್ರಮಾಣದಲ್ಲಿ ಆದರೂ ಪೆಟ್ಟು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಹೈಕಮಾಂಡ್ ನಾಯಕರು ಕೂಡ ಯತ್ನಾಳ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾದರೂ ಸಂಕಷ್ಟ ಇದೆ.
ಕಾಂಗ್ರೆಸ್ಗೆ ಲಾಭ ಆಗುವುದು ನಿಶ್ಚಯ.. ಬಿಜೆಪಿಗೆ ಬಲಿ..
ಭಾರತೀಯ ಜನತಾ ಪಾರ್ಟಿಯಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟು ಬೇರೊಂದು ಟೀಂ ಜೊತೆಗೆ ಹೋಗಿದ್ದರ ಉದ್ದೇಶ ಯಡಿಯೂರಪ್ಪ ಅವರ ಕುಟುಂಬದ ಹೊರತಾಗಿ ರಾಜಕಾರಣ ಮಾಡಬೇಕು ಎನ್ನುವುದು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರದ ಪರಿಣಾಮ ಏನು ಅನ್ನೋದು ಬಯಲಾಗಿತ್ತು. ತಪ್ಪನ್ನು ಸರಿ ಮಾಡಿಕೊಳ್ಳಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ನಾಯಕರು ಮತ್ತೆ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಮಣೆ ಹಾಕಿದ್ದಾರೆ. ಆದರೆ ಯತ್ನಾಳ್ ವಿರೋಧಿಸಿ ಮಾತನ್ನಾಡುತ್ತಲೇ ಇದ್ದಾರೆ. ಹೈಕಮಾಂಡ್ ನಾಯಕರು ಯಾವುದೇ ಗಟ್ಟಿ ನಿರ್ಧಾರ ಮಾಡದೆ ವೀಕ್ನೆಸ್ ತೋರಿಸುತ್ತಿದ್ದಾರೆ. ಒಂದು ವೇಳೆ ಯತ್ನಾಳ್ರನ್ನು ಪಕ್ಷದಿಂದ ಉಚ್ಛಾಟನೆ ಮಾಡಿದರೂ ಬಿಜೆಪಿಗೆ ಸಂಕಷ್ಟ ಎದುರಾಗುತ್ತದೆ. ಯತ್ನಾಳ್ ಮಾತನಾಡಿದಂತೆ ಮಾತನಾಡಲು ಬಿಟ್ಟರೂ ಬಿಜೆಪಿಗೆ ಲಾಭ ಆಗುವುದಿಲ್ಲ. ಆದರೂ ಯತ್ನಾಳ್ ಬಿಜೆಪಿಗೆ ಬಿಸಿ ತುಪ್ಪ ಆಗಿದ್ದಾರೆ. ಈ ಬಿಸಿ ತುಪ್ಪವನ್ನು ಬಿಜೆಪಿ ಏನು ಮಾಡುತ್ತದೆ ಅನ್ನೋದೇ ಕುತೂಹಲ.
ಕೃಷ್ಣಮಣಿ