ಬಿಟ್ ಕಾಯಿನ್ ಹಗರಣ ಸರ್ಕಾರವನ್ನೇ ಬಲಿತೆಗೆದುಕೊಳ್ಳುವುದೆ? ಹೀಗೊಂದು ಪ್ರಶ್ನೆ ಕಳೆದ ನಾಲ್ಕೈದು ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಉಪ ಚುನಾವಣೆಯ ಕಣದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಟ್ ಕಾಯಿನ್ ದಂಧೆಯ ಕುರಿತು ಪ್ರಸ್ತಾಪಿಸುತ್ತಲೇ ಆಡಳಿತ ಪಕ್ಷದ ವಲಯದಲ್ಲಿ ಸಂಚಲನ ಉಂಟಾಗಿದೆ. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಮೈಮೇಲೆ ಬಿಸಿನೀರು ಸುರಿದಂತೆ ಬೆಚ್ಚಿ ಪ್ರತಿಕ್ರಿಯಿಸಿದ್ದಾರೆ. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ತತಕ್ಷಣದ ಪ್ರತಿಕ್ರಿಯೆ ನೀಡಿದ್ದು, ಹಗರಣದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂಬ ಮಾತನ್ನು ಹೇಳಿದ್ದಾರೆ.
ರಾಜ್ಯದ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿರುವ ಬಿಟ್ ಕಾಯಿನ್ ಮತ್ತು ಡ್ರಗ್ಸ್ ಹಗರಣವನ್ನು ಮುಚ್ಚಿಹಾಕುವ ಯತ್ನಗಳು ನಡೆಯುತ್ತಿವೆ. ಹಗರಣದಲ್ಲಿ ಅಧಿಕಾರರೂಢ ಪ್ರಭಾವಿ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಅದೇ ಕಾರಣಕ್ಕೆ ತನಿಖಾಧಿಕಾರಿಗಳು ಹಗರಣವನ್ನೇ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ. ಕೇಂದ್ರ ತನಿಖಾ ಸಂಸ್ಥೆಗಳ ಮೇಲೆ ಬಿಜೆಪಿ ಕೇಂದ್ರ ಸರ್ಕಾರ ಪ್ರಭಾವ ಬೀರಿ, ತನಿಖೆಯ ಹಾದಿ ತಪ್ಪಿಸಬಾರದು. ನಿಷ್ಪಕ್ಷಪಾತ ತನಿಖೆಗೆ ಅವಕಾಶ ನೀಡಬೇಕು ಮತ್ತು ಹಗರಣದ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಶಿಕ್ಷೆಯಾಗುವಂತೆ ಖಾತ್ರಿ ಪಡಿಸಬೇಕು ಎಂದು ಸಿದ್ದರಾಮಯ್ಯ ಗುರುವಾರ ಟ್ವೀಟ್ ಮಾಡುತ್ತಲೇ ಇಡೀ ಹಗರಣ ದಿಢೀರನೇ ಸಂಚಲನ ಸೃಷ್ಟಿಸಿತ್ತು.
ಅದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಗರಣವನ್ನು ಪ್ರಸ್ತಾಪಿಸಿ, “ಹಗರಣದಲ್ಲಿ ಕೇಳಿಬರುತ್ತಿರುವ ಹೆಸರುಗಳನ್ನು ನೋಡಿ ಶಾಕ್ ಆಗಿದೆ. ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು, ಉದ್ಯಮಿಗಳ ದೊಡ್ಡ ದೊಡ್ಡ ಹೆಸರುಗಳು ಕೇಳಿಬರುತ್ತಿವೆ. ಭಾರೀ ಪ್ರಮಾಣದ ವಹಿವಾಟು ನಡೆದಿದೆ. ಆ ಕುರಿತು ಮಾಹಿತಿ ಸಂಗ್ರಹಿಸುತ್ತಿರುವೆ” ಎಂದಿದ್ದರು.
