ಹಾಸನ : ಮಲೆಮಹದೇಶ್ವರ ಬೆಟ್ಟದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರರಿಗೆ ಬೆಂಗಾವಲಾಗಿ ಬರುತ್ತಿದ್ದ ಪೊಲೀಸ್ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತ ಪಟ್ಟ ದಾರುಣ ಘಟನೆಯು ಹಾಸನ ಜಿಲ್ಲೆ ಅರಸಿಕೇರೆ ತಾಲೂಕಿನ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಸಂಭವಿಸಿದೆ. ಚಿಕ್ಕ ಗಂಡಸಿ ನಿವಾಸಿ ರಮೇಶ್ (45) ಮೃತ ದುರ್ದೈವಿ. ವಾಹನ ಸವಾರ ರಮೇಶ್ ಹೆಲ್ಮೆಟ್ ಧರಿಸದೇ ಇದ್ದದ್ದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ಮೃತ ರಮೇಶ್ ಮೃತದೇಹವನ್ನು ಹಾಸನ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ವಾಹನಕ್ಕೆ ಎಸ್ಕಾರ್ಟ್ ನೀಡುತ್ತಿದ್ದ ಡಿಆರ್ ಇನ್ಸ್ಪೆಕ್ಟರ್ ರಾಮು ಪೆಟ್ರೋಲ್ ಬಂಕ್ನಿಂದ ಮರಳುತ್ತಿದ್ದ ಸಂದರ್ಭದಲ್ಲಿ ರಮೇಶ್ ಬೈಕ್ನಲ್ಲಿ ಅಡ್ಡ ಬಂದಿದ್ದರು. ವಾಹನ ನಿಯಂತ್ರಿಸಲು ಸಾಧ್ಯವಾಗದೇ ಎಸ್ಕಾರ್ಟ್ ವಾಹನ ರಮೇಶ್ ಬೈಕ್ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಹಾಸನ ಎಸ್ಪಿ ಹರಿರಾಮ ಶಂಕರ್ಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ರಮೇಶ್ ಸಾವಿನ ಬಗ್ಗೆ ಬೇಸರ ವ್ಯಕ್ತಪಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಪೂರ್ಣಗೊಂಡು ರಮೇಶ್ ಮೃತದೇಹ ಕುಟುಂಬಸ್ಥರಿಗೆ ರವಾನೆ ಆಗುವವರೆಗೂ ಸ್ಥಳದಲ್ಲಿಯೇ ಹಾಜರಿರುವಂತೆ ಎಸ್ಪಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ರಮೇಶ್ ಅಪಘಾತದಿಂದ ಮೃತಪಟ್ಟಿದ್ದರೂ ಲೆಕ್ಕಿಸದೇ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳದಿಂದ ತೆರಳಿದ್ದಾರೆ ಎಂಬ ಸ್ಥಳೀಯರ ಆರೋಪಗಳಿಗೆ ಸ್ಪಷ್ಟನೆ ನೀಡಿದ ಹಾಸನ ಎಸ್ಪಿ ಹರಿರಾಮ ಶಂಕರ್, ಅಪಘಾತ ನಡೆದಾಗ ಆರಗ ಜ್ಞಾನೇಂದ್ರರಿಗೆ ಮಾಹಿತಿ ಇರಲಿಲ್ಲ. ಮಾಹಿತಿ ತಿಳಿದ ತಕ್ಷಣವೇ ನನಗೆ ಕರೆ ಮಾಡಿದ್ದಾರೆ. ರಮೇಶ್ ಕುಟುಂಬಸ್ಥರ ಮಾಹಿತಿಯನ್ನು ಕಲೆ ಹಾಕುವಂತೆ ಸೂಚನೆ ನೀಡಿದ್ದಾರೆ. ಮಾತ್ರವಲ್ಲದೇ ಮೃತ ರಮೇಶ್ ಕುಟುಂಬಕ್ಕೆ ಶೀಘ್ರದಲ್ಲಿಯೇ ಪರಿಹಾರ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಪಘಾತ ನಡೆದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಗಂಡಸಿ ಠಾಣಾ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.