ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಹೈಮಾಂಡ್‌ಗೆ ದೊಡ್ಡ ಹೊಡೆತ ಕೊಟ್ಟಿದೆ. ಬಹುಮತ ನಿರೀಕ್ಷೆಯಲ್ಲಿದ್ದ ಮಹಾಘಟ್‌ಬಂಧನ್‌ಗೆ ಎನ್‌ಡಿಎ ಮೈತ್ರಿಕೂಟ ಮತ ಕ್ರಾಂತಿ ಮೂಲಕ ಬಿಗ್ ಶಾಕ್ ಕೊಟ್ಟಿದೆ. ಇನ್ನು ಬಿಹಾರದಲ್ಲಿ ಕಾಂಗ್ರೆಸ್ ಕೇವಲ ಆರು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದ್ದು, ಹೈಕಮಾಂಡ್ ನಾಯಕರಿಗೆ ತೀವ್ರ ಮುಖಭಂಗವಾಗಿದೆ.

ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಮೇಲೆ ಪರಿಣಾಮ ಬೀರಲಿದೆ. ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದ್ದ ನವೆಂಬರ್ ಕ್ರಾಂತಿಗೆ ಬಿಹಾರ ಚುನಾವಣೆಯ ಫಲಿತಾಂಶ ಪರೋಕ್ಷವಾಗಿ ಬ್ರೇಕ್ ಹಾಕಿದೆ. ರಾಷ್ಟ್ರ ಮಟ್ಟದಲ್ಲೇ ಕಾಂಗ್ರೆಸ್ ದುರ್ಬಲವಾಗುತ್ತಿರುವಾಗ ಕರ್ನಾಟಕದ ನಾಯಕತ್ವ ವಿಚಾರಕ್ಕೆ ಹೈಮಾಂಡ್ ಮಧ್ಯಪ್ರವೇಶಿಸುವುದು ಬಹುತೇಕ ಅನುಮಾನವಾಗಿದೆ.

ಸದ್ಯ ಸಂಪೂರ್ಣ ದೇಶದಲ್ಲಿ ಕರ್ನಾಟಕ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ದಕ್ಷಿಣ ಭಾರತದಲ್ಲಿ ಸಿದ್ದರಾಮಯ್ಯ ಬಲಿಷ್ಠ ರಾಜಕಾರಣಿಯಾಗಿದ್ದಾರೆ. ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಪ್ರಭಾವ ಬೀರಬಲ್ಲ ನಾಯಕರಾಗಿರುವ ಸಿದ್ದರಾಮಯ್ಯ ಅವರಿಗೆ ಜನಬಲ ಪಕ್ಷೇತರವಾಗಿದೆ. ಕಾಂಗ್ರೆಸ್ ಮಾತ್ರವಲ್ಲ ಇತರ ಪಕ್ಷದ ಕಾರ್ಯಕರ್ತರು ಕೂಡ ಮೆಚ್ಚಬಲ್ಲ ನಾಯಕ ಸಿದ್ದರಾಮಯ್ಯ. ಒಂದು ವೇಳೆ ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕೈಯಲ್ಲಿರುವ ಕ್ಷೇತ್ರಗಳು ಕೈತಪ್ಪುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎನ್ನುವ ಅಭಿಪ್ರಾಯಗಳು ಜೋರಾಗಿಯೇ ಕೇಳಿ ಬರುತ್ತಿದೆ.