ಈ ಹೇಳಿಕೆಗಳ ಬೆನ್ನಲ್ಲೇ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, “ಬಿಟ್ ಕಾಯಿನ್ ಮತ್ತು ಡ್ರಗ್ಸ್ ಹಗರಣ ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದೆ. ಹಾಗಾಗಿ ನಾವೇ ಈ ಬಗ್ಗೆ ತನಿಖೆಗಾಗಿ ಇಡಿ ಮತ್ತು ಸಿಬಿಐ ಇಂಟರ್ ಪೋಲ್ ಗೆ ಪತ್ರ ಬರೆದು ಶಿಫಾರಸು ಮಾಡಿದ್ದೇವೆ. ಈಗಾಗಲೇ ಆ ಎರಡೂ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿವೆ. ಯಾರನ್ನಾದರೂ ರಕ್ಷಿಸುವ ಉದ್ದೇಶವಿದ್ದಿದ್ದರೆ ಉನ್ನತ ತನಿಖೆಗೆ ಶಿಫಾರಸು ಮಾಡುತ್ತಿದ್ದರೆ?” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, 2018ರ ಯುಬಿ ಸಿಟಿ ಗಲಭೆ ಪ್ರಕರಣದಲ್ಲಿ ಈ ಬಹುಕೋಟಿ ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಕೂಡ ಆರೋಪಿಯಾಗಿದ್ದ. ಆದರೆ, ಅಂದಿನ ಸರ್ಕಾರ ಆತನ ವಿಚಾರಣೆ ನಡೆಸದೆ ಬಿಟ್ಟುಕಳಿಸಿತ್ತು. ಆ ಬಳಿಕ ಕಳೆದ ವರ್ಷ ಸಿಐಡಿ ಡ್ರಗ್ಸ್ ಪ್ರಕರಣದ ವಿಚಾರಣೆ ವೇಳೆ ಆತನ ವಶಕ್ಕೆ ಪಡೆದ ಬಳಿಕ ಹಗರಣ ಬಯಲಿದೆ ಬಂದಿದೆ ಎನ್ನುವ ಮೂಲಕ ಸಿಎಂ, ಕಾಂಗ್ರೆಸ್ ಮುಖಂಡರ ಪ್ರಶ್ನೆಯನ್ನು ತಿರುಗುಬಾಣ ಮಾಡಿದ್ದಾರೆ.
ಸಿಎಂ ಅವರ ಹೇಳಿಕೆಯ ಜೊತೆಯಲ್ಲೇ, ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ, ಪ್ರತಿಕ್ರಿಯಿಸಿದ್ದು, ಪ್ರಕರಣದಲ್ಲಿ ರಾಜಕಾರಣಿಗಳು, ಅಧಿಕಾರಿಗಳು, ಉದ್ಯಮಿಗಳು ಯಾರೇ ಇರಲಿ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಈಗಾಗಲೇ ಹಗರಣದ ಕುರಿತು ಸಿಐಡಿ ತನಿಖೆ ಕೂಡ ಮುಂದುವರಿದಿದೆ ಎಂದಿದ್ದಾರೆ.
ಹೀಗೆ ಆಡಳಿತ ಮತ್ತು ಪ್ರತಿಪಕ್ಷ ನಾಯಕರ ನಡುವೆ ಭಾರೀ ಹೇಳಿಕೆ- ಪ್ರತಿ ಹೇಳಿಕೆಗೆ ಕಾರಣವಾಗಿರುವ ಈ ಬಿಟ್ ಕಾಯಿನ್ ಹಗರಣದ ಇನ್ನಷ್ಟು ವಿವರಗಳು ಮಾಧ್ಯಮಗಳ ಮೂಲಕ ಹೊರಬರುತ್ತಿರುವ ಹೊತ್ತಿಗೇ, ಪೊಲೀಸ್ ಮತ್ತು ಆಡಳಿತ ಪಕ್ಷದ ವಲಯದಲ್ಲಿ ಹಲವು ಆಘಾತಕಾರಿ ಸಂಗತಿಗಳು ಚರ್ಚೆಗೊಳಗಾಗತೊಡಗಿವೆ.
