ರಾಜ್ಯ ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಹಿಡಿತವನ್ನು ತಪ್ಪಿಸಬೇಕು ಎನ್ನುವ ನಿರ್ಧಾರ ಮಾಡಲಾಗಿದೆ. ಅದೇ ಕಾರಣಕ್ಕೆ ಯಡಿಯೂರಪ್ಪ ಮತ್ತು ಬಿ.ವೈ ವಿಜಯೇಂದ್ರ ಅವರನ್ನು ಪಕ್ಷದ ಕಾರ್ಯ ಚಟುವಟಿಕೆಯಿಂದ ದೂರ ಸರಿಸುವ ಕೆಲಸ ಮಾಡಲಾಗ್ತಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಶಿವಮೊಗ್ಗದ ಶಿಕಾರಿಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತಾ B.S ಯಡಿಯೂರಪ್ಪ ಘೋಷಣೆ ಮಾಡಿದ ಬಳಿಕವೂ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ವಿಧಾನಸಭಾ ಚುನಾವಣೆಗೆ ಸ್ಪರ್ಧೆಗೆ ಕ್ಷೇತ್ರ ಯಾವುದು ಅಂತಾ ಹೈಕಮಾಂಡ್ ನಿರ್ಧಾರ ಮಾಡಿಲ್ಲ. ಒಂದು ಕ್ಷೇತ್ರದಿಂದ ತಯಾರಿ ಮಾಡಿಕೊಳ್ಳಲು ಅವಕಾಶ ಕೊಟ್ಟಿಲ್ಲ. ಹೈಕಮಾಂಡ್ ನಾಯಕರು ಯಡಿಯೂರಪ್ಪ ಅಂಡ್ ಸನ್ಸ್ಗೆ ಇಷ್ಟೆಲ್ಲಾ ಕಿರಿಕಿರಿ ಕೊಟ್ಟರೂ ಬಿಜೆಪಿ ಶಾಸಕರಿಗೆ ಯಡಿಯೂರಪ್ಪ ಬೇಕಾಗಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಮಾಡಿದರೆ ಗೆಲುವು ಕಷ್ಟ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದೇ ಕಾತರಣಕ್ಕೆ ಹೈಕಮಾಂಡ್ಗೂ ಪತ್ರ ಬರೆದಿದ್ದಾರೆ ಎನ್ನುವ ಮಾಹಿತಿ ಕಾಂಗ್ರೆಸ್ ಪಾಳಯದಿಂದ ಬಹಿರಂಗ ಆಗಿದೆ.
ಬಸವರಾಜ ಬೊಮ್ಮಾಯಿ ಮೇಲೆ ವಿಶ್ವಾಸ ಕಳೆದುಕೊಂಡ ಶಾಸಕರು..!
ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಸೇರಿದಂತೆ ಬಿಜೆಪಿ ಶಾಸಕರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಾ ಊರೂರು ಸುತ್ತುತ್ತಿದ್ದಾರೆ. ವಿಧಾನಸೌಧ ಖಾಲಿ ಮಾಡಿಕೊಂಡು ಕ್ಷೇತ್ರದಲ್ಲಿ ಬೀಡು ಬಿಟ್ಟಿರುವ ಶಾಸಕರು B.S ಯಡಿಯೂರಪ್ಪ ಅವರನ್ನು ಪ್ರಚಾರಕ್ಕೆ ಬರುವಂತೆ ದುಂಬಾಲು ಬಿದ್ದಿದ್ದಾರೆ. ಸಾಕಷ್ಟು ಕ್ಷೇತ್ರಗಳಲ್ಲಿ ಯಡಿಯೂರಪ್ಪ ಪ್ರಚಾರ ಮಾಡಿದ್ರೆ ಮಾತ್ರ ಗೆಲುವು ಸಾಧ್ಯ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಅದರಲ್ಲೂ ವೀರಶೈವ ಲಿಂಗಾಯತ ಮತದಾರರು ಹೆಚ್ಚಿರುವ ಕ್ಷೇತ್ರಗಳಲ್ಲಿ ಬಿ.ಎಸ್ ಯಡಿಯೂರಪ್ಪ ಒಮ್ಮೆಯಾದರೂ ನಮ್ಮ ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿದರೆ ಮಾತ್ರ ಗೆಲುವು ದಕ್ಕಲಿದೆ ಎನ್ನುತ್ತಿದ್ದಾರೆ. ಆದರೆ ಭಾರತೀಯ ಜನತಾ ಪಾರ್ಟಿಯ ಅಧಿಕೃತ ಕಾರ್ಯಕ್ರಮಗಳ ಪಟ್ಟಿಯಲ್ಲಿ ಯಡಿಯೂರಪ್ಪ ಅವರನ್ನು ಸೇರಿಸುತ್ತಿಲ್ಲ. ಇದು ಬಿಜೆಪಿ ಶಾಸಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹಳೆ ಮೈಸೂರು ಭಾಗ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕದ ಕಡೆಯಲ್ಲೂ ಯಡಿಯೂರಪ್ಪ ಪ್ರವಾಸಕ್ಕೆ ಒತ್ತಡ ಕೇಳಿ ಬರುತ್ತಿದೆ.

ಯಡಿಯೂರಪ್ಪ ಕರೆಸಿ ಖಾಸಗಿ ಕಾರ್ಯಕ್ರಮಕ್ಕೆ ಸಿದ್ಧತೆ..!
