ಇಡೀ ವಿಶ್ವವೇ ಎದುರು ನೋಡುತ್ತಿರುವ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದು, ರಾಮಮಂದಿರ ಉದ್ಘಾಟನೆಗೆ ಕೆಲವೇ ದಿನಗಳು ಬಾಕಿಯಳಿದಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಮತ್ತೊಮ್ಮೆ ಹಿಂದೂ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ನಡುವೆ ಜಟಾಪಟಿ ಶುರುವಾಗುವ ಸಾಧ್ಯತೆಗಳು ಹೆಚ್ಚಾಗಿದೆ.
ಹುಬ್ಬಳ್ಳಿಯಲ್ಲಿ 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಹುಬ್ಬಳ್ಳಿಯಲ್ಲಿ ನಡೆದ ರಾಮಮಂದಿರ ಆಂದೋಲನದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸಿರುವ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಸಮರ ಶುರುವಾಗಿದೆ. ಇದರ ಬೆನ್ನಲ್ಲೇ ಹಿಂದೂ ಕಾರ್ಯಕರ್ತನ ಬಂಧನದಿಂದಾಗಿ ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರವು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನದ ಹಿಂದೆ ಯಾವುದೇ ರಾಜಕೀಯ ದ್ವೇಷ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರೂ, ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರು ಈ ವಿಚಾರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರ್ಕಾರದ ಈ ನಡೆಯನ್ನು ಖಂಡಿಸಿರುವ ಬಿಜೆಪಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ಕರ್ನಾಟಕದಲ್ಲಿ ಕಾಂಗ್ರೆಸ್, ಹಿಂದೂ ಕಾರ್ಯಕರ್ತರನ್ನು ನಾಚಿಕೆಗೇಡಿನ ರೀತಿಯಲ್ಲಿ ಗುರಿಯಾಗಿಸುತ್ತದೆ, 31 ವರ್ಷ ಹಳೆಯದಾದ ನಕಲಿ ಪ್ರಕರಣದಲ್ಲಿ ಹಿರಿಯ ಕರಸೇವಕ ಶ್ರೀ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದೆ. ಹಿಂದೂಗಳು ರಾಮಮಂದಿರವನ್ನು ಆಚರಿಸುತ್ತಿರುವಾಗ, ಕಾಂಗ್ರೆಸ್‌ನ ಹೇಡಿತನದ ನಡೆ ಅವರು ವಾಸ್ತವವನ್ನು ಒಪ್ಪಿಕೊಳ್ಳಲು ನಿರಾಕರಿಸುವುದನ್ನು ಪ್ರತಿಬಿಂಬಿಸುತ್ತದೆ. ರಾಮಮಂದಿರ, ಹಿಂದೂಗಳ ವಿರುದ್ಧದ ಈ ಕ್ರಮ ಅತ್ಯಂತ ಖಂಡನೀಯ ಎಂದು ಬಿಜೆಪಿ ತನ್ನ X ಖಾತೆಯಲ್ಲಿ ಉಲ್ಲೇಖಿಸಿದೆ.
ಅಲ್ಲದೇ “ವಿನಾಶಕಾಲೆ ವಿಪರೀತ ದುರ್ಬುದ್ಧಿ” ಹಿಂದೂಗಳ ವಿರುದ್ಧ ದ್ವೇಷ ರಾಜಕಾರಣ ಮಾಡುವುದೇ ರಾಜ್ಯದ INC Karnataka ಸರ್ಕಾರದ ಆಡಳಿತ ಧ್ಯೇಯ. ಹಾಡುಹಗಲೇ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಜಿಹಾದಿಗಳಿಗೆ ಅಮಾಯಕರು, ಬ್ರದರ್ಸ್‌ಗಳು ಎಂಬ ಪಟ್ಟ ಕಟ್ಟುವ ಕಾಂಗ್ರೆಸ್, ಈಗ 31 ವರ್ಷಗಳ ಹಿಂದಿನ ಪ್ರಕರಣದ ತನಿಖೆಯನ್ನು ಪುನರಾರಂಭಿಸಿ, ಬಂಧಿಸುತ್ತಿರುವುದು ಕಾಂಗ್ರೆಸ್‌ನ ಹಿಂದೂ ವಿರೋಧಿ ರಾಜಕಾರಣದ ಸುಸ್ಪಷ್ಟ ನಿದರ್ಶನ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದನ್ನು ಸಹಿಸದ ಕಾಂಗ್ರೆಸ್, ಹಿಂದೂಗಳ ವಿರುದ್ಧ ಇನ್ನಿಲ್ಲದ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ AntiHinduCongress ಹ್ಯಾಶ್‌ಟ್ಯಾಗ್‌ನೊಂದಿಗೆ ತನ್ನ X ಖಾತೆಯಲ್ಲಿ ಟೀಕಿಸಿದೆ.