ಮುಖ್ಯವಾಗಿ ಸರ್ಕಾರ ಪ್ರಮುಖರು ಮತ್ತು ಆಡಳಿತದ ಪಕ್ಷದ ಚುಕ್ಕಾಣಿ ಹಿಡಿದವರ ಕುಟುಂಬಸ್ಥರ ಹೆಸರುಗಳೇ ಆರೋಪಿ ಶ್ರೀಕಿ ಬಾಯಿಬಿಟ್ಟಿರುವ ಪಟ್ಟಿಯಲ್ಲಿವೆ. ಅದರಲ್ಲೂ ಸರ್ಕಾರದ ಮತ್ತು ಪಕ್ಷದ ಸೂತ್ರದಾರರು ಮತ್ತು ಪ್ರಮುಖ ಸಂಸದರೊಬ್ಬರ ಕುಟುಂಬಸ್ಥರ ಹೆಸರುಗಳು ಹಗರಣದಲ್ಲಿ ಕೇಳಿಬಂದಿವೆ. ಜೊತೆಗೆ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತ ಪಕ್ಷದ ಆಪ್ತ ಉದ್ಯಮಿಗಳ ಮಕ್ಕಳ ಹೆಸರುಗಳು ಕಾಣಿಸಿಕೊಂಡಿವೆ. ಹಾಗಾಗಿ, ಇಡಿ ಮತ್ತು ಸಿಬಿಐ ವಿಚಾರಣೆ ಕೈಗೆತ್ತಿಕೊಳ್ಳುವ ಮುನ್ನವೇ ಸಿಐಡಿ ಶ್ರೀಕಿ ಪ್ರಕರಣದಲ್ಲಿ ಸಲ್ಲಿಸಿದ ಎಫ್ ಐಆರ್ ಪರಿಶೀಲಿಸಿರುವ ಬಿಜೆಪಿ ಹೈಕಮಾಂಡ್ ದಿಗ್ಭ್ರಮೆಗೊಳಗಾಗಿದ್ದು, ಈಗಾಗಲೇ ಹಗರಣದ ಕುರಿತು ಎಪ್ ಬಿಐ ತನಿಖೆ ಕೂಡ ಆರಂಭವಾಗಿರುವುದರಿಂದ, ಖಂಡಿತವಾಗಿಯೂ ಇದು ಪಕ್ಷಕ್ಕೆ ದೊಡ್ಡ ಮುಜಗರ ತರಲಿದೆ ಎಂದು ಅಂದಾಜಿಸಿದೆ. ಆ ಹಿನ್ನೆಲೆಯಲ್ಲೇ ಈಗಾಗಲೇ ರಾಜ್ಯ ನಾಯಕರಿಗೆ ಎಚ್ಚರಿಕೆ ನೀಡಿದ್ದು, ಸಂದರ್ಭ ಬಂದರೆ ತಲೆದಂಡಕ್ಕೂ ಸಿದ್ಧವಾಗಿ ಎಂಬ ಸಂದೇಶ ರವಾನಿಸಿದೆ ಎಂಬುದು ಮೂಲಗಳ ಮಾಹಿತಿ.