ಬಿ.ಎಲ್ ಸಂತೋಷ್ ಸೇರಿದಂತೆ ರಾಷ್ಟ್ರೀಯ ನಾಯಕರು ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದಾರೆ. ನಾಮಕಾವಸ್ತೆಗೆ ಮಾತ್ರ ಯಡಿಯೂರಪ್ಪ ಅವರನ್ನು ಕರೆಯುವ ಬಿಜೆಪಿ ಬೇರೆಲ್ಲಾ ಕಾರ್ಯಕ್ರಮಗಳಿಂದ ದೂರ ಇಟ್ಟಿದ್ದಾರೆ. ಹೀಗಾಗಿ ಯಡಿಯೂರಪ್ಪ ಬೇಕೇಬೇಕು ಎನ್ನುವ ಕ್ಷೇತ್ರದ ನಾಯಕರು, ಶಾಸಕರು ಕ್ಷೇತ್ರದಲ್ಲಿ ಸಾಕಷ್ಟು ಖಾಸಗಿ ಕಾರ್ಯಕ್ರಮ ಆಯೋಜನೆ ಮಾಡಲು ನಿರ್ಧಾರ ಮಾಡಿದ್ದಾರೆ. ಈ ಮೂಲಕ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನು ಕ್ಷೇತ್ರಕ್ಕೆ ಕರೆಸಿ ಪ್ರಚಾರ ಮಾಡಿಸಿಕೊಳ್ಳುವುದು. ಮತದಾರರಿಗೆ ಗೆಲ್ಲಿಸುವಂತೆ ಯಡಿಯೂರಪ್ಪ ಕರೆ ಕೊಟ್ಟರೆ ಮತಗಳು ಒಟ್ಟುಗೂಡುತ್ತವೆ. ಬಿಜೆಪಿಯಲ್ಲಿ ವೀರಶೈವ ಲಿಂಗಾಯತ ಪ್ರಬಾವಿ ನಾಯಕತ್ವ ಇಲ್ಲದೆ ಇರುವುದನ್ನು ಕಾಂಗ್ರೆಸ್ ಲಾಭ ಮಾಡಿಕೊಳ್ತಿದೆ. ಈಗಾಗಲೇ ಪಂಚಮಸಾಲಿ ಸಮುದಾಯ ಬಿಜೆಪಿ ವಿರುದ್ಧ ಕೆಂಗಣ್ಣು ಬೀರಿದೆ. ಯಡಿಯೂರಪ್ಪ ಕೂಡ ಕೈಬಿಟ್ಟರೆ ಸೋಲುವುದು ಖಚಿತ. ಹೀಗಾಗಿ ಪಕ್ಷವನ್ನೂ ಮೀರಿ ಯಡಿಯೂರಪ್ಪ ಮೂಲಕ ಪ್ರಚಾರ ಮಾಡಿಸಲು ಒತ್ತಡ ಕೇಳಿಬಂದಿದೆ.
ಹೈಕಮಾಂಡ್ ನಿರ್ಧಾರಕ್ಕೆ ಸಡ್ಡು ಹೊಡೆದ ಶಾಸಕರು..!?
ರಾಜ್ಯ ಬಿಜೆಪಿಯಲ್ಲಿ ಏನಾಗ್ತಿದೆ ಎನ್ನುವುದು ಸ್ವತಃ ಮುಖ್ಯಮಂತ್ರಿ ಹಾಗು ಬಿಜೆಪಿ ನಾಯಕರಿಗೂ ಮಾಹಿತಿ ಇಲ್ಲ. ದೆಹಲಿಯಿಂದ ಬಿಜೆಪಿ ಹೈಕಮಾಂಡ್ ಏನು ಹೇಳುತ್ತೋ ಅದನ್ನು ಇಲ್ಲಿನ ನಾಯಕರು ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಈ ಬಗ್ಗೆ ಆರೋಪ ಮಾಡಿದ್ದು, ಬಿಎಸ್ ಯಡಿಯೂರಪ್ಪ ಅವರನ್ನು ಪ್ರಚಾರಕ್ಕೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸಿದರೆ ಗೆಲುವು ಕಷ್ಟ ಅನ್ನೋ ವಿಚಾರವನ್ನು ಹೈಕಮಾಂಡ್ಗೆ ಪತ್ರ ನೀಡುವ ಮೂಲಕ ಎಚ್ಚರಿಸಿದ್ದಾರೆ. ಯಡಿಯೂರಪ್ಪ ಅವರನ್ನು ಈ ಚುನಾವಣೆಯಿಂದ ದೂರ ಸರಿಸುವ ಉದ್ದೇಶದಲ್ಲಿರುವ ಬಿಜೆಪಿ ಹೈಕಮಾಂಡ್ಗೆ ಇರಿಸು ಮುರುಸು ಉಂಟಾಗಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಯಡಿಯೂರಪ್ಪ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನುವ ಸ್ಫೋಟಕ ಮಾಹಿತಿಯನ್ನು ರಮೇಶ್ ಬಾಬು ನೀಡಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಸಿಎಂ ಬಸವರಾಜ ಬೊಮ್ಮಾಯಿ ಈ ನಿರ್ಧಾರ ಮಾಡಿದ್ದಾರಾ..? ಗೊತ್ತಿಲ್ಲ. ಆದರೆ ಯಡಿಯೂರಪ್ಪ ಇಲ್ಲದೆ ಹೋದರೆ ಗೆಲ್ಲುವುದು ಬಿಜೆಪಿ ಶಾಸಕರಿಗೆ ಕಷ್ಟ ಎನ್ನುವುದು ಮಾತ್ರ ಸತ್ಯ.