ಮತ್ತೊಂದು ಕಡೆ ಹಗರಣದ ವಿವರಗಳನ್ನು ಪಡೆದುಕೊಂಡಿರುವ ಕಾಂಗ್ರೆಸ್ ನಾಯಕರು ಈ ವಿಷಯದಲ್ಲಿ ಆಡಳಿತ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರ ಹೆಣೆದಿದ್ದಾರೆ. ಅದರ ಸುಳಿವು ಅರಿತಿರುವ ಸರ್ಕಾರದ ಪ್ರಮುಖರು ರಹಸ್ಯ ಸ್ಥಳದಲ್ಲಿ ಮಾತುಕತೆ ನಡೆಸಿ, ಪ್ರತಿ ತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿಯೂ ಇದೆ. ಅಲ್ಲದೆ ಬಂಧಿತ ಆರೋಪಿ ಹ್ಯಾಕರ್ ಶ್ರೀಕಿಯ ತಂದೆ ಬಿಜೆಪಿಯ ಬೆಂಗಳೂರಿನ ಪ್ರಭಾವಿ ಸಚಿವರೊಬ್ಬರ ಪರಮಾಪ್ತ ಎಂಬ ಸಂಗತಿ ಕೂಡ ಇದೀಗ ಮುನ್ನೆಲೆಗೆ ಬಂದಿದ್ದು, ಶ್ರೀಕಿಯ ವಹಿವಾಟಿಗೂ ಆತನ ತಂದೆಗೂ ಏನು ನಂಟಿತ್ತು ಮತ್ತು ಆ ಮೂಲಕ ಸಚಿವರಿಗೂ ಹಗರಣಕ್ಕೂ ಏನಾದರೂ ನಂಟಿದೆಯೇ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಈ ನಡುವೆ, ಬರೋಬ್ಬರಿ ಹತ್ತು ಸಾವಿರ ಕೋಟಿ ರೂ.ನಷ್ಟು ಭಾರೀ ಮೊತ್ತದ ಈ ಹಗರಣ ರಾಜ್ಯ ಸರ್ಕಾರದ ಕುರ್ಚಿಗೇ ಕಂಟಕವಾಗಲಿದೆ. ಪ್ರಭಾವಿ ನಾಯಕರು, ಅಧಿಕಾರಿಗಳು ಮತ್ತು ಉದ್ಯಮಿಗಳು ಶ್ರೀಕಿಯ ಅಲಿಯಾಸ್ ಹ್ಯಾಕರ್ ಶ್ರೀಕೃಷ್ಣ ಅಕ್ರಮ ದಂಧೆಯ ಪಾಲುದಾರರು ಎಂಬ ಮಾಹಿತಿ ಪ್ರತಿಪಕ್ಷಗಳ ಕೈಸೇರಿರುವುದು ಆಡಳಿತ ಪಕ್ಷದಲ್ಲಿ ನಡುಕ ಹುಟ್ಟಿಸಿದೆ. ಬೀಸುವ ದೊಣ್ಣೆಯಿಂದ ಪಾರಾಗಲು ಸರ್ಕಾರದ ಪ್ರಮುಖರು ಇನ್ನಿಲ್ಲದ ಯತ್ನ ಆರಂಭಿಸಿದ್ದಾರೆ. ಆದರೆ, ಈಗಾಗಲೇ ಎಫ್ ಬಿಐ ನಂತಹ ಪ್ರಭಾವಿ ಅಂತಾರಾಷ್ಟ್ರೀಯ ಸಂಸ್ಥೆ ತನಿಖೆ ಆರಂಭಿಸಿರುವುದರಿಂದ ಹಗರಣದ ಪಾಲುದಾರರಿಗೆ ಈಗಲೇ ಜ್ವರ ಬಂದಿದೆ ಎಂಬ ಮಾತುಗಳೂ ಇವೆ.
ಒಟ್ಟಾರೆ, ಸದ್ಯ ಒಂದೆರಡು ದಿನಗಳಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಹಗರಣದ ಕುರಿತು ಭಾರೀ ಸಂಚಲನಕಾರಿ ಮಾಹಿತಿಯನ್ನೂ ಹೊರಹಾಕುವ ತಯಾರಿ ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ಹಗರಣ ರಾಜಕೀಯ ಬದಲಾವಣೆಯ ಬಿರುಗಾಳಿಯನ್ನೇ ಎದುರಿಸಿದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ!